Kerala vs Karnataka Ranji Trophy : ಕೇರಳಕ್ಕೆ ಸಚಿನ್ ಬೇಬಿ ಆಸರೆ
ವಾಸುಕಿ ಕೌಶಿಕ್(4/36) ಅವರ ಭರ್ಜರಿ ಬೌಲಿಂಗ್ ನಡುವೆಯೂ ಸಚಿನ್ ಬೇಬಿ(116*) ಜವಾಬ್ದಾರಿಯ ಆಟದ ನೆರವಿನಿಂದ ಕರ್ನಾಟಕ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ಅತಿಥೇಯ ಕೇರಳ ಮೊದಲ ದಿನದಂದು ಸಮಬಲದ ಪ್ರದರ್ಶನ ನೀಡಿದೆ.
ತಿರುವನಂತಪುರಂನ ತುಂಬಾದಲ್ಲಿರುವ ಸೆಂಟ್ ಕ್ಸೇವಿಯರ್ಸ್ ಕಾಲೇಜು ಮೈದಾನದಲ್ಲಿ ಮಂಗಳವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಗೆದ್ದ ಕೇರಳ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.
ಆದರೆ ಟಾಪ್ ಆರ್ಡರ್ ಬ್ಯಾಟ್ಸ್‌ಮನ್‌ಗಳ ವೈಫಲ್ಯದ ನಡುವೆಯೂ ಮೊದಲ ದಿನದಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 224 ರನ್ ಕಲೆಹಾಕಿದೆ. ಕೇರಳ ಪರ ಸಚಿನ್ ಬೇಬಿ(116*) ಹಾಗೂ ಜಲಜ್ ಸಕೇನಾ(31*) ಕಣದಲ್ಲಿದ್ದಾರೆ.
ಮೊದಲು ಬ್ಯಾಟಿಂಗ್ ಆರಂಭಿಸಿದ ಕೇರಳ ಬ್ಯಾಟಿಂಗ್ ವೈಫಲ್ಯಕ್ಕೆ ಸಿಲುಕಿತು. ವೇಗಿ ವಾಸುಕಿ ಕೌಶಿಕ್(4/36) ಅವರ ಅದ್ಭುತ ಬೌಲಿಂಗ್ ದಾಳಿಗೆ ತತ್ತರಿಸಿದ ಓಪನರ್‌ಗಳಾದ ಪೊನ್ನ ರಾಹುಲ್(0), ರೋಹನ್ ಕುಣ್ಣುಮುಲ್(5) ಹಾಗೂ ರೋಹನ್ ಪ್ರೇಮ್(0) ಬಹುಬೇಗನೆ ಪೆವಿಲಿಯನ್ ಸೇರಿದರು. ಪರಿಣಾಮ 6 ರನ್‌ಗಳಿಗೆ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಈ ಹಂತದಲ್ಲಿ ಜೊತೆಯಾದ ಸಚಿನ್ ಬೇಬಿ ಹಾಗೂ ವಾತ್ಸಲ್ ಗೋವಿಂದ್(46) 4ನೇ ವಿಕೆಟ್‌ಗೆ 120 ರನ್‌ಗಳ ಜೊತೆಯಾಟದ ಮೂಲಕ ತಂಡಕ್ಕೆ ಆಸರೆಯಾದರು. ಆದರೆ ಉತ್ತಮವಾಗಿ ಆಡುತ್ತಿದ್ದ ವಾತ್ಸಲ್ ಗೋವಿಂದ್ ಅರ್ಧಶತಕದ ಹೊಸ್ತಿಲಲ್ಲಿ ಎಡವಿದರು. ನಂತರ ಬಂದ ಸಲ್ಮಾನ್ ನಿಜ಼ರ್(0) ಹಾಗೂ ಅಕ್ಷಯ್ ಚಂದ್ರನ್(17) ತಂಡಕ್ಕೆ ಆಸರೆಯಾಗಲಿಲ್ಲ.
ಒಂದೆಡೆ ವಿಕೆಟ್ ಬೀಳುತ್ತಿದ್ದರು ಜವಾಬ್ದಾರಿಯ ಆಟವಾಡಿಸ ಸಚಿನ್ ಬೇಬಿ(116*) ಕರ್ನಾಟಕ ವಿರುದ್ದವೂ ಅದ್ಭುತ ಫಾರ್ಮ್ ಮುಂದುವರಿಸಿದರು. ಭರ್ಜರಿ ಶತಕದ ಮೂಲಕ ತಂಡಕ್ಕೆ ಆಸರೆಯಾದ ಸಚಿನ್ ಬೇಬಿ ಅವರಿಗೆ ಜಲಜ್ ಸೆಕ್ಸೇನಾ(31*) ಎಚ್ಚರಿಕೆ ಆಟವಾಡಿ ತಂಡಕ್ಕೆ ನೆರವಾದರು.
ಕರ್ನಾಟಕದ ಪರ ಅದ್ಭುತ ಬೌಲಿಂಗ್ ದಾಳಿ ನಡೆಸಿದ ವಾಸುಕಿ ಕೌಶಿಕ್(4/36) ವಿಕೆಟ್ ಪಡೆದು ಅಬ್ಬರಿಸಿದರೆ. ವಿಜಯ್‌ಕುಮಾರ್ ವೈಶಾಖ್ ಹಾಗೂ ಶ್ರೇಯಸ್ ಗೋಪಾಲ್ ತಲಾ 1 ವಿಕೆಟ್ ಪಡೆದರು.
Kerala vs Karnataka Ranji Trophy