Malali Mosque : VHP ಅರ್ಜಿ ವಿಚಾರಣೆಗೆ ಅಂಗೀಕಾರ – ಮಸೀದಿ ಆಡಳಿತ ಮಂಡಳಿ ಅರ್ಜಿ ವಜಾ…
ಮಳಲಿ ಮಸೀದಿಯ ಸಮೀಕ್ಷೆ ನಡೆಸಲು ವಿಶ್ವ ಹಿಂದೂ ಪರಿಷತ್ ಸಲ್ಲಿಸಿದ್ದ ಮನವಿಯನ್ನ ಅಂಗೀಕರಿಸದಂತೆ ಮಳಲಿ ಮಸೀದಿ ಆಡಳಿತ ಸಮಿತಿ ಸಲ್ಲಿಸಿದ್ದ ಅರ್ಜಿಯನ್ನ ನ್ಯಾಯಾಲಯ ತಿರಸ್ಕರಿಸಿದೆ.
ಮಸೀದಿಯ ಸರ್ವೆ ನಡೆಸುವಂತೆ ವಿಎಚ್‌ಪಿ ಸಲ್ಲಿಸಿದ್ದ ಅರ್ಜಿಯನ್ನ ಅಂಗೀಕರಿಸಿದ ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಮಸೀದಿ ಆಡಳಿತ ಮಂಡಳಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.
ಮಳಲಿ ಮಸೀದಿಯಲ್ಲಿ ದೇವಾಲಯ ಮಾದರಿ ರಚನೆ ಇದೆ. ವಿಚಾರಣೆಗಾಗಿ ಕೋರ್ಟ್ ಕಮಿಷನರ್ ನೇಮಿಸಬೇಕು ಎಂದು ಹಿಂದುತ್ವ ಪರ ಸಂಘಟನೆಗಳು ಕೋರಿದ್ದವು. ಕಳೆದ ಬಾರಿಯ ವಿಚಾರಣೆಯ ವೇಳೆ ನ್ಯಾಯಾಲಯವು ‘ಸದ್ಯದ ಮಟ್ಟಿಗೆ ಮಳಲಿ ಮಸೀದಿ ಕಟ್ಟಡವನ್ನು ಯಥಾಸ್ಥಿತಿ ಕಾಯ್ದುಕೊಳ್ಳಬೇಕು’ ಎಂದು ಹೇಳಿತ್ತು.
ಈ ಸ್ಥಳವು ವಕ್ಫ್ ಮಂಡಳಿಗೆ ಸೇರಿದ್ದು, ಸಿವಿಲ್ ಕೋರ್ಟ್ ಅರ್ಜಿಯನ್ನ ಆಲಿಸಬಾರದು ಎಂದು ಮಸೀದಿಯು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿತ್ತು. ಇದೀಗ ವಿಎಚ್‌ಪಿಯ ಮನವಿಯನ್ನು ಸಿವಿಲ್ ನ್ಯಾಯಾಲಯ ಒಪ್ಪಿಕೊಂಡಿದ್ದು, ಮಂಗಳೂರು ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರಿಯಲಿದೆ.
ಯಾವುದೇ ಅಹಿತಕರ ಘಟನೆ ನಡೆಯದಂತೆ ಕರ್ನಾಟಕ ರಾಜ್ಯ ಮೀಸಲು ಪೊಲೀಸರು ಸಹಾಯಕ ಪೊಲೀಸ್ ಆಯುಕ್ತರ ಮಟ್ಟದಲ್ಲಿ ಬಂದೋಬಸ್ತ್ ಒದಗಿಸಲಿದ್ದು, ಉಪ ಪೊಲೀಸ್ ಆಯುಕ್ತರು, ಕಾನೂನು ಮತ್ತು ಸುವ್ಯವಸ್ಥೆ, ಬಂದೋಬಸ್ತ್ ಮೇಲ್ವಿಚಾರಣೆಗಾಗಿ ಮಳಲಿ ಮಸೀದಿಗೆ ಭೇಟಿ ನೀಡಲಿದ್ದಾರೆ.
ಮಂಗಳೂರು ಹೊರವಲಯದ ಗಂಜಿಮಠ ಬಳಿಯ ಮಳಲಿ ಬಳಿ ಅಸಯ್ಯಿದ್ ಅಬ್ದುಲ್ಲಾ ಹಿಲ್ ಮದನಿ ದರ್ಗಾವನ್ನು ನವೀಕರಣಕ್ಕಾಗಿ ಕೆಡವಿದಾಗ ಹಿಂದೂ ದೇಗುಲ ಹೋಲುವ ಆಕೃತಿಯ ವಾಸ್ತುಶಿಲ್ಪದ ಕಟ್ಟಡ ಪತ್ತೆಯಾಗಿತ್ತು. ಅಂದಿನಿಂದ ಈ ಕುರಿತು ವಿವಾದ ಉಂಟಾಗಿದೆ.
Karnataka court admits petition to survey Malali Mosque in Mangaluru, rejects Muslim group’s plea