ದೆಹಲಿಯಿಂದ ಆಗಮಿಸಿದ 4000 ಕೆಜಿ ತೂಕದ ಕೆಂಪೇಗೌಡರ ಖಡ್ಗ
ಬೆಂಗಳೂರಿನ ದೇವನಹಳ್ಳಿ ಬಳಿಯಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ಮಾಣವಾಗುತ್ತಿರುವ ಕೆಂಪೇಗೌಡರ ಬೃಹತ್ ಕಂಚಿನ ಪ್ರತಿಮೆಯ ಭಾಗವಾದ 4,000 ಕೆಜಿ ತೂಕದ ಖಡ್ಗ ದೆಹಲಿಯಿಂದ ಬೆಂಗಳೂರು ತಲುಪಿದೆ. ವಿಶೇಷ ಟ್ರಕ್ನಲ್ಲಿ ಬಂದ ಈ ಖಡ್ಗವನ್ನು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್ ಅಶ್ವತ್ಥನಾರಾಯಣ ಸೋಮವಾರ ಬರಮಾಡಿಕೊಂಡಿದ್ದಾರೆ.
ಖಡ್ಗಕ್ಕೆ ಪುರೋಹಿತರು ಸಾಂಪ್ರದಾಯಿಕ ಶಕ್ತಿಪೂಜೆಯನ್ನು ನೆರವೇರಿಸಿದರು. ನೋಯ್ಡಾದ ಪದ್ಮಭೂಷಣ ಪುರಸ್ಕೃತ ಶಿಲ್ಪಿಗಳಾದ ರಾಮ್ ವಾನಜಿ ಸುತರ್ ಈ ಪ್ರತಿಮೆಯನ್ನು ಮಾಡಿಕೊಡುತ್ತಿದ್ದಾರೆ’
ಕೆಂಪೇಗೌಡ ಪ್ರತಿಮೆ ಪ್ರತಿಷ್ಠಾನ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುವ ಎಲ್ಲ ಕಾರ್ಮಿಕ ಸಿಬ್ಬಂದಿಗೆ ಸಚಿವರು ಅಭಿನಂದನೆ ಸಲ್ಲಿಸಿ ಮಾತನಾಡಿದ ಸಚಿವ ಅಶ್ವತ್ ನಾರಾಯಣ್ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 23 ಎಕರೆ ವಿಸ್ತಾರದಲ್ಲಿ ಕೆಂಪೇಗೌಡರ ಸ್ಮರಣಾರ್ಥ ಹೆರಿಟೇಜ್ ಪಾರ್ಕ್ ಅಸ್ತಿತ್ವಕ್ಕೆ ಬರಲಿದ್ದು, ಕಾಮಗಾರಿಗಳು ಭರದಿಂದ ಸಾಗುತ್ತಿವೆ. ಕೆಂಪೇಗೌಡರ ಭವ್ಯ ಪ್ರತಿಮೆಗೆ 85 ಕೋಟಿ ರೂ. ವಿನಿಯೋಗಿಸಲಾಗುತ್ತಿದೆ. ಎಂದರು
ಕೆಂಪೇಗೌಡರು ಕೈಯಲ್ಲಿ ಹಿಡಿದಿರುವ ಖಡ್ಗವು ಕ್ಷಾತ್ರಬಲವನ್ನು ಪ್ರತಿನಿಧಿಸುತ್ತಿದ್ದು, ನವಭಾರತಕ್ಕೊಂದು ಸಂಕೇತವಾಗಿದೆ. ವಿಮಾನ ನಿಲ್ದಾಣದ ಮೂಲಕ ಹೋಗುವವರು ಮತ್ತು ಇಲ್ಲಿಗೆ ಆಗಮಿಸುವ ಪ್ರತಿಯೊಬ್ಬರು ಕೆಂಪೇಗೌಡರ ಬೃಹದಾಕಾರದ ಪ್ರತಿಮೆಯ ನೋಟದಿಂದ ಒಂದು ದಿವ್ಯ ಅನುಭೂತಿಯನ್ನು ಪಡೆದುಕೊಳ್ಳುವಂತಿರಬೇಕು ಎನ್ನುವುದು ಸರ್ಕಾರದ ಉದ್ದೇಶವಾಗಿದೆ,” ಎಂದು ಸಚಿವ ಅಶ್ವತ್ಥ ನಾರಾಯಣ ಬಣ್ಣಿಸಿದರು.