Karnataka BJP | ಸಿಎಂ ಬಸವರಾಜ ಬೊಮ್ಮಾಯಿಗೆ ಸಿದ್ದರಾಮಯ್ಯ ನೇರ ಸವಾಲು
ಬೆಂಗಳೂರು : ನಮ್ಮ ಸರ್ಕಾರದ ಅವಧಿಯಲ್ಲಿ ನಡೆದಿರುವ ನೇಮಕಾತಿಗಳು ಸೇರಿದಂತೆ ಈ ವರೆಗಿನ ಎಲ್ಲ ನೇಮಕಾತಿಗಳ ಬಗ್ಗೆ ಹೈಕೋರ್ಟ್ ನ ಹಾಲಿ ನ್ಯಾಯಮೂರ್ತಿಗಳ ಮೇಲುಸ್ತುವಾರಿಯಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಈ ಕುರಿತು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, ಪಿಎಸ್‌ಐ ಹಗರಣದ ಹಿಂದೆ ಯಾವುದಾದರೂ ರಾಜಕಾರಣಿಗಳ ಕೈವಾಡ ಇದೆಯಾ? ಮಂತ್ರಿಗಳು ಹಾಗೂ ಅವರ ಸಂಬಂಧಿಕರು ಇದರಲ್ಲಿ ಷಾಮೀಲಾಗಿದ್ದಾರೆಯೇ? ಈ ಸತ್ಯಗಳು ಹೊರಬರಬೇಕು.ಪ್ರಕರಣಕ್ಕೆ ಸಂಬಂಧಪಟ್ಟ ಎಲ್ಲರನ್ನು ಕರೆದು ವಿಚಾರಣೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು.
ಪಿಎಸ್‌ಐ ನೇಮಕಾತಿ ಹಗರಣದಲ್ಲಿ 22 ಜನ ಅಧಿಕಾರಿಗಳು ಸೇರಿದಂತೆ ಒಟ್ಟು 97 ಜನರ ಬಂಧನವಾಗಿದೆ. ಇಷ್ಟೊಂದು ದೊಡ್ಡ ಮಟ್ಟದ ಹಗರಣ ಆಗಬೇಕಾದರೆ ರಾಜಕಾರಣಿಗಳ ಕೈವಾಡ ಇಲ್ಲದೆ ಇರುತ್ತದೆಯಾ?ಇದರಲ್ಲಿ 4 ಜನ ಮಂತ್ರಿಗಳು ಷಾಮಿಲಾಗಿದ್ದಾರೆ ಎಂಬ ವಕೀಲರ ಸಂಘದ ರಂಗನಾಥ್ ಆರೋಪದ ಬಗ್ಗೆ ಯಾಕೆ ತನಿಖೆ ನಡೆಸಿಲ್ಲ ಬಿಜೆಪಿ?
ಬಂಧಿತ ಎಡಿಜಿಪಿ ಅಮೃತ್ ಪೌಲ್ ಅವರನ್ನು ನೇಮಕಾತಿ ವಿಭಾಗದ ಎಡಿಜಿಪಿ ಆಗಿ ಯಾರು ನೇಮಕ ಮಾಡಿದ್ದು? ಪ್ರಕರಣ ಬೆಳಕಿಗೆ ಬಂದು ಇವರ ಕಚೇರಿ ಮೇಲೆ ದಾಳಿ ನಡೆದ ನಂತರ ಅವರನ್ನು ವಿಚಾರಣೆಗೊಳಪಡಿಸದೆ ಆಂತರಿಕ ಭದ್ರತಾ ವಿಭಾಗಕ್ಕೆ ವರ್ಗಾವಣೆ ಮಾಡಲು ಏನು ಕಾರಣ ಬಿಜೆಪಿ?
ಎಡಿಜಿಪಿ ಅಮೃತ್ ಪೌಲ್ ಅವರನ್ನು ಮಂಪರು ಪರೀಕ್ಷೆ ಏಕೆ ಮಾಡಬಾರದು? ಐಪಿಸಿ ಸೆಕ್ಷನ್ 164ರಡಿ ಅವರ ಹೇಳಿಕೆಯನ್ನು ಏಕೆ ರೆಕಾರ್ಡ್ ಮಾಡಿಲ್ಲ? ಖಾಲಿ ಉತ್ತರ ಪತ್ರಿಕೆ ತುಂಬಲು ಎಡಿಜಿಪಿ ಅವರು ಯಾರ ನಿರ್ದೇಶನದ ಮೇಲೆ ಕಾನ್ಸ್‌ಟೆಬಲ್‌ಗಳನ್ನು ಕಳಿಸಿದ್ದರು ಬಿಜೆಪಿ ಎಂದು ಕಿಡಿಕಾರಿದ್ದಾರೆ.