ಶವರ್ಮಾ ಸೇವಿಸಿ ಮೃತಪಟ್ಟ ಯುವತಿಯ ಸಾವಿಗೆ ಕಾರಣ ಶಿಗೆಲ್ಲಾ ಬ್ಯಾಕ್ಟೀರಿಯಾ
ಕೇರಳ ಕಾಸರಗೋಡಿನ ವಿದ್ಯಾರ್ಥಿನಿ ಚಿಕನ್ ಶವರ್ಮಾ ಸೇವಿಸಿ ಮೃತಪಟ್ಟಿದ್ದು ದೊಡ್ಡ ಸುದ್ದಿಯಾಗಿದ್ದು ನಿಮಗೆಲ್ಲ ಗೊತ್ತೇ ಇದೆ. ಶವರ್ಮಾ ಹೊಟ್ಟೆ ಸೇರಿದ ಕೆಲವೇ ಕ್ಷಣದಲ್ಲೇ ವಿದ್ಯಾರ್ಥಿನಿ ಪ್ರಾಣ ಕಳೆದುಕೊಂಡಿದ್ದಳು. ಈ ಅನಾಹುತಕ್ಕೆ ಕಾರಣ ಏನು ಎನ್ನುವುದು ಈಗ ತಿಳಿದು ಬಂದಿದೆ. ವಿದ್ಯಾರ್ಥಿನಿಯ ಸಾವಿಗೆ ಕಾರಣವಾಗಿದ್ದು ಶಿಗೆಲ್ಲಾ ಬ್ಯಾಕ್ಟಿರೀಯಾ.
ಮೇ 1ರಂದು ಕಾಸರಗೋಡಿನ ಐಡಿಯಲ್ ಫುಡ್ ಪಾಯಿಂಟ್ ಎಂಬ ಉಪಾಹಾರ ಗೃಹದಿಂದ ಚಿಕನ್ ಶವರ್ಮಾ ತಿಂದ 16 ವರ್ಷದ ದೇವಾನಂದ ಎಂಬ ವಿದ್ಯಾರ್ಥಿನಿ ಸಾವನ್ನಪ್ಪಿದ್ದು, 40 ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ದುರಂತಕ್ಕೆ ರಾಜ್ಯ ಆರೋಗ್ಯ ಇಲಾಖೆ ಕಾರಣ ಕಂಡಿಹಿಡಿದಿದೆ. ಶಿಗೆಲ್ಲ ಎಂಬ ಬ್ಯಾಕ್ಟೀರಿಯಾ ದಿಂದ ಆಹಾರ ವಿಷಪೂರಿತವಾಗಿ ಸಾವು ಸಂಭವಿಸಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ (ಡಿಎಂಒ) ಡಾ.ಎ.ವಿ.ರಾಮದಾಸ್ ಮಾಹಿತಿ ನೀಡಿದ್ದಾರೆ.
ಕೋಝಿಕ್ಕೋಡ್ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಾದ ರೋಗಿಗಳ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಿಸಿದ ನಂತರ ಬ್ಯಾಕ್ಟೀರಿಯಾ ಪತ್ತೆಯಾಗಿದೆ. ಈ ರೋಗಕಾರಕವು ಕರುಳಿನ ಸೋಂಕನ್ನು ಉಂಟುಮಾಡಬಹುದು, ಇದು ತುಂಬಾ ಸಾಂಕ್ರಾಮಿಕವಾಗಿದೆ ಮತ್ತು ಕಲುಷಿತ ಆಹಾರ ಅಥವಾ ನೀರಿನ ಮೂಲಕ ಹರಡಬಹುದು ಎಂದು ಡಿಎಂಒ ಹೇಳಿದರು. ಇದು ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಅಥವಾ ಕಡಿಮೆ ರೋಗನಿರೋಧಕ ಶಕ್ತಿ ಹೊಂದಿರುವವರಿಗೆ ಮಾರಕವಾಗಬಹುದು ಎಂದು ತಿಳಿಸಲಾಗಿದೆ.