ಕೊರೊನಾ ಹೋರಾಟದಲ್ಲಿ ಮಾದರಿಯಾಗಿದ್ದ ಕೇರಳ ಇಂದು ಕೋವಿಡ್ ನಂ. 1 ಹಾಟ್ ಸ್ಪಾಟ್..!
ಕೇರಳ: ಕೊರೊನಾ ವಿರುದ್ಧದ ಹೋರಾಟಕ್ಕೆ ನಿರೀಕ್ಷೆಗೂ ಮೀರಿ ಸಾಕಷ್ಟು ಕ್ರಮಗಳನ್ನ ಕೈಗೊಂಡು ಕೋವಿಡ್ ನಿಯಂತ್ರಣಕ್ಕೆ ಮಾದರಿ ರಾಜ್ಯ ಎನಿಸಿಕೊಂಡಿದ್ದ ಕೇರಳ ಇಂದು ಕೊರೊನಾದ ನಂಬರ್ 1 ಹಾಟ್ ಸ್ಪಾಟ್ ಆಗಿ ಮಾರ್ಪಾಡಾಗಿದೆ. ಕೇರಳದಲ್ಲಿ ಈಗ ದೇಶದ ಅರ್ಧದಷ್ಟು ಕೊರೊನಾ ಪ್ರಕರಣಗಳು ದಾಖಲಾಗುತ್ತಿದೆ. ಕಳೆದೆರೆಡು ದಿನಗಳಿಂದ ಕೇರಳದಲ್ಲಿ 40 ಸಾವಿರಕ್ಕೂ ಅಧಿಕ ಮಂದಿಯಲ್ಲಿ ಕೊರೊನಾ ಪತ್ತೆಯಾಗಿದೆ. ದೇಶದಲ್ಲಿ ಹೊಸದಾಗಿ ದೃಢಪಡುತ್ತಿರುವ ಸೋಂಕು ಪ್ರಮಾಣದ ಶೇ.50ರಷ್ಟು ಕೇರಳದಲ್ಲಿಯೇ ಇದೆ. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಕಳವಳ ವ್ಯಕ್ತಪಡಿಸಿದೆ. ಬುಧವಾರ ಒಂದೇ ದಿನ 22,056 ಹೊಸ ಪ್ರಕರಣಗಳು ದಾಖಲಾಗಿದ್ದು, 131 ಮಂದಿ ಸೋಂಕಿತರು ಪ್ರಾಣಬಿಟ್ಟಿದ್ದಾರೆ.
ಕೇರಳ ಸರ್ಕಾರ ಬಕ್ರೀದ್ ಹಿನ್ನೆಲೆಯಲ್ಲಿ ಕೋವಿಡ್ ನಿಯಮಗಳನ್ನು ಸಡಿಲಗೊಳಿಸಿದ್ದರಿಂದ ಸೋಂಕಿತರ ಸಂಖ್ಯೆ ಭಾರೀ ಏರಿಕೆಯಾಗಿದೆ ಎಂದು ತಜ್ಞರು ಹೇಳಿದ್ದಾರೆ. ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿರುವ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಇತ್ತೀಚೆಗೆ ನಡೆದ ಕಾರ್ಯಕ್ರಮಗಳೇ ಕೇರಳದಲ್ಲಿ ಸೂಪರ್ ಸ್ಪ್ರೆಡರ್ ಆಗಲು ಕಾರಣ ಎಂದಿದ್ದಾರೆ. ಹೋಮ್ ಐಸೊಲೇಷನ್ ನಲ್ಲಿರುವವರ ಬಗ್ಗೆ ನಿಗಾ ಇರಿಸಿ ಎಂದಿದ್ದಾರೆ. ಜೂನ್ 24 ರಿಂದ ಇಲ್ಲಿಯವರೆಗೆ ಕೊಟ್ಟಾಯಂ ಜಿಲ್ಲೆಯಲ್ಲಿ ಶೇ.64ರಷ್ಟು ಪ್ರಕರಣಗಳು ಏರಿಕೆಯಾದರೆ ಮಲಪ್ಪುರಂನಲ್ಲಿ ಶೇ.59, ಎರ್ನಾಕುಲಂನಲ್ಲಿ ಶೇ.46.5, ತ್ರಿಶ್ಯೂರಿನಲ್ಲಿ ಶೇ.45.4ರಷ್ಟು ಪ್ರಕರಣಗಳು ಏರಿಕೆಯಾಗಿದೆ.
ಕೊರೊನಾ ಹೆಚ್ಚಳ : ಕೇರಳದಲ್ಲಿ ವೀಕೆಂಡ್ ಲಾಕ್ ಡೌನ್
ಬುಧವಾರ ಒಂದೇ ದಿನ ಕೇರಳದಲ್ಲಿ 22,156 ಮಂದಿಗೆ ಸೋಂಕು ದೃಢಪಟ್ಟಿದೆ.
2ನೇ ಸ್ಥಾನದಲ್ಲಿರುವ ಮಹಾರಾಷ್ಟ್ರದಲ್ಲಿ 6,258,
3ನೇ ಸ್ಥಾನದಲ್ಲಿ ಮಿಜೋರಾಂ 1,845,
4ನೇ ಸ್ತಾನದಲ್ಲಿ ತಮಿಳುನಾಡು 1,767
5ನೇ ಸ್ಥಾನದಲ್ಲಿ ಒಡಿಶಾದಲ್ಲಿ 1,629
ಒಟ್ಟು ಸೋಂಕಿತರಲ್ಲಿ ಈ ಐದು ರಾಜ್ಯಗಳಿಂದಲೇ ಶೇ.77ರಷ್ಟು ಪ್ರಕರಣ ವರದಿಯಾಗಿವೆ. ಇದೇ ಅವಧಿಯಲ್ಲಿ ದೇಶಾದ್ಯಂತ 640 ಜನ ಮೃತಪಟ್ಟಿದ್ದಾರೆ. ಈ ಪೈಕಿ ಮಹಾರಾಷ್ಟ್ರದಲ್ಲಿ 254 ಮತ್ತು ಕೇರಳದಲ್ಲಿ 156 ಮಂದಿ ಬಲಿಯಾಗಿದ್ದಾರೆ.