ಅಂಗಳ ಅಳೆಯಲು ಅಸಾಧ್ಯರಾದವರಿಗೆ ಆಕಾಶ ಅಳೆಯುವ ತೆವಲು : ಸಿದ್ದು ವಿರುದ್ಧ ಬಿಜೆಪಿ ಕಿಡಿ
ಬೆಂಗಳೂರು : ಕೊರೊನಾ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ರಾಜ್ಯ ಬಿಜೆಪಿ ಕಿಡಿಕಾರಿದೆ.
ಸಿದ್ದರಾಮಯ್ಯ ವಿರುದ್ಧ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಮಾರಣಾಂತಿಕ ಕಾಯಿಲೆಗೆ ಔಷಧ ಇಲ್ಲ ಎಂದರೆ ಅದು ಕೊಲೆಗೆ ಸಮಾನ ಎಂದು ಸೆಕ್ಷನ್ ಸ್ಪೆಷಲಿಸ್ಟ್ ಸಿದ್ದರಾಮಯ್ಯ ವ್ಯಾಖ್ಯಾನಿಸಿದ್ದಾರೆ. ಅಧಿಕಾರದಲ್ಲಿದ್ದಾಗ ಹಿಂದೂ ಕಾರ್ಯಕರ್ತರ ಸರಣಿ ಕೊಲೆಗೆ ಪರೋಕ್ಷ ಬೆಂಬಲ ನೀಡಿದ ವ್ಯಕ್ತಿ ಈಗ ಮಾನವೀಯತೆಯ ಮುಖವಾಡ ಹೊತ್ತು ನಿಂತಿರುವುದು ನಾಚಿಗೆಗೇಡಿನ ಸಂಗತಿ.
ಅಂಗಳ ಅಳೆಯಲು ಅಸಾಧ್ಯರಾದವರಿಗೆ ಆಕಾಶ ಅಳೆಯುವ ತೆವಲು. ಕಾಂಗ್ರೆಸ್ ಸಲ್ಲಿಸಿದ ಪಿಐಎಲ್ ಅನ್ನು ಹೈಕೋರ್ಟ್ ವಜಾಗೊಳಿಸಿದ ಮೇಲೂ
ಸಿದ್ದರಾಮಯ್ಯ ಅವರಿಗೆ ಬುದ್ಧಿ ಬಂದಿಲ್ಲ. ಲಸಿಕೆ ಬಗ್ಗೆ ಶ್ವೇತಪತ್ರ ಹೊರಡಿಸಿ ಎಂಬುದು ಸಿದ್ದರಾಮಯ್ಯ ಅವರ ಬೂಟಾಟಿಕೆಯ ಪರಮಾವಧಿಯಲ್ಲದೆ ಮತ್ತೇನಲ್ಲ.
ಕಣ್ಣೀರು ಹಾಕಿದರೆ ಆಕ್ಸಿಜನ್, ಲಸಿಕೆ ಸಿಗುವುದಿಲ್ಲ ಎಂದು ದೇಶದ ಪ್ರಧಾನಿ ಬಗ್ಗೆ ವ್ಯಂಗ್ಯವಾಡುವ ಸಿದ್ದರಾಮಯ್ಯಗೆ ತಾವು ಗಾಜಿನಮನೆಯಲ್ಲಿ ಕುಳಿತಿರುವುದು ಮರೆತು ಹೋಗಿದೆ. ಕೋವಿಡ್ ಸೋಂಕಿಗೆ ಹೆದರಿ ಮನೆಬಾಗಿಲು ಮುಚ್ಚಿಕೊಂಡು ಟ್ವೀಟರ್‍ನಲ್ಲಿ ಪ್ರವಚನ ನೀಡುವವರಿಗೆ ಭಾವನೆಗಳ ಬೆಲೆ ಗೊತ್ತಿರಲು ಸಾಧ್ಯವಿಲ್ಲ.
ಬಾದಾಮಿ ಶಾಸಕ ಸಿದ್ದರಾಮಯ್ಯ ಕನಸಿನಲ್ಲಿ ಹೊಟ್ಟೆ ತುಂಬ ತಿಂದು ಎಚ್ಚರವಾದ ಮೇಲೆ ತೇಗುವ ವಿಚಿತ್ರ ಹವ್ಯಾಸ ಬೆಳೆಸಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದ ಲಸಿಕೆ ನಿಧಿ ಸಂಗ್ರಹ ನಾಟಕವೂ ಹಾಗೆಯೇ ಆಗಿದೆ. ಇಲ್ಲದೇ ಇರುವ ದುಡ್ಡನ್ನು ಕೊಡುತ್ತೇವೆ ಎಂದು ಬಡಾಯಿ ಕೊಚ್ಚಿ ಈಗ ಸರ್ಕಾರದ ಬಳಿ ಅನುದಾನ ಬೇಡುತ್ತಿರುವುದೇಕೆ ಎಂದು ಪ್ರಶ್ನಿಸಿದೆ.










