ಮುಂಬೈ: ನಟಿ ಕಂಗನಾ ರಣಾವತ್ ಬಾಲಿವುಡ್ ಡ್ರಗ್ ಮಾಫಿಯಾ ಬಗ್ಗೆ ಸಿಡಿಸಿದ ಬಾಂಬ್ ಮಹಾರಾಷ್ಟ್ರ ರಾಜಕಾರಣ ಹಾಗೂ ಬಾಲಿವುಡ್‍ನಲ್ಲಿ ಅಲ್ಲೋಲ ಸೃಷ್ಟಿಸಿದೆ. ಕಂಗನಾ ರಣಾವತ್ ಡ್ರಗ್ಸ್ ಬಳಕೆ ಆರೋಪದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಮಹಾರಾಷ್ಟ್ರದ ಮೈತ್ರಿ ಸರ್ಕಾರದ ಗೃಹ ಸಚಿವ ಅನಿಲ್ ದೇಶ್‍ಮುಖ್ ಹೇಳಿದ್ದಾರೆ.
ಮತ್ತೊಂದೆಡೆ, ಅನಿಲ್ ದೇಶ್‍ಮುಖ್ ಹೇಳಿಕೆಗೆ ಟಾಂಗ್ ನೀಡಿರುವ ಕಂಗನಾ ರಣಾವತ್, ಡ್ರಗ್ಸ್ ಆರೋಪ ಸಾಬೀತಾದ್ರೆ ಶಾಶ್ವತವಾಗಿ ಮುಂಬೈ ಬಿಟ್ಟು ಹೋಗ್ತೇನೆ ಎಂದು ಸವಾಲು ಹಾಕಿದ್ದಾರೆ.
ಹಿರಿಯ ನಟ ಶೇಖರ್ ಸುಮನ್ ಪುತ್ರ ಅಧ್ಯಯನ್ ಕಂಗನಾ ಜತೆ ಸಂಬಂಧ ಹೊಂದಿದ್ದರು. ಕಂಗನಾ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದರು ಎಂದು ಅಧ್ಯಯನ್ ಅವರೇ ಆರೋಪ ಮಾಡಿದ್ದರು ಎಂದು ಹೋಂ ಮಿನಿಸ್ಟರ್ ಅನಿಲ್ ದೇಶ್‍ಮುಖ್ ತಿಳಿಸಿದ್ದಾರೆ.
ಸಂದರ್ಶನವೊಂದರಲ್ಲಿ ಕಂಗನಾ ಡ್ರಗ್ಸ್ ತೆಗೆದುಕೊಳ್ಳುವಂತೆ ನನಗೂ ಒತ್ತಡ ಹಾಕುತ್ತಿದ್ದರು ಎಂದು ಅಧ್ಯಯನ್ ಪ್ರಸ್ತಾಪಿಸಿದ್ದರು. ಈ ಕುರಿತಂತೆ ಮುಂಬೈ ಪೊಲೀಸರು ವಿಸ್ತೃತವಾದ ತನಿಖೆ ನಡೆಸಲಿದ್ದಾರೆ ಎಂದು ದೇಶ್‍ಮುಖ್ ಹೇಳಿಕೊಂಡಿದ್ದಾರೆ.
ಅನಿಲ್ ದೇಶ್‍ಮುಖ್ ಆರೋಪಕ್ಕೆ ತಿರುಗೇಟು ನೀಡಿರುವ ಕಂಗನಾ ರಣಾವತ್, ತಮ್ಮನ್ನು ಮಾದಕ ದ್ರವ್ಯ ಆರೋಪದಲ್ಲಿ ಸಿಲುಕಿಸಲು ಮಹಾರಾಷ್ಟ್ರ ಸರ್ಕಾರ ಯತ್ನಿಸುತ್ತಿದೆ ಎಂಬ ಸವಾಲನ್ನು ಎದುರಿಸಲು ಸದಾ ರೆಡಿ ಎಂದು ಪ್ರತಿ ಸವಾಲು ಹಾಕಿದ್ದಾರೆ.
ಮಹಾರಾಷ್ಟ್ರ ಸರ್ಕಾರದ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ. ಪೊಲೀಸರ ಕಾನೂನು ಪ್ರಕ್ರಿಯೆ ಹಾಗೂ ಸಚಿವರ ಕಾಳಜಿಯನ್ನು ಒಪ್ಪಿಕೊಳ್ಳುತ್ತೇನೆ. ನನ್ನ ಡ್ರಗ್ಸ್ ಪರೀಕ್ಷೆ ನಡೆಯಲಿ. ನನ್ನ ರಕ್ತದ ಮಾದರಿಯನ್ನೂ ಪಡೆಯಿರಿ. ಜೊತೆಗೆ ನನ್ನ ಮೊಬೈಲ್‍ನ ಎಲ್ಲಾ ಕಾಲ್ ಡೀಟೇಲ್ಸ್ ಕೂಡ ಕೊಡ್ತೇನೆ ಎಂದು ಮಹಾ ಸರ್ಕಾರಕ್ಕೆ ಕಂಗನಾ ತಿರುಗೇಟು ಕೊಟ್ಟಿದ್ದಾರೆ.
ಇದೇ ವೇಳೆ, ಒಂದು ವೇಳೆ ನನ್ನ ಮಾದಕ ದ್ರವ್ಯ ಪರೀಕ್ಷೆಯಲ್ಲಿ ಆರೋಪ ಸಾಬೀತಾದರೆ ಶಾಶ್ವತವಾಗಿ ಮುಂಬೈ ತೊರೆಯುತ್ತೇನೆ ಎಂದು ಮಹಾರಾಷ್ಟ್ರ ಸರ್ಕಾರಕ್ಕೆ ದೊಡ್ಡ ಚಾಲೆಂಜ್ ಮಾಡಿದ್ದಾರೆ.
ಕಂಗನಾ ರಣಾವತ್ ಹಿಂದೆ ಬಿಜೆಪಿ ಕೈವಾಡವಿದೆ ಎಂಬುದು ಶಿವಸೇನೆಯ ಕೋಪಕ್ಕೆ ಕಾರಣ. ಇದು ಎಲ್ಲಿಗೆ ಹೋಗಿ ನಿಲುತ್ತದೆ ಎಂಬುದನ್ನು ಕಾದು ನೋಡಬೇಕಿದೆ.