ಕಾಶ್ಮೀರ ವಿಲೋ.. ಬರೀ ಬ್ಯಾಟ್ ಅಲ್ಲ.. ವಿಶ್ವ ಕ್ರಿಕೆಟ್ನಲ್ಲಿ ಭಾರತದ ಹೆಗ್ಗುರುತು..!
=========
ಕ್ರಿಕೆಟ್ ಆಟಕ್ಕೂ ಜಮ್ಮು ಕಾಶ್ಮೀರಕ್ಕೂ ಅವಿನಾಭಾವ ಸಂಬಂಧವಿದೆ. ವೇಗದ ಎಸೆತವೇ ಆಗಿರಲಿ, ಸ್ಪಿನ್ ಎಸೆತವೇ ಆಗಿರಲಿ..ಕೈಯಲ್ಲಿ ಕಾಶ್ಮೀರ ವಿಲೊ ಬ್ಯಾಟ್ ಇದ್ರೆ ಸಾಕು…!
ಹೌದು, ಕ್ರಿಕೆಟ್ ಕಲಿಯುವ, ಆಡುವ ಹುಡುಗರಿಗೆ ಕಾಶ್ಮೀರ ವಿಲೋ ಬ್ಯಾಟ್ ಮೊದಲ ಆಯ್ಕೆ. ಅಷ್ಟೇ ಯಾಕೆ, ಸಚಿನ್ ತೆಂಡುಲ್ಕರ್ನಂತಹ ವಿಶ್ವ ಶ್ರೇಷ್ಠ ಬ್ಯಾಟರ್ ಕೂಡ ತನ್ನ ಆರಂಭದ ದಿನಗಳಲ್ಲಿ ಕಾಶ್ಮೀರ ವಿಲೋ ಬ್ಯಾಟ್ಗಳನ್ನೇ ಬಳಕೆ ಮಾಡುತ್ತಿದ್ದರು.
ಕಾಶ್ಮೀರ ವಿಲೋ ಅನ್ನೋದು ಬರೀ ಬ್ಯಾಟ್ ಅಲ್ಲ. ಕ್ರಿಕೆಟ್ ಜಗತ್ತಿನಲ್ಲಿ ಭಾರತದ ಹೆಮ್ಮೆಯ ಪ್ರತೀಕ. ಇಂಗ್ಲೀಷ್ ವಿಲೋಗಳಿಗೆ ಪ್ರಬಲ ಪೈಪೆÇೀಟಿ ಒಡ್ಡಿದ್ದ ಏಕೈಕ ಬ್ಯಾಟ್ ಅಂದ್ರೆ ಅದು ಕಾಶ್ಮೀರ ವಿಲೋ ಬ್ಯಾಟ್.
ಅಷ್ಟಕ್ಕೂ ಕಾಶ್ಮೀರ ವಿಲೋ ಬ್ಯಾಟ್ ತಯಾರು ಮಾಡುವುದು ಸ್ಯಾಲಿಕ್ಸ್ ಆಲ್ಬಾ ಕೆರುಲಿಯಾ ಎಂಬ ಮರದಿಂದ. ಜಮ್ಮು ಕಾಶ್ಮೀರದಲ್ಲಿ ಈ ಮರಗಳ ಗಿಡಗಳನ್ನು ಮೊದಲು ಬೆಳೆಸಿದವರು ಇಂಗ್ಲೀಷರು. ಜಮ್ಮು ಕಾಶ್ಮೀರದ ಹವಾಗುಣ ಈ ಮರಗಳ ಬೆಳವಣಿಗೆಗೆ ಸೂಕ್ತವಾಗಿತ್ತು. ಹೀಗಾಗಿ ಕಾಶ್ಮೀರ ಕಣಿವೆಯಲ್ಲಿ ಸ್ಯಾಲಿಕ್ಸ್ ಆಲ್ಬಾ ಕೆರುಲಿಯಾ ಮರದ ಗಿಡಗಳನ್ನು ನೆಟ್ಟ ಆಂಗ್ಲರಿಗೆ ಕೊನೆಗೆ ಇದೇ ಮುಳುವಾಗುತ್ತೆ ಅಂತ ಅಂದುಕೊಂಡಿರಲಿಲ್ಲ. ಭಾರತದಲ್ಲಿ ಕ್ರಿಕೆಟ್ ಆಟವನ್ನು ಪರಿಚಯಿಸಿದ್ದ ಆಂಗ್ಲರಿಗೆ, ಮುಂದೊಂದು ದಿನ ಆಟ ಮಾತ್ರವಲ್ಲ, ಆಡುವ ಬ್ಯಾಟ್ ಕೂಡ ತಿರುಗುಬಾಣವಾಗುತ್ತದೆ ಎಂದು ಊಹೆ ಕೂಡ ಮಾಡಿರಲಿಕ್ಕಿಲ್ಲ. ಅದರಲ್ಲೂ ಅನಂತನಾಗ್ ಮತ್ತು ಪುಲ್ವಾಮ ನಗರಗಳು ಕಾಶ್ಮೀರ ವಿಲೋ ಬ್ಯಾಟ್ ತಯಾರಿಕೆಯ ಪ್ರಮುಖ ಕೇಂದ್ರಗಳಾಗಿ ವಿಶ್ವ ವಿಖ್ಯಾತಿಯನ್ನು ಪಡೆದುಕೊಂಡಿವೆ.
ಸಾಮಾನ್ಯವಾಗಿ ಸ್ಯಾಲಿಕ್ಸ್ ಆಲ್ಬಾ ಕೆರುಲಿಯಾ ಎಂಬ ಮರದಿಂದಲೇ ಕ್ರಿಕೆಟ್ ಬ್ಯಾಟ್ಗಳನ್ನು ತಯಾರು ಮಾಡಲಾಗುತ್ತದೆ. ಈ ಮರಗಳು ಇಂಗ್ಲೆಂಡ್ನಲ್ಲೂ ಇವೆ. ಆದ್ರೆ ಜಮ್ಮು – ಕಾಶ್ಮೀರದ ಮರಗಳಿಗೂ ಇಂಗ್ಲೆಂಡ್ನಲ್ಲಿರುವ ಮರಗಳಿಗೂ ಕೆಲವೊಂದು ವ್ಯತ್ಯಾಸಗಳಿವೆ. ಇಂಗ್ಲೆಂಡ್ನಲ್ಲಿ ತಯಾರಾಗುವ ಬ್ಯಾಟ್ಗಳಿವೆ ಇಂಗ್ಲಿಷ್ ವಿಲೋ ಎಂಬ ಬ್ರ್ಯಾಂಡ್ ಅಂಟಿಕೊಂಡಿದೆ. ಈ ಇಂಗ್ಲಿಷ್ ವಿಲೋ ಬ್ಯಾಟ್ಗಳು ಆಂಗ್ಲರಂತೆ ಬಿಳಿ ಬಣ್ಣವನ್ನು ಹೊಂದಿರುತ್ತವೆ. ತೂಕದಲ್ಲಿ ಹಗುರವಾಗಿರುತ್ತವೆ. ಆದ್ರೆ ಕಾಶ್ಮೀರ ವಿಲೋ ಬ್ಯಾಟ್ಗಳು ತೂಕ ಜಾಸ್ತಿ ಇದ್ದು, ಕಂದು ಬಣ್ಣದಲ್ಲಿರುತ್ತವೆ. ಹಾಗೇ ಇಂಗ್ಲಿಷ್ ವಿಲೋಗಳು ದುಬಾರಿಯಾದ್ರೆ, ಕಾಶ್ಮೀರ ವಿಲೋ ಬ್ಯಾಟ್ಗಳು ಜನ ಸಾಮಾನ್ಯರಿಗೂ ಕೈಗೆಟಕುವ ದರದಲ್ಲಿ ಸಿಗುವುದರಿಂದ ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಜೊತೆಗೆ ಬಾಳಿಕೆ ಕೂಡ ಹೆಚ್ಚು ಬರುವುದರಿಂದ ಯುವ ಕ್ರಿಕೆಟಿಗರ ಮೊದಲ ಆಯ್ಕೆ ಕಾಶ್ಮೀರ ವಿಲೋ ಬ್ಯಾಟ್ ಆಗಿದೆ.
ಅಷ್ಟೇ ಅಲ್ಲ, ಹಿಂದೆ ಕಾಶ್ಮೀರ ವಿಲೋ ಬ್ಯಾಟ್ಗಳು ಅಭ್ಯಾಸ ಪಂದ್ಯಗಳಿಗೆ ಮಾತ್ರ ಸೀಮಿತವಾಗಿರುತ್ತಿತ್ತು. ಆದ್ರೆ ಈಗ ಅದರಲ್ಲೂ ಚುಟುಕು ಕ್ರಿಕೆಟ್ನಲ್ಲಿ ಕಾಶ್ಮೀರ ವಿಲೋ ಬ್ಯಾಟ್ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾದಲ್ಲಿ ಕಾಶ್ಮೀರ ವಿಲೋ ಬ್ಯಾಟ್ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಟಗಾರರು ಬಳಸುತ್ತಿದ್ದಾರೆ. ಅಷ್ಟೇ ಅಲ್ಲ, ಬ್ಯಾಟ್ ತಯಾರಿಕೆಯ ಕಂಪೆನಿಗಳಿಗೂ ಕಾಶ್ಮೀರ ವಿಲೋ ಅಚ್ಚುಮೆಚ್ಚಿನ ಉತ್ಪನ್ನವಾಗಿದೆ.
ಇದೀಗ ಆಧುನಿಕ ಕ್ರಿಕೆಟ್ ಆಟದ ತಂತ್ರಜ್ಞಾನಕ್ಕೆ ತಕ್ಕಂತೆ ಕಾಶ್ಮೀರ ವಿಲೋ ಬ್ಯಾಟ್ಗಳು ತಯಾರಾಗುತ್ತಿವೆ. ಅಷ್ಟರ ಮಟ್ಟಿಗೆ ವಿಶ್ವ ಕ್ರಿಕೆಟ್ನಲ್ಲಿ ಕಾಶ್ಮೀರ ವಿಲೋ ಬ್ಯಾಟ್ಗಳು ಹೆಗ್ಗುರುತನ್ನು ಮೂಡಿಸಿದೆ.
ತನ್ನ ನೆಲದಲ್ಲಿ ಬೆಳೆದ ಮರದಿಂದ ತಯಾರಾದ ಬ್ಯಾಟ್ನಿಂದಲೇ ಜಮ್ಮು ಕಾಶ್ಮೀರದ ಹುಡುಗರು ಆಟವಾಡುತ್ತಾ ಇದೀಗ ಪ್ರತಿಷ್ಠಿತ ದೇಸಿ ಕ್ರಿಕೆಟ್ ರಣಜಿ ಟೂರ್ನಿಯ ಫೈನಲ್ನಲ್ಲಿ ಕರ್ನಾಟಕದ ವಿರುದ್ಧ ಹುಬ್ಬಳ್ಳಿಯಲ್ಲಿ ಆಡುತ್ತಿದ್ದಾರೆ.








