ಬಿಎಸ್‌ವೈ ಸುತ್ತ ಕಟ್ಟಿದ ಕೋಟೆಯ ಬೇಲಿಗಳು ಬಿಗಿಯಾದರೂ, ಸಿಎಂ ಖುರ್ಚಿ ಮಾತ್ರ ಉರುಳುದಿಹದಚ್ಚರಿಯೋ ಮಂಕುತಿಮ್ಮ: Marjala manthana CM chair
ಮರಾಠ ಪ್ರಾಧಿಕಾರ ರಚನೆ, ಕೃಷಿ ವಿಧೇಯಕ, ಗೋಹತ್ಯಾ ನಿಷೇಧ ಕಾಯ್ದೆ, ಸಾರಿಗೆ ನೌಕರರ ಮುಷ್ಕರ.. ಒಂದಾದ ಮೇಲೊಂದೊಂದು ಅಸ್ತ್ರಗಳು ಪ್ರಯೋಗವಾದವು. ವಿರೋಧಿಗಳ ಹೆಗಲ ಮೇಲೆ ಕೋವಿಯಿಟ್ಟು ಡಂ ಡಂ ಡಂ ಎನಿಸಿದವರು ಸ್ವಪಕ್ಷೀಯರೇ. Marjala manthana CM chair
ಯಡಿಯೂರಪ್ಪನವರಿಗೆ ಹೊರಗಿನವರಿಗಿಂತ ಬಿಜೆಪಿ ಒಳಗೆ ಹೆಚ್ಚಿನ ಹಿತಶತ್ರುಗಳಿದ್ದಾರೆ. ನಸುನಗುತ್ತಲೇ ಹಲ್ಲು ಮಸೆವ ಸಮಯಸಾಧಕರಿದ್ದಾರೆ. ಒಂದೆಡೆ ತಾನು ಖುರ್ಚಿಯಿಂದ ಇಳಿಯಬೇಕಿದ್ದರೆ ಆ ಸ್ಥಾನಕ್ಕೆ ತಾನೇ ಸೂಚಿಸುವ ವ್ಯಕ್ತಿ ಕೂರಬೇಕು ಮತ್ತು ಪುತ್ರ ವಿಜಯೇಂದ್ರ ಡಿಸಿಎಂ ಆಗಬೇಕು ಎನ್ನುವುದು ಯಡಿಯೂರಪ್ಪನವರ ಬಿಗಿಪಟ್ಟು. ಇದು ಅವರ ಹಳೆಯ ತಂತ್ರಗಾರಿಕೆಯೂ ಹೌದು. ಹೀಗಾಗಿಯೇ ಅಲ್ಲವೇ ೨೦೧೨-೧೩ರಲ್ಲಿ ಜಗದೀಶ್ ಶೆಟ್ಟರ್ ಮತ್ತು ಸದಾನಂದ ಗೌಡರು ಮುಖ್ಯಮಂತ್ರಿ ಗಾದಿಗೆ ಏರಿದ್ದು. ಆದರೆ ಆ ಹಿಂದಿನ ತಪ್ಪುಗಳನ್ನು ಯಡಿಯೂರಪ್ಪನವರು ಮರೆತಿಲ್ಲ.
ಸ್ವಭಾವತಃ ಜಮದಗ್ನಿಯ ಅಪರಾವತಾರ ಮೊದಲಿನ ಯಡಿಯೂರಪ್ಪ ಅವರಾಗಿದ್ದರೇ ಇಷ್ಟೊತ್ತಿಗೆ ಸರ್ಕಾರ ಬಿದ್ದು ಹೋಗಬೇಕಿತ್ತು. ಹಾಗಂತ ಈಗ ಸಿಎಂ ಖುರ್ಚಿಗೆ ಫೆವಿಕಾಲ್ ಅಂಟಿಸಿ ಕೂತಿರುವ ಯಡಿಯೂರಪ್ಪನವರು ಮೆತ್ತಗಾಗಿದ್ದಾರೆ ಎಂದರ್ಥವಲ್ಲ. ಅವರಿಗೆ ತಾವು ಕುಳಿತ ಖುರ್ಚಿಯ ಮಹತ್ವ ಗೊತ್ತಿದೆ. ಮುಖ್ಯವಾಗಿ ವಿಜಯೇಂದ್ರ ರಾಜಕೀಯವಾಗಿ ಬೆಳೆಯಲು ಅವರು ಖುರ್ಚಿಗೆ ಉಡದಂತೆ ಕಚ್ಚಿ ಕೂರಲೇಬೇಕಿದೆ. ವಿರೋಧಿಗಳ ಚಾಲ್ ಗಳನ್ನು ಕಣ್ಣಳತೆಯಲ್ಲೇ ಲೆಕ್ಕ ಹಾಕಿಯೇ ಅವರು ನಿಗಮ ಮಂಡಳಿಗೆ ತಮ್ಮ ಆಪ್ತರನ್ನು ನೇಮಕಾತಿ ಮಾಡಿದ್ದಾರೆ. ತಮ್ಮ ಸುತ್ತ ಕಟ್ಟಿದ ಬೇಲಿಯ ಒಂದೊಂದೆ ಹಗ್ಗಗಳನ್ನು ಬಿಚ್ಚುತ್ತಿದ್ದಾರೆ. ಉದಾಹರಣೆಗೆ ಸಿಎಂ ಸ್ಥಾನದ ಸನಿಹದಲ್ಲೇ ಇದ್ದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಯಲಹಂಕದ ಎಸ್.ಆರ್ ವಿಶ್ವನಾಥ್ ರನ್ನು ಬಿಡಿಎ ಅಧ್ಯಕ್ಷರನ್ನಾಗಿಸಿದ್ದು. ಇನ್ನೊಬ್ಬ ರಾಜಕೀಯ ಕಾರ್ಯದರ್ಶಿ ಹೊನ್ನಾಳಿ ಜಂಗಮ ರೇಣುಕಾಚಾರ್ಯರನ್ನು ಯಡಿಯೂರಪ್ಪನವರು ಮುಖ ಕೊಟ್ಟು ಮಾತಾಡಿಸದೇ ಎಷ್ಟೋ ಕಾಲವಾಗಿದೆ. ಅವರ ಪಾಲಿಗೆ ಅದೊಂದು ಆಟಕ್ಕೆ ಇದ್ದರೂ ಲೆಕ್ಕಕ್ಕೆ ಇಲ್ಲದ ಹಾಲುಂಡೆ ಕಾಯಿ.
ಯಡಿಯೂರಪ್ಪನವರನ್ನು ಶತಾಗತಾಯ ಖುರ್ಚಿಯಿಂದ ಇಳಿಸಲೇಬೇಕು ಎಂದು ರಣಹದ್ದುಗಳಂತೆ ಕಾಯುತ್ತಿರುವ ಪಟ್ಟಿ ದೊಡ್ಡದಿದೆ. ಬಿ.ಎಲ್ ಸಂತೋಷ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಮಾತ್ರ ಹಗ್ಗ ಹೊಸೆಯುತ್ತಿದ್ದಾರೆ ಎಂದು ಮೇಲ್ನೋಟಕ್ಕೆ ಅನ್ನಿಸುತ್ತದೆ. ಇವರ ಹಿಂದೆ ಕೊಯ್ಯಾ ಕೊಟ್ಟ ಎನ್ನುತ್ತಿರುವ ನಾಯಕರು ಆಗಾಗ ನಾಯಕತ್ವವನ್ನು ಪ್ರಶ್ನೆ ಮಾಡುತ್ತಿದ್ದಾರೆ. ಹೊನ್ನಾಳಿಯ ಜಂಗಮ ರೇಣುಕಾ ಇತ್ತೀಚೆಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ಅಸಮಧಾನ ವ್ಯಕ್ತಪಡಿಸಿರುವುದು ನೀವು ಗಮನಿಸಿರಬಹುದು. ಸದನದಲ್ಲಿ ಬಸವನಗೌಡ ಪಾಟೀಲ್ ಯತ್ನಾಳ್ ನೇರಾ ನೇರಾ ತಮ್ಮದೇ ಸರ್ಕಾರದ ನಿರ್ಧಾರದ ವಿರುದ್ಧ ಆಗಾಗ ಟೀಕಿಸುವುದು ನಿಮ್ಮ ಗಮನಕ್ಕೆ ಬಂದಿರಬಹುದು. ಆರ್ ಅಶೋಕ್, ಈಶ್ವರಪ್ಪನವರಂತಹವರಿಗೂ ಯಡಿಯೂರಪ್ಪನವರ ಜೊತೆ ಅಷ್ಟೇನೂ ನಿಕಟವಾದ ಬಾಂದವ್ಯವಿಲ್ಲ ಎನ್ನುವುದು ಜಗಜ್ಜಾಹೀರು. ಇದೇ ಈಶ್ವರಪ್ಪನವವರನ್ನು ಹಠ ಕಟ್ಟಿ ೨೦೧೩ರಲ್ಲಿ ಶಿವಮೊಗ್ಗದಲ್ಲಿ ಸೋಲಿಸಿದ್ದರಲ್ಲ ಯಡಿಯೂರಪ್ಪ, ಅದೂ ರಾಜಕೀಯದ ಶ್ರೀಕಾರವೂ ಗೊತ್ತಿಲ್ಲದ ರುದ್ರೇಗೌಡರೆಂಬ ಉದ್ಯಮಿಯನ್ನು ಕೆಜೆಪಿಯಿಂದ ಕಣಕ್ಕಿಳಿಸಿ. ಆ ಅವಮಾನವನ್ನು ಈಶ್ವರಪ್ಪನವರು ಮರೆತಿದ್ದಾರಾ? “ನಿಮ್ಮ ಯಡಿಯೂರಪ್ಪನವರನ್ನು ತಿರುಪತಿಗೆ ಕಳಿಸಿದ್ದೇವೆ” ಎನ್ನುವ ಹೇಳಿಕೆ ನೀಡಿದ್ದ ಆರ್ ಅಶೋಕ್, ಅವತ್ತಿನಿಂದಲೇ ಬಿಜೆಪಿಯೊಳಗಿನ ಯಡಿಯೂರಪ್ಪನವರ ವಿರೋಧಿ ಬಣದ ಖಾಯಂ ಸದಸ್ಯತ್ವ ಸ್ವೀಕರಿಸಿಬಿಟ್ಟರು. ಸದ್ಯ ಯಡಿಯೂರಪ್ಪನವರ ಬಲಗೈನಂತೆ ನಿಂತಿರುವ ಪುತ್ರ ವಿಜಯೇಂದ್ರರಿಗೆ ತಮ್ಮ ಪರವಿರುವ ಶಾಸಕರು ಯಾರು, ಬಗಲ್ ಕಾ ದುಷ್ಮನ್ ಯಾರು ಎನ್ನುವುದು ಅರ್ಥವಾದಂತಿದೆ. ಹೀಗಾಗಿಯೇ ಕೆಲವು ಶಾಸಕರಿಗೆ ವಿಧಾನಸೌಧದ ಮೂರನೆಯ ಮಹಡಿಯ ಬಾಗಿಲು ಅರ್ಧ ಮುಚ್ಚಿದೆ. ಬಹಳಷ್ಟು ಶಾಸಕರ ಫೈಲ್ ಗಳು ಟೇಬಲ್ ದಾಟುತ್ತಿಲ್ಲ. ಯಡಿಯೂರಪ್ಪನವರನ್ನು ಸಂಬಾಳಿಸಿದಷ್ಟು ಸಲೀಸಾಗಿ ವಿಜಯೇಂದ್ರರನ್ನು ಮೀರಲು ಸಾಧ್ಯವಾಗ್ತಿಲ್ಲ. ರಾಜ್ಯ ಬಿಜೆಪಿ ಪಾಳಯದಲ್ಲಿ ಒಳಗೊಳಗೆ ಕೆಂಡ ಉರಿ ಹೆಚ್ಚುತ್ತಿದೆ. ಸಿಎಂ ಆಪ್ತ ಕಾರ್ಯದರ್ಶಿ ವಿನಯ್ ಆತ್ಮಹತ್ಯೆ ಪ್ರಯತ್ನವೆಂಬ ಹೈಡ್ರಾಮವನ್ನು ಒಮ್ಮೆ ನೆನಪಿಸಿಕೊಳ್ಳಿ.
ಎಲ್ಲೋ ಗೋವಿಂದ ಕಾರಜೋಳ, ಸುರೇಶ್ ಕುಮಾರ್ ತರಹದ ಮೂರ್ನಾಲ್ಕು ಜನರನ್ನು ಬಿಟ್ಟರೆ ಯಡಿಯೂರಪ್ಪನವರ ಪಾಳೆಯದಲ್ಲಿ ಪ್ರಾಮಾಣಿಕವಾಗಿ ಉಳಿದವರು ಕಡಿಮೆಯೇ. ಮಾಧುಸ್ವಾಮಿಯವರನ್ನಾಗಲೀ ಸುಧಾಕರ್ ರನ್ನಾಗಲೀ ಯಡಿಯೂರಪ್ಪನವರಾಗಲೀ ವಿಜೇಂದ್ರ ಆಗಲೀ ಅಷ್ಟಾಗಿ ನಂಬುವುದಿಲ್ಲ. ಶಿರಾ ಉಪಚುನಾವಣೆಯಲ್ಲಿ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದರೂ ಮಾಧುಸ್ವಾಮಿ ಪ್ರಚಾರದ ಕಣದಲ್ಲಿ ಕಂಡಿರಲೇ ಇಲ್ಲ. ಅಶ್ವಥ್ ನಾರಾಯಣ್, ಲಕ್ಷ್ಮಣ್ ಸವದಿ, ಮುಂತಾದ ನಾಯಕರೂ ನೇರಾ ನೇರ ಹೈಕಮಾಂಡ್ ಜೊತೆ ಸಂಪರ್ಕ ಸಾಧಿಸುತ್ತಿದ್ದಾರೆ. ಅತ್ತ ಬಳ್ಳಾರಿ ರಿಪಬ್ಲಿಕ್ ನ ಶ್ರೀರಾಮುಲೂ ಸಹ ತಾವು ಡಿಸಿಎಂ ಆಗದೇ ಇರುವ ಕುರಿತಾದ ಕಹಿಯನ್ನು ಗಂಟಲೊಳಗೆ ಇಟ್ಟುಕೊಂಡಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಬಂಡಾಯ ಎಬ್ಬಿಸಲು ಸಾಹುಕಾರ ರಮೇಶ್ ಜಾರಕೀಹೋಳಿ ಸಮಯ ಕಾಯುತ್ತಿದ್ದಾರೆ. ಡಿಸಿಎಂ ಹುದ್ದೆಯ ಮೇಲೆ ಸಾಹುಕಾರರದ್ದೂ ಕಣ್ಣಿತ್ತಲ್ಲ. ತಾವೇ ಪಕ್ಷಕ್ಕೆ ಕರೆತಂದ ಹೆಚ್.ವಿಶ್ವನಾಥ್, ಎಂಟಿಬಿ ನಾಗರಾಜ್ ತರದವರೂ ಸಹ ಅವಕಾಶ ಸಿಕ್ಕರೇ ತಮ್ಮ ಮೇಲೆ ಅವಿಶ್ವಾಸ ತೋರಬಲ್ಲರು ಎಂಬುದೂ ಯಡಿಯೂರಪ್ಪನವರಿಗೆ ಅರ್ಥವಾಗಿದೆ. ಸದ್ಯದ ಪರಿಸ್ಥಿತಿ ಬಿಎಸ್‌ವೈ ಪಾಲಿಗೆ ಹಗ್ಗದ ಮೇಲಿನ ನಡಿಗೆಯಾಗಿದೆ. ಆದರೂ ತಾಳ್ಮೆಯ ಸಾಕಾರ ಮೂರ್ತಿಯಂತೆ ಅವರು ಮೌನಧಾರಣೆ ಮಾಡಿರುವ ಏಕೈಕ ಉದ್ದೇಶವೇ ಪುತ್ರ ವಿಜಯೇಂದ್ರ.
ರಾಜರಾಜೇಶ್ವರಿ ನಗರ ಮತ್ತು ಶಿರಾ ಉಪಚುನಾವಣೆಯಲ್ಲಿ ಗೆದ್ದ ಕಾರಣಕ್ಕೆ ಯಡಿಯೂರಪ್ಪನವರ ಕೈ ಮೇಲಾಗಿದ್ದು ನಿಜವಾದರೂ ಅದಕ್ಕಿಂತ ದೊಡ್ಡ ಅಗ್ನಿ ಪರೀಕ್ಷೆ ಮುಂಬರುವ ಬೆಳಗಾವಿ ಲೋಕಸಭಾ ಉಪಚುನಾವಣೆಯ ಮೇಲಿದೆ. ವೀರಶೈವ ಲಿಂಗಾಯಿತ ಸಮುದಾಯದ ಅಭ್ಯರ್ಥಿಗೆ ಉಮೇದುವಾರಿಕೆ ಸಲ್ಲಿಸಲು ಅವಕಾಶ ಮಾಡಿಕೊಡಲು ಯಡಿಯೂರಪ್ಪನವರು ತೀರ್ಮಾನಿಸಿದಂತಿದೆ. ಇದೇ ಕಾರಣಕ್ಕೆ ವೀರಶೈವ ಲಿಂಗಾಯಿತ ನಿಗಮ ಸ್ಥಾಪನೆಯನ್ನು ವಾಪಾಸು ತೆಗೆದುಕೊಂಡಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ. ಇವತ್ತಿಗೂ ಯಡಿಯೂರಪ್ಪನವರು ರಾಜ್ಯದ ಎಲ್ಲಾ ಲಿಂಗಾಯಿತ ಮಠಗಳ ನೀಲಿಕಣ್ಣಿನ ಹುಡುಗ. ಇದೇ ಯಡಿಯೂರಪ್ಪನವರ ಶಕ್ತಿಯೂ ಹೌದು-ಮಿತಿಯೂ ಹೌದು. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ರನ್ನೇ ಲೋಕಸಭಾ ಅಖಾಡಕ್ಕಿಳಿಸಿ ದೆಹಲಿಗೆ ಕಳಿಸಿದರೆ ಲಿಂಗಾಯಿತ ಸಮುದಾಯಕ್ಕೆ ಟಿಕೆಟ್ ಕೊಟ್ಟಂತೆಯೂ ಆಗುತ್ತದೆ. ತಮ್ಮ ಪ್ರತಿಸ್ಫರ್ಧಿಯನ್ನು ದೂರವಿಟ್ಟಂತೆಯೂ ಆಗುತ್ತದೆ ಎನ್ನುವ ಲೆಕ್ಕಾಚಾರ ಬಿಎಸ್‌ವೈರವರದ್ದು ಎನ್ನುವ ಮಾತುಗಳು ಕೇಳಿ ಬಂದಿವೆ. ಅಸಲಿಗೆ ನಾಯಕತ್ವ ಬದಲಾವಣೆ ನಿಶ್ಚಯವೇ ಆದರೆ ಲಿಂಗಾಯಿತ ಸಮುದಾಯದವರನ್ನೇ ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಬೇಕಲ್ಲ. ಶೆಟ್ಟರ್ ರಾಷ್ಟ್ರ ರಾಜಕಾರಣಕ್ಕೆ ಹೋದರೆ ಇತ್ತಲಿನ ಒಳಬಂಡಾಯ ಹತ್ತಿಕ್ಕುವುದು ಸುಲಭ. ಯತ್ನಾಳ್ ತರಹದ ನಾಯಕರನ್ನು ತೀರಾ ಹೈಕಮಾಂಡ್ ಮುಖ್ಯಮಂತ್ರಿ ಸ್ಥಾನಕ್ಕೆ ಸೂಚಿಸುವುದಿಲ್ಲ ಎನ್ನುವ ಲಾಜಿಕ್ ಯಡಿಯೂರಪ್ಪನವರದ್ದು.
ರೈತರ ಹೋರಾಟದಲ್ಲಿ ಬೆಳಿಗ್ಗೆ ಹಾಜರಿದ್ದು ಸಂಜೆಯ ವೇಳೆಗೆ ಕೃಷಿ ವಿಧೇಯಕಕ್ಕೆ ಬೆಂಬಲ ನೀಡಿದ ಕುಮಾರಸ್ವಾಮಿಯವರ ನಡೆ ಬಿಜೆಪಿ ಹೈಕಮಾಂಡ್ ನ ಇನ್ನೊಂದು ರಣತಂತ್ರ. ಡಿಕೆಶಿಯಂತೆ ಕುಮಾರಸ್ವಾಮಿಯವರದ್ದೂ ಅಕ್ರಮ ಆಸ್ತಿ ತನಿಖೆ ನೆಪದಲ್ಲಿ ಇಡಿ (ಜಾರಿ ನಿರ್ದೇಶನಾಲಯ) ಚೂ ಬಿಡುವ ದಮಕಿ ಹಾಕಿರಬಹುದು ಎನ್ನುವುದು ವಿಧಾನಸೌಧದ ಪಡಸಾಲೆಯಲ್ಲಿ ಕೇಳಿ ಬರುತ್ತಿರುವ ಮಾತು. ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಕಾಂಗ್ರೆಸ್ ಅನ್ನು ಹಿಗ್ಗಾಮುಗ್ಗ ಬಯ್ಯುತ್ತಿರುವ ಮತ್ತು ಬಿಜೆಪಿ ಪರವಾಗಿ ಸಾಫ್ಟ್ ಆಗಿರುವ ಹಿಂದೆ ಇನ್ನೂ ಒಂದು ಸೂಕ್ಷ್ಮ ಸಂಗತಿಯಿದೆ. ಒಂದು ವೇಳೆ ನಾಯಕತ್ವ ಬದಲಾವಣೆ ನಿಕ್ಕಿಯಾಗಿ ಯಡಿಯೂರಪ್ಪ ಖುರ್ಚಿಯಿಂದ ಇಳಿಯುವ ಸಂದರ್ಭವೇನಾದರೂ ಬಂದರೇ, ಖಂಡಿತಾ ಬಿಎಸ್‌ವೈ ಸರ್ಕಾರವನ್ನು ಉರುಳಿಸುತ್ತಾರೆ ಎನ್ನುವ ಭಯ ಹೈಕಮಾಂಡ್ ಗೆ ಇದೆ. ಹೀಗಾಗಿಯೇ ಯಡಿಯೂರಪ್ಪನವರ ಜೊತೆ ಇಪ್ಪತ್ತೋ ಇಪ್ಪತೈದೂ ಶಾಸಕರು ಬಂಡಾಯವೆದ್ದು ಬೆಂಬಲ ವಾಪಾಸು ಪಡೆದರೂ ಕುಮಾರಸ್ವಾಮಿಯವರ ನೇತೃತ್ವದಲ್ಲಿ ಜೆಡಿಎಸ್ ಶಾಸಕರ ಸಹಕಾರದಿಂದ ಸರ್ಕಾರ ಉಳಿಸಿಕೊಳ್ಳುವ ಮಾಸ್ಟರ್ ಪ್ಲಾನ್ ಇದು. ಮೊದಲ ಅವಧಿಗೆ ಅಲ್ಲದಿದ್ದರೂ ಎರಡನೇ ಅವಧಿಗೆ ಕುಮಾರಸ್ವಾಮಿಯವರು ಮತ್ತೆ ಸಿಎಂ ಆಗಬಹುದು ಆದರೆ ಅದಕ್ಕಿಂತಲೂ ಮುಖ್ಯವಾಗಿ ರೇವಣ್ಣನವರನ್ನು ಡಿಸಿಎಂ ಮಾಡುತ್ತೇವೆ ಎಂದರೆ ರಾಜಕಾರಣದ ವೃದ್ಧ ಮಾಂತ್ರಿಕ ದೊಡ್ಡ ಗೌಡರು ಒಪ್ಪಿಯಾರು ಎನ್ನುವ ತರ್ಕ ಬಿಜೆಪಿಯ ಥಿಂಕ್ ಟ್ಯಾಂಕ್ ನದ್ದು.
ಸರ್ಕಾರಿ ಬಸ್ ನಿಂತು ನಾಲ್ಕು ದಿನಗಳಾಗಿ ೧೦೦ ಕೋಟಿಗೂ ಹೆಚ್ಚು ರಾಜ್ಯದ ಬೊಕ್ಕಸಕ್ಕೆ ನಷ್ಟವಾಯಿತು. ಖಾಸಗಿ ಚಾಲಕರು ನಿರ್ವಾಹಕರನ್ನು ಕರೆಸಿ ಬಸ್ ಚಲಾಯಿಸ್ತೀವಿ 10 ದಿನ ಕೆಲಸ ಮಾಡಿದ್ರೂ 3 ತಿಂಗಳ ಸಂಬಳ ಕೊಡ್ತೀವಿ ಅವರಿಗೆ ಅಂದಿತು ಸರ್ಕಾರ. ಎಸ್ಮಾ ಜಾರಿ ಮಾಡ್ತೀವಿ ಅಂತ ಹೆದರಿಸಿ ನೋಡಲಾಯ್ತು ಆಗಲೂ ಬಗ್ಗದಿದ್ದಾಗ ಮಾತುಕತೆಗೆ ಸಾರಿಗೆ ಸಂಘಟನೆಗಳನ್ನು ಆಹ್ವಾನಿಸಲಾಯಿತು. ತಮ್ಮ ಜೀವನ ಪರ್ಯಂತ ಸಾರಿಗೆ ನೌಕರರ ಸಮಸ್ಯೆಗಳಿಗಾಗಿ ಹೋರಾಡಿದ ಕಾಮ್ರೆಡ್ ಅನಂತ ಸುಬ್ಬುರಾವ್ ಆಟದಲ್ಲೇ ಇರಲಿಲ್ಲ. ಕೋಡಿಹಳ್ಳಿ ಚಂದ್ರಶೇಖರ್ ಮುಂದಿಟ್ಟುಕೊಂಡು ಆಟ ಕಟ್ಟಿದ್ದು ಯಾರು? ಸಾರಿಗೆ ಸಂಘಟನೆಯಲ್ಲಿ ಕಂದಕ ಸೃಷ್ಟಿಸಿ ಅವರ ಒಗ್ಗಟ್ಟು ಮುರಿಯುವ ಪ್ರಯತ್ನದ ಹಿಂದಿರುವುದು ಸರ್ಕಾರದ ಹಿತಾಸಕ್ತಿಯೋ? ಅಥವಾ ಯಡಿಯೂರಪ್ಪನವರ ಕೈ ಕಟ್ಟಿ ಹಾಕುವ ಷಡ್ಯಂತ್ರವೋ? ಅಷ್ಟಕ್ಕೂ ಈ ಕೋಡಿಹಳ್ಳಿ ಚಂದ್ರಶೇಖರ್ ಎನ್ನುವ ಸೀಸನಲ್ ಕಮರ್ಷಿಯಲ್ ಹೋರಾಟಗಾರ ಕಂ ರೈತನಾಯಕ ಯಾರ ಇಶಾರೆಯ ಮೇಲೆ ಸಾರಿಗೆ ಇಲಾಖೆಯ ಕಾರ್ಮಿಕರ ನಾಯಕರಾದರು. ಸವದಿ ವರ್ಸಸ್ ಕೋಡಿಹಳ್ಳಿ ಒಂದಾದ ಮೇಲೊಂದು ನಾಟಕದ ದೃಶ್ಯಗಳನ್ನು ಪ್ಲೇ ಮಾಡುತ್ತಿದ್ದಿದ್ದು ಯಾವ ಕಾರಣಕ್ಕೆ? ಇವೆಲ್ಲವೂ ಯಡಿಯೂರಪ್ಪನವರಿಗೆ ಗೊತ್ತಾಗದ ಆಟವೇನಲ್ಲ. ಈ ಆಟದ ಟ್ರಿಕ್ಕು ಗೊತ್ತಿದ್ದರಿಂದಲೇ ಸರ್ಕಾರದ ವತಿಯಿಂದ ೧೦ಕ್ಕೆ ೯ ಬೇಡಿಕೆಗಳಿಗೆ ಬೇಷರತ್ ಒಪ್ಪಿಗೆ ನೀಡಿದ್ದು. ಕೊನೆಗೆ ಮಂಗ ಆಗಿದ್ದು ಕೋಡಿಹಳ್ಳಿ ಚಂದ್ರಶೇಖರ್‌ರೇ.
ಗೋಹತ್ಯೆ ನಿಷೇದ ಕಾಯ್ದೆಯೂ ಯಡಿಯೂರಪ್ಪನವರ ಪ್ರತಿತಂತ್ರದ ಒಂದು ಭಾಗ. ಹಿಂದೂಗಳ ಭಾವನೆಯೇ ಓಟ್ ಬ್ಯಾಂಕ್ ಎಂದು ನಂಬಿಕೊಂಡ ಸಂಘದ ಶಾಲೆಯಲ್ಲಿ ಪಟ್ಟಾಗಿ ಕಲಿತವರು ಬಿಎಸ್‌ವೈ. ರಾಜಕಾರಣದ ಇಂತಹ ಚಾಲ್ ಗಳು ಅವರಿಗೆ ಲೀಲಾಜಾಲ. ಈಗ ಪೆಗ್ಗಿ ಬಿದ್ದಿದ್ದು ಮಾತ್ರ ಬಿಎಸ್‌ವೈ ಹಿತಶತ್ರುಗಳೇ. ಒಂದಾದ ಮೇಲೊಂದರಂತೆ ಬಾಣ ಬಿರುಸುಗಳಿಂದ ತಪ್ಪಿಸಿಕೊಳ್ಳುತ್ತಲೇ ಇರುವ ಯಡಿಯೂರಪ್ಪನವರು, ತಮಗಿನ್ನೂ ವೃದ್ಧಾಪ್ಯ ಬಂದಿಲ್ಲ ಎಂದು ತೋಳೇರಿಸಿ ಮೀಸೆ ಹುರಿಗೊಳಿಸುತ್ತಿದ್ದಾರೆ. ನಾಯಕತ್ವ ಬದಲಾವಣೆಯಾಗಬೇಕೆಂಬ ಕೂಗೂ ಈಗ ಅಸ್ಪಷ್ಟವಾಗಿದೆ. ಅಷ್ಟರಮಟ್ಟಿಗೆ ಯಡಿಯೂರಪ್ಪನವರ ರಾಜಕೀಯ ಚಾಣಾಕ್ಯತನ ವರ್ಕೌಟ್ ಆಗಿದೆ. ಆದರೆ ಕಾಲ ಹೀಗೆಯೇ ಇರುವುದಿಲ್ಲ ಅನ್ನುವುದು ಖುದ್ದು ಯಡಿಯೂರಪ್ಪನವರಿಗೂ ಗೊತ್ತು. ಮಲ್ಲೇಶ್ವರದ ಜಗನ್ನಾಥ ಭವನದಲ್ಲಿ, ಕೇಶವಕೃಪಾದಲ್ಲಿ ತಾವು ಕಲಿತ ಶಾಲೆಯ ತಮ್ಮದೇ ಸಹಪಾಠಿಗಳು ಮತ್ತೊಂದೇನನ್ನೋ ಮಾಡಲಿದ್ದಾರೆ ಎನ್ನುವುದೂ ಗೊತ್ತು. ಸದ್ಯಕ್ಕಂತೂ ಬೀಸುವ ದೊಣ್ಣೆಯಿಂದ ಪಾರಾಗಿದ್ದಾರೆ. ಖುರ್ಚಿಯಲ್ಲಿ ಉಳಿಯುವಷ್ಟು ದಿನ ಇರುವ ಏಕೈಕ ಗುರಿ ವಿಜಯೇಂದ್ರರ ಪಟ್ಟ ಗಟ್ಟಿ ಮಾಡುವುದು. ಇನ್ನೇನು ಗ್ರಾಮ ಪಂಚಾಯತಿ ಚುನಾವಣೆ ಮುಂದಿದೆ ಅದರ ಹಿಂದೆಯೇ ಬಿಬಿಎಂಪಿ ಚುನಾವಣೆಗಳಿವೆ. ಯಡಿಯೂರಪ್ಪನವರ ಪಳಗಿದ ರಾಜಕಾರಣದ ತಲೆ ಮತ್ತೊಂದು ಸುತ್ತಿನ ಶಸ್ತ್ರಾಸ್ತ್ರ ಬಳಕೆಯ ರಿಹರ್ಸಲ್ ನಡೆಸುತ್ತಿದೆ.
–ವಿಭಾ (ವಿಶ್ವಾಸ್ ಭಾರದ್ವಾಜ್)
***
ಸಾಕ್ಷಾಟಿವಿ ಸುದ್ದಿ ಸಂಪಾದಕ ವಿಶ್ವಾಸ್ ಭಾರದ್ವಾಜ್ ಅವರ ಕಿರು ಪರಿಚಯ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel