ಜಮೀನು ಮಾರಿ ಆಸ್ಪತ್ರೆ ನಿರ್ಮಿಸಲು ಮುಂದಾದ ಕನ್ನಡದ ಹಿರಿಯ ನಟಿ
ನೆಲಮಂಗಲ: ಕನ್ನಡದ ಹಿರಿಯ ನಟಿ ಡಾ. ಎಂ. ಲೀಲಾವತಿಯವರು ಸ್ವಂತ ಜಮೀನು ಮಾರಿ ಆಸ್ಪತ್ರೆ ನಿರ್ಮಿಸಲು ಮುಂದಾಗುವ ಮೂಲಕ ಗ್ರಾಮೀಣ ಭಾಗದ ಜನರಿಗೆ ಆಸರೆಯಾಗಿದ್ದಾರೆ.
ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿ ಗ್ರಾಮದಲ್ಲಿ ಡಾ.ಎಂ.ಲೀಲಾವತಿಯವರು ಪ್ರಾಥಮಿಕ ಆಸ್ಪತ್ರೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದಾರೆ.
ತಾಯಿ ಲೀಲಾವತಿ ಅಮ್ಮನವರ ಆಸೆಯಂತೆ ಚೆನ್ನೈ ನಲ್ಲಿರುವ ತಮ್ಮ ಸ್ವಂತ ಜಮೀನನ್ನು ಮಾರಿದ ನಟ ವಿನೋದ್ ರಾಜ್ ಸುಮಾರು 50 ಲಕ್ಷ ರೂ ವೆಚ್ಚದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಡಾ.ಲೀಲಾವತಿಯವರ ಆರೋಗ್ಯ ಕ್ಷೀಣವಾಗಿದ್ದು, ಅವರ ಅನುಪಸ್ಥಿತಿಯಲ್ಲಿ, ಮಗ ನಟ ವಿನೋದ್ ರಾಜ್ ಚಾಲನೆ ನೀಡಿದರು.
ಭೂಮಿ ಪೂಜೆಗೆ ನೆಲಮಂಗಲ ಶಾಸಕ ಡಾ.ಕೆ.ಶ್ರೀನಿವಾಸ ಮೂರ್ತಿ ಕೂಡ ಭಾಗಿಯಾಗಿ ಎಲ್ಲಾ ರೀತಿಯ ಸಹಾಯ ನೀಡುವುದಾಗಿ ಹಾಗೂ ಅವರ ಹೆಸರಿನ ಆಸ್ಪತ್ರೆಗೆ ಸರ್ಕಾರದ ಎಲ್ಲಾ ಸೌಲಭ್ಯಗಳನ್ನ ಒದಗಿಸುವ ಭರವಸೆ ನೀಡಿದರು. ಈ ವೇಳೆ ಟಿಎಚ್ಓ ಡಾ. ಹರೀಶ್, ಡಾ.ಮಂಜುಳ, ಗ್ರಾಮ ಪಂಚಾಯತಿ ಅಧ್ಯಕ್ಷೆ ಪುಷ್ಪ ಕೃಷ್ಣಪ್ಪ, ಸದಸ್ಯ ಶ್ರೀನಿವಾಸ್, ರಾಮಕೃಷ್ಣಪ್ಪ, ಸಂತೋಷ ನಾಯಕ, ಗೋಪಾಲ್, ವೆಂಕಟೇಶ್ ಗ್ರಾಮದ ಜನರು ಉಪಸ್ಥಿತರಿದ್ದರು.