ತಿರುವನಂತಪುರಂ: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಎಂ.ಟಿ. ವಾಸುದೇವನ್ ನಾಯರ್ (91) ಇಹಲೋಕ ತ್ಯಜಿಸಿದ್ದಾರೆ.
ವಾಸುದೇವನ್ ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಕೋಯಿಕ್ಕೋಡ್ ಬೇಬಿ ಮೆಮೋರಿಯಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ರಾತ್ರಿ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ಹೇಳಿವೆ.
ಮೃತರು ಪತ್ನಿ ಕಲಾಮಂಡಲಂ ಸರಸ್ವತಿ ಹಾಗೂ ಮಗಳಾದ ಅಶ್ವತಿಯನ್ನು ಅಗಲಿದ್ದಾರೆ. ಎಂಟಿ ನಿಧನಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Pinarayi Vijayan), ಪ್ರಧಾನಿ ನರೇಂದ್ರ ಮೋದಿ (PM Narendra Modi) ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಎಂಟಿ ವಾಸುದೇವನ್ ನಾಯರ್ ಅವರಿಗೆ ಗೌರವ ಸೂಚಿಸುವುದಕ್ಕಾಗಿ ಕೇರಳ ಸರ್ಕಾರ ಡಿ. 26 ಮತ್ತು 27 ರಂದು ಅಧಿಕೃತ ಶೋಕಾಚರಣೆ ಘೋಷಿಸಿದೆ. ಸಣ್ಣ ಕಥೆ, ಚಿತ್ರಕಥೆ, ನಾಟಕ, ಕಾದಂಬರಿ, ಮಕ್ಕಳ ಸಾಹಿತ್ಯ, ಪ್ರವಾಸ ಕಥನ, ಲೇಖನ ಹೀಗೆ ಬರವಣಿಗೆಯ ಎಲ್ಲಾ ಪ್ರಕಾರಗಳಲ್ಲೂ ವಾಸುದೇವನ್ ನಾಯರ್ ಸಾಹಿತ್ಯ ರಚಿಸಿದ್ದರು.
1995 ರಲ್ಲಿ ಜ್ಞಾನಪೀಠ, 2005ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಅಲ್ಲದೇ, ಹಲವಾರು ಪ್ರಶಸ್ತಿಗಳನ್ನು ಕೂಡ ಅವರು ಪಡೆದಿದ್ದರು.