ಚಿಕ್ಕಮಗಳೂರು: ಕಾಡಾನೆಯಿಂದಾಗಿ ಮೋಸ್ಟ್ ವಾಂಟೆಡ್ ನಕ್ಸಲ್ ಪೊಲೀಸರಿಗೆ ಸಿಕ್ಕಿ ಬಿದ್ದಿರುವ ಪ್ರಸಂಗ ನಡೆದಿದೆ.
21 ವರ್ಷದಿಂದ ಭೂಗತನಾಗಿ ನಕ್ಸಲ್ ಚಟುವಟಿಕೆಯಲ್ಲಿ ಗುರುತಿಸಿಕೊಂಡಿದ್ದ ಅಂಗಡಿ ಸುರೇಶ್ ಈಗ ಬಂಧಿತನಾಗಿದ್ದಾನೆ. ಸುರೇಶ್ ಮೂಡಿಗೆರೆ ತಾಲೂಕಿನ ಅಂಗಡಿ ಗ್ರಾಮದವನು. 2003ರಲ್ಲಿ ನಕ್ಸಲ್ ಚಟುವಟಿಕೆಯಲ್ಲಿ ಭಾಗವಹಿಸಿದ್ದ ಸುರೇಶ್, ಆಗಿನಿಂದ ನಾಪತ್ತೆಯಾಗಿದ್ದ. ಕರ್ನಾಟಕ, ಕೇರಳ ಮತ್ತು ತಮಿಳುನಾಡು ಪೊಲೀಸರು ಈತನಿಗಾಗಿ ಹುಡುಕಾಟ ನಡೆಸುತ್ತಿದ್ದರು. ಆದರೂ, 21 ವರ್ಷಗಳಿಂದ ಆತ ತಲೆ ಮರೆಸಿಕೊಂಡು ಓಡಾಡುತ್ತಿದ್ದ. ಸದ್ಯ ಕೇರಳ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.
ಈತನ ಮೂಲ ಹೆಸರು ಪ್ರದೀಪ್. ನಕ್ಸಲ್ ಚಟುವಟಿಕೆಯಲ್ಲಿ ಗುರುತಿಸಿಕೊಂಡ ನಂತರ ಈತ ಸುರೇಶ್ ಆಗಿ ಬದಲಾಗಿದ್ದಾನೆ. 26ಕ್ಕೂ ಅಧಿಕ ಪ್ರಕರಣಗಳು ಈತನ ಮೇಲೆ ದಾಖಲಾಗಿವೆ. ತನ್ನ ತಂಡದೊಂದಿಗೆ ಕೇರಳದ ಕಣ್ಣೂರಿನ ಕಂಚಿಕೊಲ್ಲಿ ಅರಣ್ಯ ಪ್ರದೇಶದಲ್ಲಿ ಹೋಗುತ್ತಿದ್ದ ವೇಳೆ ಕಾಡಾನೆಗಳು ದಾಳಿ ಮಾಡಿವೆ. ದಾಳಿಯಲ್ಲಿ ಸುರೇಶ್ ಗಂಭೀರವಾಗಿ ಗಾಯಗೊಂಡಿದ್ದ. ನಂತರ ಇನ್ನುಳಿದ ನಕ್ಸಲರು ಆತನನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದರು.
ಸ್ಥಳೀಯ ಆದಿವಾಸಿಗಳು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಈ ವೇಳೆ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.