ನಟ ಸೂರ್ಯ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟನಂತರ ಬಣ್ಣದ ಲೋಕದಿಂದ ದೂರ ಇದ್ದ ಜ್ಯೋತಿಕಾ, ದೀಘ್ರಕಾಲದ ಬ್ರೇಕ್ ಬಳಿಕ ಮತ್ತೆ ಚಿತ್ರರಂಗಕ್ಕೆ ಮರಳಿದ್ದಾರೆ. 2015ರಲ್ಲಿ ಮತ್ತೆ ಬಣ್ಣಹಚ್ಚಿದ ಜ್ಯೋ, ಈಗ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರ ಮಧ್ಯೆ ಜ್ಯೋತಿಕಾ ಅವರು ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಎನ್ನುವ ಸುದ್ದಿವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.
ಈ ಹಿಂದೆಯೇ ಜ್ಯೋತಿಕಾ ಸಹೋದರಿ ಮತ್ತು ಖ್ಯಾತ ನಟಿ ನಗ್ಮಾ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದು ಸದ್ಯ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಇದೀಗ ನಗ್ಮಾ ಹಾಗೆಯೆ ನಟಿ ಜ್ಯೋತಿಕಾ ಸಹ ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ಎನ್ನುವ ಅನುಮಾನ ಎಲ್ಲರನ್ನೂ ಕಾಡುತ್ತಿದೆ.
ಜ್ಯೋತಿಕಾ ಹೇಳಿದ್ದೇನು?
ರಾಜಕೀಯ ಎಂಟ್ರಿ ಬಗ್ಗೆ ವೆಬ್ ಪೋರ್ಟಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಜ್ಯೋತಿಕಾ ಉತ್ತರ ನೀಡಿದ್ದಾರೆ. “ರಾಜಕೀಯಕ್ಕೆ ಎಂಟ್ರಿ ಕೊಟ್ಟು ಜನ ಸೇವೆ ಮಾಡಬೇಕೆಂದೇನು ಇಲ್ಲ. ಕಲಾವಿದರಾಗಿಯೂ ಮಾಡಬಹುದೆಂದು. ರಾಜಕೀಯದಲ್ಲಿಲ್ಲದ್ದಿದ್ದರೂ ಸಹ ನೀವು ಜನಸಾಮಾನ್ಯರಿಗೆ ಹೆಚ್ಚಿನ ಕೆಲಸ ಮಾಡಬಹುದು ಎಂಬುದು ನನ್ನ ಅಭಿಪ್ರಾಯ. ಪ್ರತಿಯೊಬ್ಬ ನಟನಿಗೂ ಸಾಮಾಜಿಕ ಜವಾಬ್ದಾರಿ ಇದೆ. ಯಾವಾಗಲು ಸರ್ಕಾರವನ್ನು ಅವಲಂಬಿಸಬಾರದು. ನಗರವನ್ನು ಸ್ವಚ್ಛಗೊಳಿಸಲು ಹೊರಡುವ ಮುನ್ನ ನೀವು ನಿಮ್ಮ ಮನೆ ಸ್ವಚ್ಛವಾಗಿದೆಯಾ ಎಂದು ನೋಡಬೇಕು, ಅಲ್ಲವೆ?” ಎಂದಿದ್ದಾರೆ ಜ್ಯೋತಿಕಾ.