ನವದೆಹಲಿ: ಎರಡು ದಿನಗಳ ಭೇಟಿಗಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪತ್ನಿ ಮೆಲಾನಿಯಾ ಟ್ರಂಪ್ ಇದೇ 24ರಂದು ಭಾರತಕ್ಕೆ ಆಗಮಿಸುತ್ತಿದ್ದಾರೆ. ಎರಡು ದಿನಗಳಲ್ಲಿ ಟ್ರಂಪ್ ದಂಪತಿ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದು, ಮೆಲಾನಿಯಾ ಟ್ರಂಪ್ ಅವರು ಫೆ.25ರ ಮಂಗಳವಾರ ದಕ್ಷಿಣ ದೆಹಲಿ ಸರ್ಕಾರ ಶಾಲೆಯೊಂದಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿ ಆಪ್ ಸರ್ಕಾರ ಪರಿಚಯಿಸಿರುವ ಸಂತೋಷ (ಹ್ಯಾಪಿನೆಸ್ ಕರಿಕ್ಯುಲಮ್) ತರಗತಿಯನ್ನು ವೀಕ್ಷಿಸಲಿದ್ದಾರೆ. ಆದ್ರೆ ಈ ಕಾರ್ಯಕ್ರಮಕ್ಕೆ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಮತ್ತ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರಿಗೆ ಆಹ್ವಾನ ನೀಡಿಲ್ಲ ಎಂದು ತಿಳಿದು ಬಂದಿದೆ.
ಈ ಮೊದಲು ಆಪ್ ಸರ್ಕಾರ ದೆಹಲಿಯ ಸರ್ಕಾರಿ ಶಾಲೆಗಳಲ್ಲಿ ಪರಿಚಯಿಸಿರುವ ‘ಸಂತೋಷ ಪಠ್ಯಕ್ರಮ’ದ ಬಗ್ಗೆ ವಿವರಿಸಲು ಮುಖ್ಯಮಂತ್ರಿ ಕೇಜ್ರಿವಾಲ್ ಮತ್ತು ಉಪ ಮುಖ್ಯಮಂತ್ರಿ ಸಿಸೋಡಿಯಾ ಅವರೇ ಮೆಲಾನಿಯಾ ಟ್ರಂಪ್ ಅವರನ್ನು ಶಾಲೆಗೆ ಬರಮಾಡಿಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಈಗ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಯನ್ನೇ ಈ ಮಹತ್ವದ ಕಾರ್ಯಕ್ರಮದಿಂದ ದೂರವಿಟ್ಟಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ.