JP Nadda : ಎರಡನೇ ಅವಧಿಗೆ BJP ಅಧ್ಯಕ್ಷರಾಗಿ ಆಯ್ಕೆಯಾದ ಜೆಪಿ ನಡ್ಡಾ…
ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ಎರಡನೇ ದಿನದಂದು ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಅವರ ಅಧಿಕಾರವಧಿಯನ್ನ ಜೂನ್ 2024 ರವರೆಗೆ ವಿಸ್ತರಿಸಿ ಅನುಮೋದನೆ ನೀಡಲಾಗಿದೆ. ನಡ್ಡಾ ಅವರ ಪ್ರಸ್ತುತ ಅವಧಿ ಜನವರಿ 20 ರಂದು ಕೊನೆಗೊಳ್ಳುತ್ತಿತ್ತು. ಈಗ ಲೋಕಸಭೆ ಚುನಾವಣೆವರೆಗೂ ಪಕ್ಷದ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ.
ಗೃಹ ಸಚಿವ ಅಮಿತ್ ಶಾ ಅವರು ಜೆಪಿ ನಡ್ಡಾ ಅವರಿಗೆ ವಿಸ್ತರಣೆಯನ್ನ ಘೋಷಿಸಿದ್ದಾರೆ. ಎಲ್‌ಕೆ ಅಡ್ವಾಣಿ ಮತ್ತು ಅಮಿತ್ ಶಾ ನಂತರ ಸತತ ಎರಡನೇ ಬಾರಿಗೆ ಅಧ್ಯಕ್ಷರಾಗಿರುವ ಮೂರನೇ ಬಿಜೆಪಿ ನಾಯಕರಾಗಿದ್ದಾರೆ. ರಾಜನಾಥ್ ಸಿಂಗ್ ಕೂಡ ಎರಡು ಬಾರಿ ಪಕ್ಷದ ಅಧ್ಯಕ್ಷರಾಗಿದ್ದರೂ ಅವರ ಅಧಿಕಾರಾವಧಿ ನಿರಂತರವಾಗಿರಲಿಲ್ಲ.
ಜೆಪಿ ನಡ್ಡಾ ಅವರು ಜೂನ್ 2019 ರಲ್ಲಿ ಪಕ್ಷದ ಕಾರ್ಯಾಧ್ಯಕ್ಷರಾದರು. ಇದರ ನಂತರ, 20 ಜನವರಿ 2020 ರಂದು, ಅವರನ್ನು ಪೂರ್ಣ ಸಮಯದ ಅಧ್ಯಕ್ಷರನ್ನಾಗಿ ಮಾಡಲಾಯಿತು. ಅವರ ಆಯ್ಕೆ ಅವಿರೋಧವಾಗಿತ್ತು. ಈ ಹಿಂದೆ, ಮಾಜಿ ಅಧ್ಯಕ್ಷ ಅಮಿತ್ ಶಾ ಅವರಿಗೂ 2019 ರ ಲೋಕಸಭೆ ಚುನಾವಣೆಯವರೆಗೆ ವಿಸ್ತರಣೆಯನ್ನು ನೀಡಲಾಯಿತು.
ಈ ವರ್ಷ ದೇಶದ 9 ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಇದೆ. ಅದೇ ಸಮಯದಲ್ಲಿ, ಮೇ ಮತ್ತು ಜೂನ್ ನಡುವೆ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆಗಳು ನಡೆಯುವ ನಿರೀಕ್ಷೆಯಿದೆ. ಈ ಮೂಲಕ 10 ವಿಧಾನಸಭಾ ಚುನಾವಣೆ ಹಾಗೂ ಮುಂದಿನ ವರ್ಷ 2024ರ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ನಡ್ಡಾ ಅವರಿಗೆ ಈ ಅವಧಿ ವಿಸ್ತರಣೆ ಮಾಡಲಾಗಿದೆ.
JP Nadda to be BJP president till June 2024