ಕನ್ನಡ ಚಿತ್ರರಂಗದ ದಿಗ್ಗಜ, ಸಾಹಸಸಿಂಹ ದಿ. ವಿಷ್ಣುವರ್ಧನ್ ಅವರಿಗೆ ರಾಜ್ಯ ಸರ್ಕಾರ ಮರಣೋತ್ತರವಾಗಿ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಿ ಗೌರವಿಸಲು ನಿರ್ಧರಿಸಿದೆ. ದಶಕಗಳ ಕಾಲ ತಮ್ಮ ಸಾಹಸ, ನಟನಾ ಮೆರಗು, ಅಭಿಮಾನಿಗಳ ಹೃದಯದಲ್ಲಿ ಅಳಿಯದ ಸ್ಥಾನ ಗಳಿಸಿದ್ದ ವಿಷ್ಣುವರ್ಧನ್ ಅವರಿಗೆ ಈ ಅತ್ಯುನ್ನತ ಗೌರವ ಲಭಿಸುವುದರಿಂದ ಅಭಿಮಾನಿಗಳಲ್ಲಿ ಸಂತೋಷದ ವಾತಾವರಣ ನಿರ್ಮಾಣವಾಗಿದೆ.
ಇದೇ ವೇಳೆ, ಕನ್ನಡ ಸಿನಿರಂಗದ ಮತ್ತೊಬ್ಬ ಹಿರಿಯ ನಟಿ, ಬಿ. ಸರೋಜಾ ದೇವಿ ಅವರಿಗೂ ಸರ್ಕಾರ ‘ಕರ್ನಾಟಕ ರತ್ನ’ ಪ್ರಶಸ್ತಿ ಘೋಷಿಸಿದೆ. ದೀರ್ಘಕಾಲದ ತಮ್ಮ ಅದ್ಭುತ ಅಭಿನಯ ಮತ್ತು ಕನ್ನಡ, ತಮಿಳು, ತೆಲುಗು, ಹಿಂದಿ ಚಿತ್ರರಂಗದಲ್ಲಿ ಕೊಟ್ಟ ಕೊಡುಗೆಗಾಗಿ ಅವರನ್ನು ಸನ್ಮಾನಿಸಲಾಗಿದೆ.
ರಾಜ್ಯ ಸರ್ಕಾರದ ಈ ನಿರ್ಧಾರವನ್ನು ಕನ್ನಡಿಗರು, ಸಿನಿಪ್ರೇಮಿಗಳು ಹಾಗೂ ಅಭಿಮಾನಿಗಳು ಹರ್ಷದಿಂದ ಸ್ವಾಗತಿಸಿದ್ದಾರೆ. ವಿಷ್ಣುವರ್ಧನ್ ಮತ್ತು ಸರೋಜಾ ದೇವಿ ಅವರ ಸಾಧನೆಗಳನ್ನು ನೆನೆದು, ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಇವರ ಹೆಸರು ಚಿರಸ್ಥಾಯಿಯಾಗಿರುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.







