ಮಡಿಕೇರಿ: ಪಕ್ಕದ ಮನೆಯಲ್ಲಿ ಕಳ್ಳತನ ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮಡಿಕೇರಿ ತಾಲೂಕಿನ ಅಯ್ಯಂಗೇರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಿದ್ ಲಾಜ್ (22) ಹಾಗೂ ಫಾತೀಮಾ (26) ಬಂಧಿತ ಆರೋಪಿಗಳು. ಗ್ರಾಮದ ಕೆ.ಹೆಚ್.ಜಲೀನಾ ಏ. 12ರಂದು ಮನೆಗೆ ಬೀಗ ಹಾಕಿ ಹೊರಗೆ ತೆರಳಿದ್ದರು. ಈ ಸಂದರ್ಭದಲ್ಲಿ ಬಾಗಿಲು ಮುರಿದು ಒಳನುಗ್ಗಿದ್ದ ಖದೀಮರು ಮನೆಯಲ್ಲಿದ್ದ 232 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು.
ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿದ ಆರೋಪಿ ಫಾತೀಮಾ ಅನತಿ ದೂರದಲ್ಲಿ ವಾಸವಿದ್ದ ಸ್ನೇಹಿತ ಮಿದ್ ಲಾಜ್ ನ ಸಹಾಯ ಪಡೆದು ಈ ಕೃತ್ಯ ಎಸಗಿದ್ದಾಳೆ. ಘಟನೆ ನಡೆದ 48 ಗಂಟೆಗಳಲ್ಲಿಯೇ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಅಯ್ಯಂಗೇರಿಯ ಸರ್ಕಾರಿ ಶಾಲೆ ಬಳಿ ಭೂಮಿ ಅಗೆದು ಗುಂಡಿಯಲ್ಲಿ ಚಿನ್ನಾಭರಣ ಮುಚ್ಚಿಟ್ಟಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಸದ್ಯ ಪೊಲೀಸರು ಆರೋಪಿಗಳಿಂದ 177 ಗ್ರಾಂ ಚಿನ್ನಾಭರಣ, ಒಂದು ದ್ವಿಚಕ್ರ ವಾಹನ, ಎರಡು ಮೊಬೈಲ್ ವಶಕ್ಕೆ ಪಡೆದಿದ್ದಾರೆ.