* ಜಿಯೋ ಐಪಿಒ ಸಬ್ ಸ್ಕ್ರೈಬ್ ಮಾಡಲು ಅಂತಿಮ ದಿನ, ರಾತ್ರಿ 7ರ ತನಕ ಬಿಡ್ಡಿಂಗ್ ಅವಕಾಶ
* * ₹30,213 ಕೋಟಿ ಮೌಲ್ಯದ ಐಪಿಒ 6.89 ಪಟ್ಟು ಸಬ್ ಸ್ಕ್ರೈಬ್; QIB ವಿಭಾಗಕ್ಕೆ 14.38 ಪಟ್ಟು ಬೇಡಿಕೆ
1 ಕೋಟಿ ಅರ್ಜಿಗಳ ಗಡಿ ದಾಟಿ ಜಿಯೋ ಐಪಿಒದಿಂದ ಇತಿಹಾಸ ಸೃಷ್ಟಿ
ಮುಂಬೈ, – ಭಾರತದ ಅತಿದೊಡ್ಡ ಐಪಿಒ ಹೊಸ ದಾಖಲೆ ನಿರ್ಮಿಸಿದೆ. ಭಾರತೀಯ ಷೇರು ಮಾರುಕಟ್ಟೆಯ ಇತಿಹಾಸದಲ್ಲಿ ಮೊದಲ ಬಾರಿಗೆ, ಒಂದು ಐಪಿಒಗೆ 1 ಕೋಟಿಗೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಜಿಯೋ ಪ್ಲಾಟ್‌ಫಾರ್ಮ್ಸ್‌ನ ₹30,213 ಕೋಟಿ ಮೌಲ್ಯದ ಸಾರ್ವಜನಿಕ ಇಶ್ಯೂ, ಬಿಡ್ಡಿಂಗ್‌ನ ಮೂರನೇ ಮತ್ತು ಕೊನೆಯ ದಿನವಾದ ಶುಕ್ರವಾರ ಈ ಮೈಲುಗಲ್ಲನ್ನು ತಲುಪಿತು. ಶುಕ್ರವಾರ ಮಧ್ಯಾಹ್ನ 12 ಗಂಟೆ ಹೊತ್ತಿಗೆ ಐಪಿಒಗೆ 1,00,15,118 ಅರ್ಜಿಗಳು ಬಂದಿದ್ದು, 6.89 ಪಟ್ಟು ಸಬ್ ಸ್ಕ್ರೈಬ್ ಆಯಾಗಿದೆ. ಅರ್ಹ ಸಾಂಸ್ಥಿಕ ಖರೀದಿದಾರರ (QIB) ವಿಭಾಗದಿಂದ 14.38 ಪಟ್ಟು ಬೇಡಿಕೆ ಬಂದಿದೆ.
ಈ ಹಿಂದಿನ ದಾಖಲೆ ವಾರೀ ಎನರ್ಜೀಸ್ ಹೆಸರಿನಲ್ಲಿತ್ತು. 2024ರ ಅಕ್ಟೋಬರ್ ತಿಂಗಳಲ್ಲಿ ಅದರ ಐಪಿಒಗೆ 97.3 ಲಕ್ಷ ಅರ್ಜಿಗಳು ಬಂದಿದ್ದವು. ಜಿಯೋ ಈಗ ಆ ಗಡಿಯನ್ನು ಮೀರಿದೆ. ಜಿಯೋ ಐಪಿಒಗೆ ಮೊದಲ ದಿನ ಸುಮಾರು 30.5 ಲಕ್ಷ ಅರ್ಜಿಗಳು ಬಂದಿದ್ದವು, ಎರಡನೇ ದಿನದ ಅಂತ್ಯಕ್ಕೆ ಈ ಸಂಖ್ಯೆ 75 ಲಕ್ಷ ದಾಟಿತ್ತು. ಶುಕ್ರವಾರ ಅದು ಐತಿಹಾಸಿಕ 1 ಕೋಟಿ ಗಡಿಯನ್ನು ದಾಟಿತು.
ಎಲ್ಲ ಪ್ರಮುಖ ಹೂಡಿಕೆದಾರರ ವರ್ಗಗಳಲ್ಲಿ ಬೇಡಿಕೆ ಬಲವಾಗಿ ಮುಂದುವರಿದಿದೆ. ಸಾಂಸ್ಥಿಕೇತರ ಹೂಡಿಕೆದಾರರ (NII) ವಿಭಾಗವು 9.38 ಪಟ್ಟು ಬೇಡಿಕೆ ಪಡೆದರೆ, ರೀಟೇಲ್ ವಿಭಾಗವು 2.07 ಪಟ್ಟು ಸಬ್ ಸ್ಕ್ರಿಪ್ಷನ್ ಪಡೆದಿದೆ. ಉದ್ಯೋಗಿಗಳ ವಿಭಾಗವು 2.48 ಪಟ್ಟು, ಅರ್ಹ ರಿಲಯನ್ಸ್ ಇಂಡಸ್ಟ್ರೀಸ್ ಷೇರುದಾರರಿಗೆ ಮೀಸಲಾದ ವಿಭಾಗವು 5.68 ಪಟ್ಟು ತಲುಪಿದೆ.
ಎಲ್ಲ ಪ್ರಮುಖ ಹೂಡಿಕೆದಾರರ ವರ್ಗಗಳು ಈಗ ಸಂಪೂರ್ಣವಾಗಿ ಬೇಡಿಕೆ ಪಡೆದುಕೊಂಡಿವೆ. ಜಿಯೋ ಐಪಿಒ ಅಕ್ಟೋಬರ್ 21ರಂದು ಆರಂಭವಾಗಿ, ಮೊದಲ ದಿನ 3.16 ಪಟ್ಟು ಸಬ್ ಸ್ಕ್ರಿಪ್ಷನ್ ಪಡೆಯಿತು. ಎರಡನೇ ದಿನದ ಅಂತ್ಯಕ್ಕೆ 5.57 ಪಟ್ಟಿಗೆ ಏರಿತು.
ಅರ್ಜಿ ಸಲ್ಲಿಸಲು ಅಕ್ಟೋಬರ್ 23, ಶುಕ್ರವಾರವೇ ಕೊನೆಯ ದಿನವಾಗಿದ್ದು, ಬಿಡ್ಡಿಂಗ್ ರಾತ್ರಿ 7 ಗಂಟೆಯವರೆಗೆ ತೆರೆದಿರುತ್ತದೆ. ಹೂಡಿಕೆದಾರರಿಗೆ ಇನ್ನೂ ಭಾಗವಹಿಸಲು ಸಮಯವಿದ್ದು, ಇಶ್ಯೂ ಮುಕ್ತಾಯವಾಗುವ ಮೊದಲು ಸಬ್ ಸ್ಕ್ರಿಪ್ಷನ್ ಮತ್ತು ಅರ್ಜಿಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು







