ನಾಡು ಉಳಿಯಬೇಕಾದರೆ ಭಾಷೆ ಉಳಿಯಬೇಕು – ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ Kannada Rajyotsava 2020
ಮಂಗಳೂರು, ನವೆಂಬರ್01: ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು. ಹೀಗೆ ಹಾರೈಸಿದವರು ಕನ್ನಡದ ಪ್ರಮುಖ ಸಾಹಿತಿಗಳಲ್ಲಿ ಒಬ್ಬರಾದ ಹುಯಿಲಗೋಳ ನಾರಾಯಣರಾಯರು. ಕನ್ನಡಿಗರೆಲ್ಲರ ಹೃದಯವು ಈ ಆಶಯಕ್ಕೆ ಅಂದು ದನಿಗೂಡಿಸಿತು. ಕನ್ನಡಿಗರ ಒಕ್ಕೊರಲ ಕೂಗಿಗೆ ಕನ್ನಡ ನಾಡಿನ ಉದಯವಾಯಿತು. Kannada Rajyotsava 2020
ಕನ್ನಡ ಕೇವಲ ಒಂದು ಭಾಷೆಯಲ್ಲ. ಅದು ಕನ್ನಡಿಗರ ಅಭಿಮಾನ. ಎರಡೂವರೆ ಸಾವಿರ ವರ್ಷಗಳ ಇತಿಹಾಸವಿರುವ ಪ್ರಾಚೀನ ದ್ರಾವಿಡ ಭಾಷೆಗಳಲ್ಲಿ ಕನ್ನಡವೂ ಒಂದು.
ರಾಷ್ಟ್ರ ಕವಿ ಕುವೆಂಪುರವರು ಕನ್ನಡ ಭಾಷೆಯ ಕುರಿತು,
ಕನ್ನಡ ಎನೆ ಕುಣಿದಾಡುವುದೆನ್ನೆದೆ
ಕನ್ನಡ ಎನೆ ಕಿವಿ ನಿಮಿರುವುದು
ಕಾಮನ ಬಿಲ್ಲನು ಕಾಣುವ ಕವಿಯೊಳು
ತೆಕ್ಕನೆ ಮನ ಮೈ ಮರೆಯುವುದು
ಕನ್ನಡ ಕನ್ನಡ ಹ.. ಸವಿಗನ್ನಡ
ಕನ್ನಡದಲಿ ಹರಿ ಬರೆಯುವನು
ಕನ್ನಡದಲಿ ಹರ ತಿರಿಯುವನು
ಎಂದು ಕನ್ನಡ ನುಡಿಯ ಮೇಲಿನ ಪ್ರೀತಿಯನ್ನು ಕನ್ನಡ ಭಾಷೆಯ ಸವಿಯನ್ನು ಎತ್ತಿ ತೋರಿಸಿದ್ದಾರೆ.
ಆದರೆ ಇಂದು ಕನ್ನಡದ ಮೇಲಿನ ಅಭಿಮಾನ ಕನ್ನಡಿಗರಲ್ಲಿ ಕಡಿಮೆಯಾಗುತ್ತಿದೆ. ಇಂಗ್ಲೀಷ್ ಬಗ್ಗೆಗಿನ ವ್ಯಾಮೋಹ ಹೆಚ್ಚಾಗುತ್ತಿದೆ. ಕರ್ನಾಟಕದ ರಾಜಧಾನಿ ಬೆಂಗಳೂರು ವಲಸಿಗರ ತಾಣವಾಗುತ್ತಿರುವುದರಿಂದ ಪರಭಾಷೆಗಳೇ ಇಲ್ಲಿ ಅಧಿಪತ್ಯ ಸ್ಥಾಪಿಸಿದೆ.
ಕಾನೂನು ತಜ್ಞ ಎಂ.ಕೆ.ವಿಜಯ್ ಕುಮಾರ್ ಅವರಿಗೆ ಈ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ
ಇಂಗ್ಲಿಷ್ ನ ವ್ಯಾಮೋಹ ಅತಿಯಾಗಿರುವುದರಿಂದ ಕನ್ನಡ ಮನೆ ಬಳಕೆಯಿಂದಲೂ ದೂರವಾಗಿದೆ. ಕನ್ನಡ ತನ್ನ ಅಸ್ತಿತ್ವ ಕಳೆದು ಕೊಳ್ಳುತ್ತಿದೆ. ಇಂದಿನ ಪೋಷಕರು ಹಾಗೂ ಮಕ್ಕಳಿಗೆ ನಾಡಿನ ಭಾಷೆ ಸಂಸ್ಕೃತಿ ಯ ಬಗ್ಗೆ ಅರಿವಿಲ್ಲ. ಪೋಷಕರು ಇಂಗ್ಲಿಷ್ ಬಳಕೆಯನ್ನು ಮಕ್ಕಳ ಮೇಲೆ ಮನೆಗಳಲ್ಲೂ ಹೇರುತ್ತಿರುವುದನ್ನು ಕಾಣುತ್ತಿದ್ದೇವೆ. ಕನ್ನಡ ಪರ ಹೋರಾಟಗಾರರು ಕೇವಲ ರಾಜಕೀಯ ದಾಳಗಳಾಗಿ ಬಳಕೆಯಾಗುತ್ತಿದ್ದಾರೆ. ಕನ್ನಡವನ್ನು ಉಳಿಸುವ ಬೆಳೆಸುವ ಸಂಕಲ್ಪ ಶಕ್ತಿ ಕಾಣೆಯಾಗಿದೆ.
ಇಂದು ಕೂಡಾ ಕನ್ನಡ ಆಡಳಿತ ಭಾಷೆಯಾಗಬೇಕೆಂಬ ಕೂಗು ಕೇಳಿಸುತ್ತಿದೆ.
ವ್ಯಾವಹಾರಿಕವಾಗಿ ಇಂಗ್ಲಿಷ್ ಬಳಕೆ ಹೆಚ್ಚಾಗುತ್ತಿರುವುದೇ ಇಂಗ್ಲಿಷ್ ಭಾಷೆಯ ವ್ಯಾಮೋಹ ಹೆಚ್ಚಾಗಲು ಕಾರಣ.
ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ಮಾತ್ರ ಸರ್ಕಾರಿ ಕೆಲಸ ಎಂಬ ನಿಯಮ ಕಡ್ಡಾಯ ಮಾಡಿ, ಸರ್ಕಾರಿ ಕಛೇರಿಗಳಲ್ಲಿ ಕನ್ನಡಕ್ಕೆ ಮಾತ್ರ ಆದ್ಯತೆ ನೀಡಿದಾಗ ಕನ್ನಡ ಮಾಧ್ಯಮ ಶಾಲೆಗಳು ಉಳಿಯಬಹುದು. ಐಎಎಸ್, ಐಪಿಎಸ್ ಪರೀಕ್ಷೆಗಳನ್ನು ಕನ್ನಡದಲ್ಲೇ ಬರೆಯುವಂತಾಗಲು ಪ್ರೋತ್ಸಾಹ ನೀಡಬೇಕು. ಕನ್ನಡ ಭಾಷೆಯ ಮೇಲಿನ ಪ್ರೀತಿ ಹೆಚ್ಚಾಗಬೇಕು ಎಂದರೆ ಕನ್ನಡ ಕಲಿತವರಿಗೆ ಅವಕಾಶವಿದೆ ಎಂಬ ವಾತಾವರಣ ನಿರ್ಮಾಣವಾಗಬೇಕು. ಕನ್ನಡ ಕಲಿಯದ, ಕಲಿಯಲು ಮನಸ್ಸಿಲ್ಲದ ಯಾರಿಗೂ ಯಾವ ಸೌಲಭ್ಯವು ಕರ್ನಾಟಕದಲ್ಲಿ ಉಚಿತವಾಗಿ ದೊರಕಬಾರದು.
ಹಾಗೆಂದು ಇಂಗ್ಲಿಷ್ ಅಥವಾ ಇತರ ಭಾಷೆಗಳನ್ನು ದ್ವೇಷಿಸಬೇಕು ಎಂದು ಅರ್ಥವಲ್ಲ. ಜಗತ್ತಿನ ಆಗುಹೋಗುಗಳನ್ನು ತಿಳಿಯಲು, ಅರ್ಥೈಸಿಕೊಳ್ಳಲು ಇಂಗ್ಲೀಷ್, ಹಿಂದಿ ಭಾಷೆಯ ಅವಶ್ಯಕತೆ ಇದೆ.
ಸುಂದರವಾದ ಹೂವಿನ ತೋಟದಂತೆ ಹಲವಾರು ಬಗೆಯ ಭಾಷೆ ವೈವಿಧ್ಯತೆಗಳಿಂದ ಕೂಡಿದ ದೇಶ ನಮ್ಮ ಭಾರತ.
ಹಾಗಾಗಿಯೇ ವರಕವಿ ಕುವೆಂಪು
ಜೈ ಭಾರತ ಜನನಿಯ ತನುಜಾತೆ..
ಜಯ ಹೇ ಕರ್ನಾಟಕ ಮಾತೆ… ಎಂದು ಹೇಳಿದ್ದಾರೆ.
ಆದರೆ ಭಾರತ ತಾಯಿಗೆ ಕನ್ನಡ ಮಾತೆ ಮಾತ್ರ ಮಗಳಲ್ಲ. ಇತರ ಭಾಷೆಗಳು ಕೂಡ ಮಕ್ಕಳೇ. ಹಾಗಾಗಿ ಇತರ ಭಾಷೆಗಳು ಸೋದರ ಭಾಷೆಗಳು. ಭಾಷೆಗಳ ನಡುವೆ ಸಂಘರ್ಷ ಬೇಡ..
ಅದಕ್ಕಾಗಿಯೇ ಕಲಿಯೋಕೆ ಕೋಟಿ ಭಾಷೆ.. ಆಡೋಕೆ ಒಂದೇ ಭಾಷೆ… ಕನ್ನಡ.. ಕನ್ನಡ.. ಎಂದು ನಾದ ಬ್ರಹ್ಮ ಹಂಸಲೇಖ ಕವನ ರಚಿಸಿದ್ದಾರೆ.
ಕನ್ನಡ ಭಾಷೆ ಕೀಳು ಎಂಬ ಭಾವನೆ ಬಿಟ್ಟು ನಮ್ಮ ಮೊದಲ ಆದ್ಯತೆ ಕನ್ನಡ ಭಾಷೆಯಾಗಿರಲಿ… ಎಲ್ಲಾ ಭಾಷೆಗಳನ್ನು ಗೌರವಿಸೋಣ, ಆದರೆ ನಮ್ಮ ಭಾಷೆಯನ್ನು ಮಾತ್ರ ಪ್ರೀತಿಸೋಣ.. ನಾಡು ಉಳಿಯಬೇಕಾದರೆ ಭಾಷೆ ಉಳಿಯಬೇಕು
ಕನ್ನಡ ಭಾಷೆ ಕುರಿತು ಕಳವಳ ಕಾಳಜಿ ಒಂದು ದಿನಕ್ಕೆ ಸೀಮಿತವಾಗದೆ ಸದಾಕಾಲವೂ ಕನ್ನಡ ಭಾಷೆ ಮೆರೆಯಲಿ…
ಓದುಗರಿಗೆಲ್ಲಾ ಸಾಕ್ಷಾಟಿವಿ ವತಿಯಿಂದ ಕನ್ನಡ ರಾಜೋತ್ಸವದ ಶುಭಾಶಯಗಳು
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ