ದೊಡ್ಡಬಳ್ಳಾಪುರ : ಜೆಡಿಎಸ್ ( JDS party ) ಒಂದು ಪಕ್ಷವೇ ಅಲ್ಲ. ಶಿರಾ, ಆರ್ ಆರ್ ನಗರ ಉಪಚುನಾವಣೆಯಲ್ಲಿ ಜೆಡಿಎಸ್ ಆಟಕ್ಕೆ ಉಂಟು ಲೆಕ್ಕಕ್ಕೆ ಇಲ್ಲ ಎಂದು ಹೇಳಿಕೆ ನೀಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ( Siddaramaiah )ವಿರುದ್ಧ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರು ವಾಗ್ದಾಳಿ ನಡೆಸಿದ್ದಾರೆ. ಶುಕ್ರವಾರ ದೇವೇಗೌಡರು ದೊಡ್ಡಬಳ್ಳಾಪುರದಲ್ಲಿ ಬೆಂಗಳೂರು ಪದವೀಧರ ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಚುನಾವಣೆ ಅಂಗವಾಗಿ ಶಿಕ್ಷಕರ ಜೊತೆ ನಡೆದ ಸಮಾಲೋಚನೆ ಸಭೆ ನಡೆಸಿದರು.
ಈ ವೇಳೆ ಸಿದ್ದರಾಮಯ್ಯ ಹೇಳಿಕೆ ಕುರಿತು ಮಾತನಾಡಿದ ಹೆಚ್.ಡಿ.ಡಿ, ಜೆಡಿಎಸ್ ಒಂದು ಪಕ್ಷವೇ ಅಲ್ಲ ಎಂದು ಲಘುವಾಗಿ ಮಾತನಾಡುವರು ತಾವು ಮೊದಲು ಎಲ್ಲಿಂದ ಬೆಳೆದು ಬಂದವರು.
ಯಾವ ಪಕ್ಷದಲ್ಲಿ ಗುರುತಿಸಿಕೊಂಡು ಅಧಿಕಾರ ಅನುಭವಿಸಿದ್ದಾರೆ ಎಂದು ತಿಳಿದು ಮಾತನಾಡಲಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಗುಡುಗಿದರು.
ಇದನ್ನೂ ಓದಿ : ಅ.25ಕ್ಕೆ `ಕೈ’ ಹಿಡೀತಾರೆ ಶರತ್ ಬಚ್ಚೇಗೌಡ: `ಹಸ್ತದ ಜತೆ ಶರತ್’ ಫೋಟೋ ವೈರಲ್
ಬಳಿಕ ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿ, ಶಿಕ್ಷಕರ ನೋವು ನನಗೆ ಅರ್ಥವಾಗುತ್ತದೆ. ಇಂದಿನ ಬಂಡ ಸರ್ಕಾರಕ್ಕೆ ಯಾರ ಕಷ್ಟವೂ ಅರ್ಥವಾಗುವುದಿಲ್ಲ. ಇದೊಂದು ಬಂಡ ಸರ್ಕಾರ ಎಂದು ಟೀಕಿಸಿದರು.
ಪ್ರಾದೇಶಿಕ ಪಕ್ಷಕ್ಕೆ ಶಕ್ತಿ ಇದೆ ಎನ್ನುವುದನ್ನು ಪಕ್ಕದ ತಮಿಳುನಾಡು, ಆಂಧ್ರಪ್ರದೇಶದ, ತೆಲಂಗಾಣ ಸೇರಿ ಹಲವು ರಾಜ್ಯಗಳಲ್ಲಿ ಅಲ್ಲಿನ ಜನತೆ ತೋರಿಸಿದ್ದಾರೆ. ರಾಜ್ಯದಲ್ಲಿ ನಮ್ಮ ಪಕ್ಷವನ್ನು ಉಳಿಸುವುದು ಜನರ ಕೈಯಲ್ಲಿದೆ ಎಂದರು.
ಕುಮಾರಸ್ವಾಮಿ ಹಾಗೂ ಬಸವರಾಜ ಹೊರಟ್ಟಿ ಶಿಕ್ಷಕರ ಪರವಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಈ ಬಾರಿ ಪ್ರಾಮಾಣಿಕ ವ್ಯಕ್ತಿಯನ್ನು ಆಯ್ಕೆ ಮಾಡಬೇಕಿದೆ. ಅದು ಶಿಕ್ಷಕರ ಚುನಾವಣೆ ಮುಖಾಂತರ ರಾಜ್ಯಕ್ಕೆ ತಿಳಿಯಲಿದೆ.
ಹೀಗಾಗಿ ಈ ಬಾರಿ ಈ ಕ್ಷೇತ್ರದಿಂದ ನಮ್ಮ ಅಭ್ಯರ್ಥಿಯನ್ನು ವಿಧಾನಪರಿಷತ್ ಗೆ ಆಯ್ಕೆ ಮಾಡಿ ಕಳುಹಿಸಿ ಎಂದು ದೇವೇಗೌಡರು ಮನವಿ ಮಾಡಿದರು.
ಇದನ್ನೂ ಓದಿ : ಸರ್ಕಾರ ವಿದ್ಯಾಗಮ ನಿಲ್ಲಿಸಬೇಕು, ಜೀವ ಇದ್ದರೇ ಜೀವನ : ಹೆಚ್.ಡಿ.ಕುಮಾರಸ್ವಾಮಿ