ಪೆನ್ನು ಅವರದ್ದೆ ಪೇಪರ್ ಅವರದ್ದೇ : ಈಶ್ವರಪ್ಪಗೆ ಡಿಕೆಶಿ ಟಾಂಗ್
ಬೆಂಗಳೂರು : ಇವರ ಹತ್ರವೇ ಪೆನ್ನಿದೆ, ಪೇಪರ್ ಇದೆ, ಇವರು ಯಾರ ವಿರುದ್ಧ ಹೋರಾಟ ಮಾಡ್ತಿದ್ದಾರೆ ಎಂದು ಸಚಿವ ಕೆ.ಎಸ್.ಈಶ್ವರಪ್ಪಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟಾಂಗ್ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಕುರುಬ ಮೀಸಲಾತಿ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಮೀಸಲಾತಿ ವಿಚಾರದ ಹೋರಾಟಕ್ಕೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ.
ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಬೇಕಾಗುತ್ತದೆ. ಆದರೆ ನನಗೆ ಶಾಕ್ ಆಗಿದ್ದು ಸ್ವತಃ ಸರ್ಕಾರದ ಸಚಿವರೇ ಸಮಾವೇಶ ಮಾಡುತ್ತಿರುವುದು.
ಇವರ ಹತ್ರವೇ ಪೆನ್ನಿದೆ, ಪೇಪರ್ ಇದೆ, ಇವರು ಯಾರ ವಿರುದ್ಧ ಹೋರಾಟ ಮಾಡ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ ರಾಜ್ಯ ಕಾಂಗ್ರೆಸ್ ಘಟಕ ರಾಜ್ಯಾಧ್ಯಕ್ಷ ಸ್ಥಾನ ಚುನಾವಣೆ ಬಗ್ಗೆ ಮಾತನಾಡಿ, ಯೂತ್ ಕಾಂಗ್ರೆಸ್ ಚುನಾವಣೆಯಲ್ಲಿ ಸೋತವರು ಗೆದ್ದವರು ಎಲ್ಲ ನಮ್ಮವರೇ.
ಸೋತವರು ಪಕ್ಷಕ್ಕೆ ದುಡಿಬೇಕು, ಗೆದ್ದವರೂ ಕೆಲಸ ಮಾಡಬೇಕು. ಎಲ್ಲ ಯುವ ಕಾಂಗ್ರೆಸ್ ಕಾರ್ಯಕರ್ತರೂ ನಮ್ಮವರೇ. ಹೈಕಮಾಂಡ್ ನನಗೆ ಏನು ಸೂಚನೆ ಕೊಡುತ್ತದೋ ಅದನ್ನು ಪಾಲನೆ ಮಾಡ್ತೇವೆ.
ಸೋತವರೂ ಕೂಡ ಅವರಿಗೆ ಪಕ್ಷ ಏನಾದ್ರೂ ಜವಾಬ್ದಾರಿ ಕೊಡಬಹುದು ಎಂದು ತಿಳಿಸಿದರು.









