ಕಟೀಲ್ ಕಾರ್ಯವೈಖರಿಗೆ ಹೈ ಕಮಾಂಡ್ ಗರಂ : ಬದಲಾಗ್ತಾರಾ ರಾಜ್ಯ ಕೇಸರಿ ಸಾರಥಿ..?
ಬೆಂಗಳೂರು : ರಾಜ್ಯ ಕೇಸರಿ ಪಡೆಯ ಸಾರಥಿ ಸಂಸದ ನಳೀನ್ ಕುಮಾರ್ ಕಟೀಲ್ ವಿರುದ್ಧ ಬಿಜೆಪಿ ಹೈಕಮಾಂಡ್ ಫುಲ್ ಗರಂ ಆಗಿದೆ. ಕೋವಿಡ್ ವಿಚಾರವಾಗಿ ಕಟೀಲ್ ನಡೆದುಕೊಳ್ಳುತ್ತಿರುವ ರೀತಿ ದೆಹಲಿ ವರಿಷ್ಠರ ಕೆಂಗಣ್ಣಿಗೆ ಗುರಿಯಾಗಿದೆ. ಹೀಗಾಗಿ ಕರ್ನಾಟಕ ರಾಜ್ಯ ಬಿಜೆಪಿ ಸಾರಥಿ ಬದಲಾವಣೆ ಬಗ್ಗೆ ದೆಹಲಿಯಲ್ಲಿ ಚರ್ಚೆಗಳು ನಡೆಯುತ್ತಿವೆ ಎಂದು ಹೇಳಲಾಗುತ್ತಿದೆ.
ಹೌದು..! ಪಕ್ಷದ ವರಿಷ್ಠರು ಕಟೀಲ್ ಗೆ ರಾಜ್ಯಾಧ್ಯಕ್ಷ ಪಟ್ಟ ನೀಡುತ್ತಿದ್ದಂತೆ ಫುಲ್ ಆಕ್ಟೀವ್ ಆಗಿದ್ದ ಅವರು, ರಾಜ್ಯದಾದ್ಯಂತ ಪಾದರಸದಂತೆ ಸುತ್ತಾಡಿದ್ದರು. ವಿಪಕ್ಷಗಳ ವಿರುದ್ಧ ಗುಡುಗುತ್ತಾ ಪಕ್ಷ ಸಂಘಟನೆಗೆ ಮುಂದಾಗಿದ್ದರು. ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ಸಚಿವರ ಜೊತೆ ಸಮನ್ವತೆಯಿಂದ ಇದ್ದು, ಸರ್ಕಾರಕ್ಕೆ ಸೂಕ್ತ ರೀತಿಯ ಸಲಹೆಗಳನ್ನು ನೀಡುತ್ತಿದ್ದರು. ಆದ್ರೆ ಇದೀಗ ಕಟೀಲ್ ಫುಲ್ ಸೈಲೆಂಟ್ ಆಗಿದ್ದಾರೆ. ಅವರ ಕಾರ್ಯವೈಖರಿಯೇ ಬದಲಾಗಿ ಹೋಗಿದೆ.
ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾದರೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಯಾವ ಸಚಿವರ ಜೊತೆಯೂ ಸಭೆ ನಡೆಸಿಲ್ಲ. ಅಲ್ಲದೇ ಸರ್ಕಾರದ ಜೊತೆ ಸಭೆ ನಡೆಸುವ ಪ್ರಯತ್ನವನ್ನು ಮಾಡಿಲ್ಲ. ಇದು ಒಂದು ಕಡೆಯಾದ್ರೆ ಸದಾ ವಿಪಕ್ಷಗಳ ವಿರುದ್ಧ ಬುಸುಗುಡುತ್ತಿದ್ದ ಕಟೀಲ್ ಈಗ ಮೌನಕ್ಕೆ ಶರಣಾಗಿದ್ದಾರೆ. ಕಾಂಗ್ರೆಸ್ ನಾಯಕರು ಸರ್ಕಾರದ ವಿರುದ್ಧ ಮೇಲಿಂದ ಮೇಲೆ ಭ್ರಷ್ಟಾಚಾರದ ಆರೋಪಗಳನ್ನು ಮಾಡುತ್ತಿದ್ದರೂ, ತನಗೆ ಸಂಬಂಧವೇ ಇಲ್ಲದಂತೆ ಕಟೀಲ್ ನಡೆದುಕೊಳ್ಳುತ್ತಿದ್ದಾರೆ. ಈ ಎಲ್ಲಾ ಕಾರಣಗಳಿಂದ ಹೈಕಮಾಂಡ್ ಕಟೀಲ್ ವಿರುದ್ಧ ಫುಲ್ ಗರಂ ಆಗಿದೆ. ಅಲ್ಲದೆ ಎಚ್ಚರಿಕೆಯ ಸಂದೇಶವನ್ನು ಕೂಡ ವರಿಷ್ಠರು ರವಾನಿಸಿದ್ದು, ಕೂಡಲೇ ಉಪಕರಣಗಳ ಖರೀದಿ ಸೇರಿದಂತೆ ರಾಜ್ಯದ ಪರಿಸ್ಥಿತಿ ಬಗ್ಗೆ ಸಂಪೂರ್ಣ ಮಾಹಿತಿ ರವಾನಿಸುವಂತೆ ಕಟೀಲ್ ಗೆ ಸೂಚನೆ ನೀಡಿದೆ.
ಮೂಲಗಳ ಪ್ರಕಾರ ನಳೀನ್ ಕುಮಾರ್ ಕಟೀಲ್ ವೈಖರಿ ಬಗ್ಗೆ ಬೇಸತ್ತಿರುವ ಬಿಜೆಪಿ ನಾಯಕರು ಕರ್ನಾಟಕ ರಾಜ್ಯ ಸಾರಥಿಯ ಬದಲಾವಣೆ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.








