ಲಕ್ನೋ: ಉತ್ತರ ಪ್ರದೇಶದ ರಾಜಕೀಯ ಅಖಾಡದಲ್ಲಿ ಈಗ ಹೊಸ ಸಂಚಲನ ಶುರುವಾಗಿದೆ. 2027ರ ವಿಧಾನಸಭಾ ಚುನಾವಣೆಗೆ ಇನ್ನು ಸಾಕಷ್ಟು ಸಮಯವಿದ್ದರೂ, ವಿರೋಧ ಪಕ್ಷಗಳು ಈಗಲೇ ಮೈತ್ರಿ ಮಂತ್ರ ಜಪಿಸಲು ಆರಂಭಿಸಿವೆ. ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ಸಮಾಜವಾದಿ ಪಾರ್ಟಿ ನಾಯಕ ಅಖಿಲೇಶ್ ಯಾದವ್ ಅವರಿಗೆ ಬಹಿರಂಗವಾಗಿ ಮೈತ್ರಿ ಆಫರ್ ನೀಡಿದ್ದು, ಇದು ಬಿಜೆಪಿಯ ಕಟು ಟೀಕೆಗೆ ಗುರಿಯಾಗಿದೆ.
ನಮಗೆ ಬಿಜೆಪಿ ಸೋಲಿಸುವುದೇ ಗುರಿ: ಓವೈಸಿ ಸ್ಪಷ್ಟನೆ
ಮೊರಾದಾಬಾದ್ನಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಹೈದರಾಬಾದ್ ಸಂಸದ ಓವೈಸಿ, ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುವುದು ನಮಗೆ ಇಷ್ಟವಿಲ್ಲ. ಮತಗಳ ವಿಭಜನೆಯನ್ನು ತಡೆಯಲು ನಾವು ಸಮಾಜವಾದಿ ಪಾರ್ಟಿಯೊಂದಿಗೆ ಕೈಜೋಡಿಸಲು ಸಿದ್ಧರಿದ್ದೇವೆ. ಚುನಾವಣೆ ಮುಗಿದ ಮೇಲೆ ಫಲಿತಾಂಶ ನೋಡಿ ಅಳುವ ಬದಲು, ಈಗಲೇ ಮಾತುಕತೆ ನಡೆಸಿ ಒಮ್ಮತಕ್ಕೆ ಬರುವುದು ಸೂಕ್ತ ಎಂದು ಅಖಿಲೇಶ್ ಯಾದವ್ ಅವರಿಗೆ ನೇರ ಸಂದೇಶ ರವಾನಿಸಿದ್ದಾರೆ. ಮುಸ್ಲಿಂ ಮತಗಳ ಧ್ರುವೀಕರಣದ ಮೂಲಕ ಬಿಜೆಪಿಗೆ ತಡೆಯೊಡ್ಡಲು ಓವೈಸಿ ಈ ಚಾಣಾಕ್ಷ ನಡೆ ಇಟ್ಟಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಬಿಜೆಪಿಯಿಂದ ತುಷ್ಟೀಕರಣ ರಾಜಕಾರಣದ ಟೀಕೆ
ಓವೈಸಿ ಅವರ ಈ ಮೈತ್ರಿ ಪ್ರಸ್ತಾಪವನ್ನು ಬಿಜೆಪಿ ತೀವ್ರವಾಗಿ ಹಾಸ್ಯ ಮಾಡಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ಶಹಜಾದ್ ಪೂನಾವಾಲಾ, ಓವೈಸಿ ಅವರು ಅಖಿಲೇಶ್ ಅವರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಅಖಿಲೇಶ್ ಮತ್ತು ಓವೈಸಿ ನಡುವೆ ಇಷ್ಟು ದಿನ ಕೌನ್ ಬನೇಗಾ ಬಡಾ ಭಾಯಿಜಾನ್ ಅಂದರೆ ಯಾರು ದೊಡ್ಡ ತುಷ್ಟೀಕರಣಗಾರ ಎಂಬ ಸ್ಪರ್ಧೆ ನಡೆಯುತ್ತಿತ್ತು. ಈಗ ಇಬ್ಬರೂ ಸೇರಿ ಭಾಯಿಜಾನ್ ಕಾಂಬಿನೇಷನ್ ಮಾಡಲು ಹೊರಟಿದ್ದಾರೆ. ಇವರಿಬ್ಬರೂ ಒಂದೇ ನಾಣ್ಯದ ಎರಡು ಮುಖಗಳು ಎಂದು ಪೂನಾವಾಲಾ ಕಿಡಿಕಾರಿದ್ದಾರೆ.
2027ರ ಚುನಾವಣೆಗೆ ಈಗಲೇ ರಣತಂತ್ರ
ಉತ್ತರ ಪ್ರದೇಶದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಾರ್ಟಿ ಪ್ರಬಲ ಪೈಪೋಟಿ ನೀಡಿದ್ದರೂ ಅಧಿಕಾರ ಹಿಡಿಯಲು ವಿಫಲವಾಗಿತ್ತು. ಆಗ ಓವೈಸಿ ಅವರ ಪಕ್ಷ ಸ್ಪರ್ಧಿಸಿದ್ದರಿಂದ ಮುಸ್ಲಿಂ ಮತಗಳು ವಿಭಜನೆಯಾಗಿ ನಮಗೆ ನಷ್ಟವಾಯಿತು ಎಂಬುದು ಅಖಿಲೇಶ್ ಯಾದವ್ ಅವರ ಆರೋಪವಾಗಿತ್ತು. ಈಗ ಓವೈಸಿ ಅವರೇ ಮೈತ್ರಿಗೆ ಮುಂದಾಗಿರುವುದು ಅಖಿಲೇಶ್ ಅವರಿಗೆ ಒಂದು ಕಡೆ ವರದಾನವಾದರೆ, ಮತ್ತೊಂದು ಕಡೆ ಬಿಜೆಪಿ ಇದನ್ನು ಹಿಂದೂ ವಿರೋಧಿ ಅಥವಾ ತುಷ್ಟೀಕರಣದ ಮೈತ್ರಿ ಎಂದು ಬಿಂಬಿಸಿ ಲಾಭ ಮಾಡಿಕೊಳ್ಳುವ ಸಾಧ್ಯತೆಯಿದೆ. ಒಟ್ಟಿನಲ್ಲಿ ಯುಪಿ ರಾಜಕಾರಣದಲ್ಲಿ ಈ ಫ್ರೆಂಡ್ ರಿಕ್ವೆಸ್ಟ್ ಸಾಕಷ್ಟು ಧೂಳೆಬ್ಬಿಸಿರುವುದಂತೂ ಸುಳ್ಳಲ್ಲ.







