ಸೇನಾ ಟ್ರಕ್ ರಸ್ತೆಯಿಂದ ಸ್ಕಿಡ್ ಆಗಿ ಕಂದಕಕ್ಕೆ ಬಿದ್ದಿದೆ. ಚಲಿಸುತ್ತಿದ್ದ ಈ ಟ್ರಕ್ನಲ್ಲಿ ಯೋಧರು ಪ್ರಯಾಣಿಸುತ್ತಿದ್ದು, ಈ ದುರ್ಘಟನೆಯಲ್ಲಿ ಕರ್ನಾಟಕದ ಯೋಧ ಸೇರಿ ಐವರು ಮೃತ ಪಟ್ಟಿದ್ದಾರೆ. ಇನ್ನು ಅನೇಕರಿಗೆ ಗಾಯಗಳಾಗಿವೆ. ಈ ಕುರಿತಂತೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಜಮ್ಮು ಮತ್ತು ಕಾಶ್ಮೀರ.. ಪ್ರವಾಸಿಗರ ಸ್ವರ್ಗ ಎಂದರೂ ಸಹ ಇಲ್ಲಿರುವ ರಸ್ತೆಗಳು ಅಷ್ಟೇ ಅಪಾಯಕಾರಿ.. ಇನ್ನೂ ಇದೇ ರಸ್ತೆಯು ನಿನ್ನೆ ನಮ್ಮ ದೇಶದ ಹೆಮ್ಮೆಯ ಯೋಧರ ಪ್ರಾಣವನ್ನ ಬಲಿ ಪಡೆದಿದೆ.. ನಿನ್ನೆ ಸಂಜೆ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಬಳಿ ಯೋಧರು ಪ್ರಯಾಣಿಸುತ್ತಿದ್ದ ವಾಹನವು ರಸ್ತೆಯಿಂದ ಸ್ಕಿಡ್ ಆಗಿ ಕಂದಕಕ್ಕೆ ಉರುಳಿದೆ.
ಪೂಂಚ್ ಜಿಲ್ಲೆಯ ಮೆಂಧರ್ ಪ್ರದೇಶದ ಬಲ್ನೋಯಿ ಪ್ರದೇಶದಲ್ಲಿ ಸೇನಾ ವಾಹನವೊಂದು ರಸ್ತೆಯ ತಿರುವಿನಲ್ಲಿ ಕಂದಕಕ್ಕೆ ಬಿದ್ದಿದೆ. ಸೇನಾ ವಾಹನಲ್ಲಿ 18 ಯೋಧರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಇದರಲ್ಲಿ 5 ಮಂದಿ ಹುತಾತ್ಮರಾಗಿದ್ದಾರೆ. ಉಳಿದವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಘಟನಾ ಸ್ಥಳಕ್ಕೆ ಸೇನಾಧಿಕಾರಿಗಳು ಆಗಮಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ.
ಈ ದುರಂತದಲ್ಲಿ ಕರ್ನಾಟಕ ಮೂವರು ಯೋಧರು ಹುತಾತ್ಮರಾಗಿದ್ದಾರೆ. ಬೆಳಗಾವಿ ತಾಲೂಕಿನ ಸಾಂಬ್ರಾ ಗ್ರಾಮದ ದಯಾನಂದ್, ಉಡುಪಿ ಜಿಲ್ಲೆಯ ಅನೂಪ್, ಬಾಗಲಕೋಟೆಯ ಮಹೇಶ್ ಹುತಾತ್ಮರಾಗಿದ್ದಾರೆ. ಈ ಅಪಘಾತಕ್ಕೆ ಕಾರಣ ಏನು ಎಂಬುದು ಇದುವರೆಗೆ ಯಾವುದೇ ಮಾಹಿತಿ ತಿಳಿದುಬಂದಿಲ್ಲ. ಆದರೆ ರಸ್ತೆಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಸಂಪೂರ್ಣ ತನಿಖೆಯಿಂದ ಹೆಚ್ಚಿನ ಮಾಹಿತಿ ತಿಳಿಯಬೇಕಿದೆ.








