ಧಾರವಾಡ: ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸುತ್ತಿರುವ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷಗಳ (ಆಪ್) ನೈತಿಕತೆಯನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ತೀವ್ರವಾಗಿ ಪ್ರಶ್ನಿಸಿದ್ದಾರೆ. ಪಂಜಾಬ್ ಮತ್ತು ಕರ್ನಾಟಕದಲ್ಲಿ ನಡೆದಿರುವ ಶಿಕ್ಷಣ ಮತ್ತು ನೇಮಕಾತಿ ಹಗರಣಗಳನ್ನು ಉಲ್ಲೇಖಿಸಿರುವ ಅವರು, ವಿರೋಧ ಪಕ್ಷಗಳು ಮೊದಲು ತಮ್ಮ ಆಡಳಿತವಿರುವ ರಾಜ್ಯಗಳಲ್ಲಿನ ಭ್ರಷ್ಟಾಚಾರಕ್ಕೆ ಹೊಣೆ ಹೊರಲಿ ಎಂದು ಆಗ್ರಹಿಸಿದ್ದಾರೆ.
ಪಂಜಾಬ್ ಆಪ್ ಸರ್ಕಾರದ ಬಣ್ಣ ಬಯಲು
ಧಾರವಾಡದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಪ್ರಹ್ಲಾದ ಜೋಶಿ, ಪಂಜಾಬ್‌ನಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾದ ಸಂದರ್ಭದಲ್ಲಿ ಅಲ್ಲಿನ ಆಮ್ ಆದ್ಮಿ ಪಕ್ಷದ ಉಪಮುಖ್ಯಮಂತ್ರಿಗಳು ಶಿಕ್ಷಣ ಸಚಿವರ ರಾಜೀನಾಮೆ ಪಡೆಯುವುದಾಗಿ ಅಬ್ಬರದ ಘೋಷಣೆ ಮಾಡಿದ್ದರು. ಆ ಕುರಿತ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆಡೆ ಹರಿದಾಡುತ್ತಿದೆ. ಆದರೆ ವಾಸ್ತವದಲ್ಲಿ ಅಲ್ಲಿನ ಶಿಕ್ಷಣ ಸಚಿವರು ರಾಜೀನಾಮೆ ನೀಡಿದರಾ? ಎಂದು ಪ್ರಶ್ನಿಸಿದರು. ಮಾತುಗಳ ಮೂಲಕ ಕ್ರಾಂತಿ ಮಾಡುವ ಆಪ್ ನಾಯಕರು ಕೃತಿಯಲ್ಲಿ ಯಾಕೆ ಹಿಂದೆ ಸರಿಯುತ್ತಿದ್ದಾರೆ ಎಂದು ಅವರು ಕುಟುಕಿದರು.
ಕರ್ನಾಟಕದ ಕೆಪಿಎಸ್‌ಸಿ ಕರ್ಮಕಾಂಡ
ಕರ್ನಾಟಕದಲ್ಲಿ ಸದ್ಯ ಸದ್ದು ಮಾಡುತ್ತಿರುವ ಕೆಪಿಎಸ್‌ಸಿ ನೇಮಕಾತಿ ಅಕ್ರಮದ ಬಗ್ಗೆಯೂ ಧ್ವನಿ ಎತ್ತಿದ ಜೋಶಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಶಿಕ್ಷಣ ಮತ್ತು ಉದ್ಯೋಗದ ಕ್ಷೇತ್ರದಲ್ಲಿ ಒಂದಿಲ್ಲೊಂದು ಅವಾಂತರಗಳು ನಡೆಯುತ್ತಲೇ ಇವೆ. ಕೆಪಿಎಸ್‌ಸಿಯಲ್ಲಿನ ಭ್ರಷ್ಟಾಚಾರದ ಬಗ್ಗೆ ಇಲ್ಲಿನ ಸರ್ಕಾರಕ್ಕೆ ಕನಿಷ್ಠ ಜವಾಬ್ದಾರಿಯಿಲ್ಲವೇ? ಇಲ್ಲಿನ ಸಚಿವರು ಯಾಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದರು. ಜನರ ಹಿತ ಕಾಯುವಲ್ಲಿ ವಿಫಲವಾಗಿರುವ ಕಾಂಗ್ರೆಸ್ ನಾಯಕರಿಗೆ ಕೇಂದ್ರ ಸರ್ಕಾರವನ್ನು ಟೀಕಿಸುವ ಅರ್ಹತೆಯಿಲ್ಲ ಎಂದರು.
ಹಳೆಯ ಹಗರಣಗಳ ನೆನಪಿಸಿದ ಸಚಿವರು
ಕಾಂಗ್ರೆಸ್ ಅವಧಿಯಲ್ಲಿ ನಡೆದ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳನ್ನು ನೆನಪಿಸಿದ ಸಚಿವರು, 2017ರಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರವಿದ್ದಾಗ ಪಿಯುಸಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿತ್ತು. ಅಂದು ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡಿದಾಗ ಕಾಂಗ್ರೆಸ್ ನಾಯಕರು ಯಾವ ನೈತಿಕತೆ ತೋರಿದ್ದರು? ನಾನು ಹಳೆಯ ವಿಚಾರಗಳನ್ನು ಪ್ರಸ್ತಾಪಿಸಿ ಯಾವುದೇ ಶ್ರೇಯಸ್ಸು ಪಡೆಯಲು ಬಯಸುವುದಿಲ್ಲ. ಆದರೆ ಅಂದಿನಿಂದ ಇಂದಿನವರೆಗೂ ಪತ್ರಿಕೆ ಸೋರಿಕೆ ಪ್ರಕರಣಗಳಲ್ಲಿ ಕಾಂಗ್ರೆಸ್ ನಾಯಕರು ದ್ವಂದ್ವ ನಿಲುವು ತಳೆಯುತ್ತಿದ್ದಾರೆ ಎಂದು ಕಿಡಿಕಾರಿದರು.
ತಮ್ಮ ಸರ್ಕಾರದ ವೈಫಲ್ಯಗಳನ್ನು ಮುಚ್ಚಿ ಹಾಕಲು ವಿರೋಧ ಪಕ್ಷಗಳು ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿವೆ. ರಾಜಕೀಯ ಲಾಭಕ್ಕಾಗಿ ವಿದ್ಯಾರ್ಥಿಗಳನ್ನು ಬಳಸಿಕೊಳ್ಳುವ ಬದಲು, ಮೊದಲು ತಮ್ಮ ಆಡಳಿತದಲ್ಲಿರುವ ರಾಜ್ಯಗಳ ವ್ಯವಸ್ಥೆಯನ್ನು ಸುಧಾರಿಸಲಿ ಎಂದು ಪ್ರಹ್ಲಾದ ಜೋಶಿ ಕಿವಿಮಾತು ಹೇಳಿದರು.








