ಹೊತ್ತಿ ಉರಿದ ಡಿಜಿ ಹಳ್ಳಿ ಕಾವಲ್ ಭೈರಸಂದ್ರ; ಗಲಭೆಯ ಹಿಂದಿರುವ ವಿಧ್ವಂಸಕ ಶಕ್ತಿಗಳಾವುವು? ಘಟನೆಯ ಹಿಂದೆಯೇ ಹುಟ್ಟಿಕೊಂಡ ಪ್ರಶ್ನೆಗಳು
ಕೆಜಿ ಹಳ್ಳಿ ವ್ಯಾಪ್ತಿಯಲ್ಲಿ ವಿನಾಕಾರಣ ಗಲಭೆ ಎದ್ದು ಮೂರು ಹೆಣ ಬಿದ್ದಿದೆ. ಎಂಎಲ್ಎ ಮನೆ, ಪೊಲೀಸ್ ಸ್ಟೇಷನ್, ಪೋಲಿಸ್ ವಾಹನಗಳಿಗೆ ಬೆಂಕಿ ಬಿದ್ದಿದೆ. ಹತ್ತಾರು ಪೊಲೀಸರಿಗೆ ಗಾಯವಾಗಿದೆ. ಕೆಎಸ್ಆರ್ಪಿ ತುಕಡಿಯ ಬಸ್ ಗೆ ಬೆಂಕಿ ಹಾಕಿದರು. ಒಂದು ಮನೆ ಹೊತ್ತಿ ಹುರಿಯಿತು. ಹತ್ತು ಹಲವು ಸಾರ್ವಜನಿಕರ ಬೈಕು ಕಾರುಗಳಿಗೆ ಬೆಂಕಿ ಹಚ್ಚಲಾಯಿತು.
ಕಾವಲ್ ಭೈರಸಂದ್ರ, ಕೆಜಿ ಹಳ್ಳಿ ಹಾಗೂ ಡಿಜಿ ಹಳ್ಳಿ ಸುತ್ತಮುತ್ತ ನಿನ್ನೆ ಶ್ರೀಕೃಷ್ಣ ಜನ್ಮಾಷ್ಟಮಿ ದಿನದಂದೇ ಸಾವಿರಾರು ಜನ ದಾಂದಲೆ ಎಬ್ಬಿಸಿ ಬೆಂಕಿ ಹಚ್ಚುವಂತಹ ಸಮಾಜಘಾತುಕ ದುರ್ಘಟನೆ ನಡೆಯಲು ಕಾರಣವಾಗಿದ್ದೇನು? ಇದೊಂದು ತಕ್ಷಣದ ಪ್ರತಿಕ್ರಿಯೆ ಎಂದು ಯಾವ ಕೋನದಿಂದಲೂ ಅನ್ನಿಸುತ್ತಿಲ್ಲ. ಇದು ಅತಿರೇಕಿಗಳ, ಉದ್ರಿಕ್ತರ ಪ್ರಕ್ಷುಬ್ಧ ಉಗ್ರ ಪ್ರತಿಕ್ರಿಯೆ ಎನ್ನಿಸುತ್ತಿಲ್ಲ. ಈ ಘಟನೆಯಲ್ಲಿ ಸ್ಥಳೀಯರು ಭಾಗಿಯಾದಂತೆ ಕಾಣುತ್ತಿಲ್ಲ.
ಮುಖ್ಯವಾಗಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಕೂಡಲೇ ಚಪ್ಪಾಳೆ ತಟ್ಟಿ ವಿಕೃತವಾಗ ಆನಂದ ಪಟ್ಟರಂತೆ. ಹಾಗಿದ್ದರೇ, ಪ್ರತಿಭಟನಾಕಾರರ ಟಾರ್ಗೆಟ್ ಇದ್ದಿದ್ದು ಏನು? ಶಾಸಕ ಅಖಂಡ ಶ್ರೀನಿವಾಸ ಮೂರ್ತಿಯವರ ಅಳಿಯ ನವೀನ್ ಎಂಬುವಾತ ಪ್ರವಾಧಿ ಮೊಹಮದ್ ವಿರುದ್ಧ ಆಕ್ಷೇಪಾರ್ಹ ಫೇಸ್ ಬುಕ್ ಪೋಸ್ಟ್ ಮಾಡಿದ್ದೇ ಕಾರಣವಾಗಿದ್ದರೇ, ಅದನ್ನು ಕಾನೂನು ಕ್ರಮ ಜರುಗಿಸುವ ಮೂಲಕ ಬಗೆಹರಿಸಬಹುದಿತ್ತು. ವಿದ್ವಂಸ ಎಸಗುವ ಮೂಲಕ ಅಲ್ಲಿ ನೆರೆದಿದ್ದ ಪ್ರತಿಭಟನಾಕಾರರು ಸಾಧಿಸಿದ್ದೇನು? ಅವರ ಅಸಲು ಉದ್ದೇಶವೇನಿತ್ತು? ಇದರ ಹಿಂದೆ ರಾಜಕೀಯ ದುರುದ್ದೇಶವೇನಾದರೂ ಇತ್ತೇ? ಇಂತಹ ಹತ್ತಾರು ಪ್ರಶ್ನೆಗಳು ಈ ಕ್ಷಣದಲ್ಲಿ ನಮ್ಮ ಮುಂದಿವೆ. ಇದಕ್ಕೆಲ್ಲಾ ಸಂಬಂಧ ಪಟ್ಟವರು ಶೀಘ್ರದಲ್ಲೇ ಉತ್ತರಿಸಬೇಕಾಗಿದೆ. ಸರ್ಕಾರದ ಪ್ರತಿನಿಧಿಗಳು ತಮ್ಮ ವೈಫಲ್ಯವನ್ನು ಮರೆಮಾಚದೇ ನ್ಯಾಯಬದ್ಧ ತನಿಖೆ ನಡೆಸಬೇಕಾಗಿದೆ.
ನಿನ್ನೆ ನಡೆದ ಆತಂಕಕಾರಿ ಭಯ ಹುಟ್ಟಿಸುವ, ಸಮಾಜದ ನೆಮ್ಮದಿಗೆ ಭಂಗ ತಂದ ಘಟನೆಯಲ್ಲಿ ಸತ್ತವರು ಅಮಾಯಕರಾ? ಗೂಂಡಾಗಳಾ? ಧರ್ಮಾಂದರಾ? ಯಾವುದಾದರೂ ಪಕ್ಷದ ಕಾರ್ಯಕರ್ತರಾ? ಅಥವಾ ಮಾಧಕದ್ರವ್ಯದ ವ್ಯಸನಿಗಳಾ? ಎಲ್ಲಿಂದ ಬಂದರು ಏಕಾಏಕಿ ಸಾವಿರಾರು ಜನ? ನಮ್ಮ ಸರ್ಕಾರದ ಇಂಟಲಿಜೆನ್ಸ್ ವಿಭಾಗಕ್ಕೆ ಇಂತದ್ದೊಂದು ದೊಡ್ಡ ಗಲಭೆಯ ಕಿಂಚಿತ್ತೂ ಸುಳಿವಿರಲಿಲ್ಲವೇ? ಗಲಭೆಯಾಗಿ ನಾಲ್ಕೈದು ಗಂಟೆಯ ನಂತರವೂ ಪೊಲೀಸರು ನಿಧಾನಗತಿಯಲ್ಲಿ ಕಾರ್ಯಾಚರಣೆ ನಡೆಸಿದ್ದೇಕೆ?
ಇದರ ಮಧ್ಯೆ ಅದೇ ವ್ಯಾಪ್ತಿಯ ದೇವಸ್ಥಾನವೊಂದಕ್ಕೆ ನೂರಾರು ಮುಸಲ್ಮಾನ ಸಹೋದರರು ಮಾನವ ಸರಪಳಿ ನಿರ್ಮಿಸಿ ಕಾವಲು ಕಾದಿದ್ದಾರೆ. ಧರ್ಮ ಯಾವುದಾದರೇನು ಅದೂ ಶ್ರದ್ಧಾ ಕೇಂದ್ರೆವೇ ಅದಕ್ಕೆ ಹಾನಿ ಮಾಡಲು ಬಿಡುವುದಿಲ್ಲ ಅಂತ ಒಬ್ಬ ಮುಸಲ್ಮಾನ ಯುವಕ ಮಾತಾಡುತ್ತಿದ್ದ. ಹತ್ತಾರು ವರ್ಷಗಳಿಂದ ಅವರು ಅದೇ ದೇವಸ್ಥಾನದ ಬೀದಿಯಲ್ಲಿ ತಿರುಗಾಡಿದ್ದಾರೆ. ಅಲ್ಲಿನ ಹಿಂದೂಗಳ ಜೊತೆ ಬೆರೆತು ಕೂಡಿ ಬದುಕಿದ್ದಾರೆ. ತಮ್ಮವರಿಂದ ದೇವಸ್ಥಾನಕ್ಕೆ ಹಾನಿಯಾಗಬಹುದು ಎಂದು ಹೀಗೊಂದು ನಿರ್ಧಾರಕ್ಕೆ ಬಂದ ಆ ಯುವಕರ ಕ್ರಮ ನಿಜಕ್ಕೂ ಶ್ಲಾಘನೀಯವೇ. ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೇ ಅಲ್ಲಿನ ಸ್ಥಳೀಯರಿಗಿಂತ ಹೊರಗಿನವರೇ ಹೆಚ್ಚಿದ್ದರೇ? ಸತ್ತ 40 ವರ್ಷದವನು ಸ್ಥಳೀಯನಲ್ಲ ಅವನ ಗುರುತು ಪತ್ತೆಯಾಗಿಲ್ಲ. ಹಾಗಿದ್ದರೇ ಎಲ್ಲಿಂದ ಬಂದನಾತ? ಪಾದರಾಯನಪುರ ಅನ್ನುವುದೇ ಒಂದು ಅನಿಷ್ಟ ಪ್ರದೇಶ. ಅಲ್ಲಿ ಹೆಚ್ಚಾಗಿ ಓಡಾಡುವವರು, ಅಡಗುವವರು ಕ್ರಿಮಿನಲ್ ಗಳೇ! ಕಾವಲ್ ಭೈರಸಂದ್ರದ ಘಟನೆಯಲ್ಲಿ ಪಾದರಾಯನಪುರದ ಸಮಾಜಘಾತುಕರಿದ್ದಾರೆ ಎಂದು ಮಾಹಿತಿ ಬರುತ್ತಿದೆ. ಕೇರಳದಿಂದಲೂ ಕೆಲವರು ಬಂದಿದ್ದರು ಎಂದು ಮಾಧ್ಯಮಗಳು ವರದಿ ಮಾಡುತ್ತಿವೆ. ಈ ಸಂಗತಿಗಳು ಪ್ರಮುಖವಾಗಿ ತನಿಖೆಯಾಗಬೇಕಿದೆ.
ನಿನ್ನೆ ಕಾವಲ್ ಭೈರಸಂದ್ರ ಮತ್ತು ಸುತ್ತಮುತ್ತ ಗಲಭೆ ಮಾಡಿ ಬೆಂಕಿ ಹಚ್ಚಿ ವಿಕೃತವಾಗಿ ಕೇಕೆ ಹಾಕಿ ನಕ್ಕವರಿದ್ದಾರಲ್ಲ ಅವರು ನಿಜವಾದ ದೇಶದ್ರೋಹಿಗಳು. ಮೊದಲು ಅವರನ್ನು ಮಟ್ಟ ಹಾಕಬೇಕು. ಸಮಾಜ ಅಂದರೆ ಅಲ್ಲಿ ಎಲ್ಲರೂ ಬದುಕುವ ಸೌಹಾರ್ಧ ವಾತಾವರಣವಿರಬೇಕು. ಇದರ ಹಿಂದೆ ಅದ್ಯಾವನೇ ಬೇವರ್ಸಿ ರಾಜಕಾರಣಿ ಇದ್ದರೂ, ಮುಲಾಜಿಲ್ಲದ ಕ್ರಮಕ್ಕೆ ಮುಂದಾಗಬೇಕು. ಮುಂಬರುವ ಬಿಬಿಎಂಪಿ ಚುನಾವಣೆಯ ಕಾರಣ ಈ ಗಲಭೆಯೂ ರಾಜಕೀಯ ಪ್ರೇರಿತ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಪ್ರವಾಧಿ ಮೊಹಮದ್ ರ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಸೋದರಳಿಯ ನವೀನ್ ಹಾಗೂ ಈ ಸಂಪೂರ್ಣ ಗಲಭೆಯ ಮೂಲಸೂತ್ರಧಾರಿ ಎಸ್.ಡಿ.ಪಿ.ಐ ನ ಮುಜಾಮಿಲ್ ಪಾಶಾ ಇಬ್ಬರೂ ಬಿಬಿಎಂಪಿ ಚುನಾವಣೆಯ ತಯಾರಿಯಲ್ಲಿದ್ದರಂತೆ. ಅಲ್ಲಿಗೆ ಇದರ ಹಿಂದೆ ರಾಜಕಾರಣದ ಹುನ್ನಾರವಿದೆ, ಇದು ಖಂಡಿತಾ ಅಕ್ಷಮ್ಯ.
ಪುಲಿಕೇಶಿ ನಗರದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿಯವರು ಈ ಭಾಗದ ಜನಪ್ರಿಯ ನಾಯಕರಾಗಿದ್ದವರು. ಸತತವಾಗಿ ಚುನಸವಣೆಯಲ್ಲಿ ಗೆದ್ದು ಬಂದವರು. ಈ ದೃಷ್ಟಿಯಲ್ಲಿ ನೋಡುವುದಾದರೇ ಸ್ಥಳೀಯ ಅವರ ಮತದಾರೇ ಅವರ ಮನೆಗೆ ಬೆಂಕಿ ಹಚ್ಚುವ ಅತಿರೇಕಕ್ಕೆ ಹೋಗುವುದಿಲ್ಲ. ಇದು ಹೊರಗಿನಿಂದ ಬಂದವರದ್ದೇ ಕೃತ್ಯ. ಇದು ನಿನ್ನೆಯ ದಿಢೀರ್ ಪ್ರತಿಕ್ರಿಯೆ ಅಲ್ಲ ಅನ್ನುವುದು ಸ್ಪಷ್ಟ. ಇದೊಂದು ಪೂರ್ವನಿಯೋಜಿತ ಸಂಚು. ಪೊಲೀಸರಿಗೆ ಮನೆಗಳ ಮೇಲಿಂದ ಕಲ್ಲು ಬಾಟಲಿಗಳು ಬೀಳುತ್ತಿದ್ದವು ಅಂದರೆ ಇದೊಂದು ಪ್ರೀ ಪ್ಲಾನ್ಡ್ ಕೃತ್ಯವೇ. ವಾರಗಳ ತಿಂಗಳುಗಳಿಂದ ಈ ದೊಡ್ಡ ಮಟ್ಟದ ಗಲಭೆಗೆ ಯೋಜನೆ ರೂಪಿಸಿದ್ದಾರೆ. ಇನ್ನೂ ಗಮನಿಸಬೇಕಿರುವ ಸಂಗತಿ ಅಂದರೆ ಮುಂಬರುವ ಅಪಾಯವನ್ನೂ ಮರೆತು ದೊಂಬಿ ಎಬ್ಬಿಸುತ್ತಿದ್ದ ಗಲಭೆಕೋರರು ಖಂಡಿತಾ ಪ್ರಜ್ಞೆಯಲ್ಲಿ ಇರಲಿಲ್ಲ. ಅವರೆಲ್ಲಾ ಗಾಂಜಾ ವ್ಯಸನಿಗಳೇ ಎಂಬ ಸಂದೇಹವೂ ಇದೆ. ಆ ಭಾಗದಲ್ಲಿ ಮಾಧಕ ದ್ರವ್ಯ ಮಾರಾಟದ ದಂದೆ ಹಿಂದಿನಿಂದಲೂ ನಡೆದೇ ಇದೆ.
ಇದೇ ವೇಳೆ ಗಲಭೆ ಶುರುವಾಗುವ ಮೊದಲೇ ಚಾಮರಾಜಪೇಟೆಯ ಶಾಸಕ ಜಮೀರ್ ಅಹ್ದದ್ ಖಾನ್ ಅಲ್ಲಿಗೆ ತಲುಪಿದ್ದು ಹೇಗೆ ಮತ್ತು ಯಾಕೆ? ಜಮೀರ್ ಅಹ್ಮದ್ ಖಾನ್ ತಲುಪಿ ಮಾತುಕಥೆಗೆ ಮುಂದಾದ ನಂತರವೇ ಗಲಭೆ ದೊಡ್ಡದಾಯಿತು. ಅಂದರೆ ಇಂತಹದ್ದೊಂದು ದೊಡ್ಡ ಗಲಭೆ ನಡೆಯುತ್ತದೆ ಎಂದು ಜಮೀರ್ ಸಾಹೇಬರಿಗೆ ಗೊತ್ತಿತ್ತಾ? ಗೊತ್ತಿದ್ದರೇ, ಪೊಲೀಸರ ಗಮನಕ್ಕೆ ತರಲಿಲ್ಲ ಯಾಕೆ? ಇದರ ವಸ್ತುನಿಷ್ಟ ನ್ಯಾಯಾಂಗ ತನಿಖೆ ನಡೆಯುವುದೇ ಆದರೆ ಜಮೀರ್ ಅಹ್ಮದ್ ಖಾನ್ ರವರನ್ನೂ ವಿಚಾರಣೆಗೆ ಒಳಪಡಿಸಬೇಕು.
ಈ ದೇಶ ಎಲ್ಲರದ್ದೂ ಹೌದು. ನಿನ್ನೆ ಭಯ ಭೀತಿ ಆತಂಕಗಳ ನಡುವೆಯೂ ಮಂದಿರ ಕಾದ ಮುಸಲ್ಮಾನ ಯುವಕರು ಸೌಹಾರ್ಧೆತೆಯ ಪ್ರಾಕ್ಟಿಕಲ್ ಪಾಠ ಹೇಳಿಕೊಟ್ಟಿದ್ದಾರೆ. ಈ ಕೋಮು ಗಲಭೆಯ ಹಿಂದೆ ಯಾವುದಾದರೊಂದು ರಾಜಕೀಯ ಷಡ್ಯಂತ್ರವಿದ್ದೇ ಇರತ್ತೆ. ರಾಜಕೀಯ ಮತ್ತು ಧರ್ಮವನ್ನು ಬೆರೆಸಿ ರಕ್ತದ ಕೋಡಿ ಹರಿಸಿ ಸಾಮ್ರಾಜ್ಯ ಕಟ್ಟುವ ಅನಿಷ್ಟ ಪರಂಪರೆಗೆ ಮಂಗಳ ಹಾಡಬೇಕಿದೆ. ಕಾವಲ್ ಭೈರಸಂದ್ರದಲ್ಲಿ ಬೆಂಕಿ ಹಚ್ಚಿ ವಿಕೃತವಾಗಿ ಅಟ್ಟಹಾಸಗೈದ ಕಿಡಿಗೇಡಿಗಳು ಯಾರೇ ಆಗಿರಲಿ ಹಿಡಿದು ಚಮಡಾ ಸುಲಿದು ಹಾಕಬೇಕು. ಇದು ಪೂರ್ವನಿಯೋಜಿತವೋ ತಕ್ಷಣದ ಪ್ರತಿಕ್ರಿಯೆಯೋ ಬೇರೆ ವಿಚಾರ. ಸಮಾಜದ ನೆಮ್ಮದಿಗೆ ಬೆಂಕಿ ಹಚ್ಚುವ ಯಾವುದೇ ದುಷ್ಕರ್ಮಿಗಳಿರಲಿ ಮುಲಾಜಿಲ್ಲದೆ ನರ ಕತ್ತರಿಸಿ ಬಿಸಾಕಬೇಕಷ್ಟೆ. ನಿನ್ನೆಯ ಘಟನೆಯ ವಿಷ್ಯುಯಲ್ಸ್ ಗಳು ಸಮಾಜದ ನೆಮ್ಮದಿಗೆ ಬೆಂಕಿ ಇಟ್ಟಿದೆ. ನಮ್ಮ ಪೊಲೀಸರಿಗೆ ಇದೊಂದು ನಿಜವಾದ ಅಗ್ನಿಪರೀಕ್ಷೆ. ಸಮಾಜದ ಶಾಂತಿಗೆ ಭಂಗ ತರುವ ಯಾವುದೇ ಸಮಾಜ ಘಾತುಕರನ್ನು ಒದ್ದು ಬುದ್ದಿಕಳಿಸದಿದ್ರೆ ಮುಂದೆ ಇವರೇ ಸಮಾಜಕಂಟಕರಾಗ್ತಾರೆ.
ಇನ್ನು ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಧರ್ಮ ಯಾವುದೇ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆಯಾಗುವ ಹಾಗೆ ಪೋಸ್ಟ್ ಗಳನ್ನು ಹಾಕುವುದು ನಿಲ್ಲಬೇಕು. ಉರಿವ ಚಿತೆಯ ಬೆಂಕಿಯಲ್ಲಿ ನಾವು ಯಾವ ಆಹಾರವನ್ನೂ ಬೇಯಿಸಲು ಸಾಧ್ಯವಿಲ್ಲ. ಇವತ್ತಿನ ಘಟನೆಗೆ ಕಾರಣವಾದ ಯಾವುದೇ ಹೀನ ಕ್ರಿಮಿಗಳನ್ನೂ ಪೊಲೀಸರು ಹೆಡಮುರಿ ಕಟ್ಟಿ ತಕ್ಕ ಶಿಕ್ಷೆ ಕೊಡಿಸಲಿ. ಬೆಂಗಳೂರು ಮತ್ತೆಂದಿಗೂ ಇಂತಹ ಆತಂಕಕಾರಿ ಘಟನೆಗೆ ಸಾಕ್ಷಿಯಾಗದಿರಲಿ ಎನ್ನುವ ಆಶಯಗಳೊಂದಿಗೆ.
–ವಿಭಾ (ವಿಶ್ವಾಸ್ ಭಾರದ್ವಾಜ್)








