ವಿವಾದಿತ ಹೇಳಿಕೆ ನೀಡಿದ ಕಂಗನಾ. ನಟಿ ವಿರುದ್ಧ ದೂರು ದಾಖಲು
ಮೊನ್ನೆಯಷ್ಟೆ ಪದ್ಮಶ್ರಿ ತೆಗೆದುಕೊಂಡು ಸುದ್ದಿಯಾಗಿದ್ದ ನಟಿ ಕಂಗನಾ ರಾನವತ್ ಈಗ ದೇಶದ ಸ್ವಾತಂತ್ರ್ಯಕ್ಕೆ ಸಂಬಂಧ ಪಟ್ಟಂತೆ ವಿವಾದಾತ್ಮಕ ಹೇಳಿಕೆಯನ್ನ ನೀಡಿ ಸುದ್ದಿಯಾಗಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ನಟಿ ಕಂಗನಾ ರನೌತ್, ”1947 ರಲ್ಲಿ ಬಂದ ಸ್ವಾತಂತ್ರ್ಯ ಅದು ಭಿಕ್ಷೆ, 2014 ರಲ್ಲಿ ನಮಗೆ ನಿಜವಾದ ಸ್ವಾತಂತ್ರ್ಯ ಸಿಕ್ಕಿತು” ಎಂದಿದ್ದಾರೆ. 2014ರಲ್ಲಿ ಮೋದಿ ಪ್ರಧಾನಿ ಆದಮೇಲೆ ದೇಶ ಸ್ವಾತಂತ್ರ್ಯವಾಯಿತು ಎಂಬರ್ಥದ ಕಂಗನಾ ರನೌತ್‌ರ ಈ ಹೇಳಿಕೆ ತೀವ್ರ ವಿವಾದ ಹುಟ್ಟುಹಾಕಿದೆ.
ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷೆ ಪ್ರೀತಿ ಮೆನನ್ ಅವರು ಕಂಗನಾ ವಿರುದ್ಧ ದೇಶ ದ್ರೋಹ ಪ್ರಕರಣ ದಾಖಲಿಸುವಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 504, 505 ಮತ್ತು 124A ಅಡಿಯಲ್ಲಿ ಅವರ ದೇಶದ್ರೋಹ ಮತ್ತು ಪ್ರಚೋದಕ ಹೇಳಿಕೆ ಅಡಿ ಅವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
”ಮಹಾತ್ಮಾ ಗಾಂಧಿಯವರ ತ್ಯಾಗಕ್ಕೆ ಅಪಮಾನ, ಗಾಂಧಿಯವರ ಕೊಂದ ಹತ್ಯೆಕೋರನಿಗೆ ಗೌರವ. ಈಗ ಮಂಗಲ್ ಪಾಂಡೆಯಿಂದ ಹಿಡಿದು ರಾಣಿ ಲಕ್ಷ್ಮೀಭಾಯಿ, ಭಗತ್ ಸಿಂಗ್, ಚಂದ್ರಶೇಖರ್ ಅಜಾದ್, ನೇತಾಜಿ ಸುಭಾಷ್ ಚಂದ್ರ ಬೋಸ್ ಇನ್ನೂ ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರಿಗೆ ಅಪಮಾನ. ಇಂಥ ಯೋಚನೆಯನ್ನು ಹುಚ್ಚುತನ ಎನ್ನಬೇಕೆ ಅಥವಾ ದೇಶ ದ್ರೋಹ ಎನ್ನಬೇಕೆ” ಎಂದು ವರುಣ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಬಿಹಾರದ ಮಾಜಿ ಮುಖ್ಯಮಂತ್ರಿ ಜಿತನ್ ಕುಮಾರ್ ಮಾಂಝಿ ಅವರು ನಟಿಯ ವಿವಾದಾತ್ಮಕ ಹೇಳಿಕೆಗೆ ಕಿಡಿಕಾರಿದ್ದು ಕಂಗನಾಗೆ ಅವರಿಗೆ ನೀಡಲಾದ ಪದ್ಮಶ್ರೀ ಪ್ರಶಸ್ತಿಯನ್ನು ಹಿಂಪಡೆಯುವಂತೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಮನವಿ ಮಾಡಿದ್ದಾರೆ