ಆರೋಗ್ಯ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರರಿಗೆ ಶೇ15 ರಷ್ಟು ವೇತನ ಹೆಚ್ಚಳ….
ಆರೋಗ್ಯ ಇಲಾಖೆಯ ರಾಷ್ಟ್ರೀಯ ಆರೋಗ್ಯ ಅಭಿಯಾನದ (ಎನ್ಎಚ್ಎಂ) ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ 25 ಸಾವಿರಕ್ಕೂ ಹೆಚ್ಚು ಗುತ್ತಿಗೆ ಹಾಗೂ ಹೊರಗುತ್ತಿಗೆ ಆಧಾರಿತ ನೌಕರರಿಗೆ ಶೀಘ್ರದಲ್ಲೇ ಶೇ.15ರಷ್ಟು ವೇತನ ಹೆಚ್ಚಳ ಮಾಡಲಾಗುವುದು ಎಂದು ರಾಜ್ಯ ಆರೋಗ್ಯ ಸಚಿವ ಸುಧಾಕರ್ ವಿಧಾನಸಭೆ ಕಲಾಪದಲ್ಲಿ ತಿಳಿಸಿದ್ದಾರೆ.
ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯೆ ಕೆ ಪೂರ್ಣಿಮಾ ಪ್ರಶ್ನೆಗೆ ಉತ್ತಿರಿಸಿದ ಸುಧಾಕರ್ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶೇಕಡ 50ರ ಅನುಪಾತದಲ್ಲಿ ಅನುದಾನ ನೀಡುತ್ತಿದ್ದು, ಈ ಅಭಿಯಾನದಡಿ ಕಾರ್ಯನಿರ್ವಹಿಸುತ್ತಿರುವ ನೌಕರರನ್ನು ಖಾಯಂ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ. ಇದು ಗುತ್ತಿಗೆ ಆಧಾರವಾಗಿದೆ. ಈ ಅಭಿಯಾನದಲ್ಲಿ 30 ಸಾವಿರ ನೌಕರರ ಪೈಕಿ 26 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೊರಗುತ್ತಿಗೆಯಲ್ಲಿ 3 ಸಾವಿರದ 494 ಮಂದಿ ಕಾರ್ಯನಿರ್ವಹಿಸುತ್ತಿದ್ದು, ಅವರಿಗೆ ಕಡ್ಡಾಯ ರಜೆ, ಹೆರಿಗೆ ರಜೆ ಇನ್ನಿತರೆ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಶೇಕಡ 15ರಷ್ಟು ವೇತನ ಹೆಚ್ಚಳವಾಗಲಿದೆ. ಈಗಾಗಲೇ ಆರ್ಥಿಕ ಇಲಾಖೆಗೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದು, ಶೀಘ್ರದಲ್ಲೇ ಆದೇಶ ನೀಡಲಾಗುವುದು ಎಂದು ತಿಳಿಸಿದರು.
ಮತ್ತೊಬ್ಬ ಸದಸ್ಯ ಐಹೊಳೆ ಡಿ. ಮಹಾಲಿಂಗಪ್ಪ ಪ್ರಶ್ನೆಗೆ ಉತ್ತರಿಸಿದ ಸಚಿವ ಡಾ ಸುಧಾಕರ್, ರಾಜ್ಯದ ಜನರಿಗೆ ಉತ್ತಮ ಆರೋಗ್ಯ ಸೇವೆ ಕಲ್ಪಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನ ಸಮುದಾಯ ಆಸ್ಪತ್ರೆಗಳನ್ನಾಗಿ ಮೇಲ್ದರ್ಜೆಗೇರಿಸಿದ್ದು, ಈಗಾಗಲೇ 43 ಆರೋಗ್ಯ ಕೇಂದ್ರಗಳನ್ನು ಉನ್ನತೀಕರಿಸಲಾಗಿದೆ ಎಂದರು.
K Sudhakar : 15% salary increase for contract and outsourcing employees of health department.