Congress – ದ್ವೇಷಭಾಷಣಕ್ಕೆ ಕಡಿವಾಣ | ಬಿಜೆಪಿ ನಾಯಕರ ಮಾತಿಗೆ ಬಂಡವಾಳ ಇಲ್ಲದಂತಾಗುತ್ತದೆ
ಬೆಂಗಳೂರು : 21 ನೇ ಶತಮಾನದಲ್ಲೂ ಧರ್ಮದ ಹೆಸರಿನಲ್ಲಿ ನಾವು ಎಲ್ಲಿಗೆ ತಲುಪಿದ್ದೇವೆ ಎಂದು ದ್ವೇಷದ ಭಾಷಣದ ಬಗ್ಗೆ ಸುಪ್ರೀಂ ಕೋರ್ಟ್ ಅಸಹನೆ ಹೊರಹಾಕಿದೆ.
ಅಲ್ಲದೆ ದ್ವೇಷ ಭಾಷಣ ಮಾಡುವವರ ವಿರುದ್ಧ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು, ಕ್ರಮ ತೆಗೆದುಕೊಳ್ಳಿ ಎಂದು ಮೂರು ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶ ನೀಡಿದೆ.
ಈ ಬಗ್ಗೆ ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿದ್ದು, ಬಿಜೆಪಿ ನಾಯಕರ ಮಾತಿಗೆ ಬಂಡವಾಳ ಇಲ್ಲದಂತಾಗುತ್ತದೆ ಎಂದು ಟೀಕೆ ಮಾಡಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ದ್ವೇಷ ಭಾಷಣಕ್ಕೆ ಕಡಿವಾಣ ಹಾಕಬೇಕೆಂದು ಸುಪ್ರೀಂ ಕಟ್ಟುನಿಟ್ಟಾಗಿ ಆದೇಶಿಸಿದೆ.

ಬಾಯಿ ತೆರೆದರೆ ದ್ವೇಷವನ್ನೇ ಉಗುಳುವ ಸಿ. ಟಿ ರವಿ, ಈಶ್ವರಪ್ಪ, ಯತ್ನಾಳ್, ತೇಜಸ್ವಿ ಸೂರ್ಯ, ಪ್ರತಾಪ್ ಸಿಂಹ ಮುಂತಾದ ಬಿಜೆಪಿ ನಾಯಕರ ಮಾತಿಗೆ ಬಂಡವಾಳ ಇಲ್ಲದಂತಾಗುತ್ತದೆ ಎಂದು ಕುಟುಕಿದೆ.
ಇನ್ನು ಸಚಿವ ಸಂಪುಟ ವಿಸ್ತರಣೆ ಬಗ್ಗೆ ಟ್ವೀಟ್ ಮಾಡಿ, ಮದುವೆ ಗಂಡುಗಳಿಗೆ ಕಂಕಣ ಭಾಗ್ಯ ನೀಡಲು ಬಿಜೆಪಿ ತಯಾರಿಲ್ಲ! ಮದುವೆ ಗಂಡುಗಳು ಆಸೆ ಬಿಟ್ಟಿಲ್ಲ!
ಸಂಪುಟ ವಿಸ್ತರಿಸಲು ಬಸವರಾಜ ಬೊಮ್ಮಾಯಿ ಅವರಿಗೆ ಇನ್ನೂ ಸಾಧ್ಯವಾಗದಿರುವುದು ಅವರ ಅಸಾಮರ್ಥ್ಯಕ್ಕೆ ಹಿಡಿದ ಕನ್ನಡಿ.
ತಿಂಗಳಿಗೊಮ್ಮೆ ದೆಹಲಿಗೆ ಹೋಗಿ ಬಂದರೂ ಸಿಕ್ಕ ಫಲವೇನು ಮುಖ್ಯಮಂತ್ರಿಗಳೇ? ಅತೃಪ್ತ ಆತ್ಮಗಳ ಕಾಟ ಎದುರಿಸಲು ಸಿದ್ಧರಾಗಿ ಎಂದು ವ್ಯಂಗ್ಯವಾಡಿದೆ.








