ಬೆಂಗಳೂರು : ಮಹಿಳೆಯೊಬ್ಬಳು ತನ್ನ ಪ್ರಿಯಕರನೊಂದಿಗೆ ಗಂಡನನ್ನು ಕೊಲೆ ಮಾಡಿಸಿರುವ ಪ್ರಕರಣವೊಂದು ತಲಘಟ್ಟಪುರ (Talaghatapura) ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪತ್ನಿ ಸೇರಿದಂತೆ ಐವರನ್ನು ಬಂಧಿಸಿದ್ದಾರೆ. ರಂಜಿತಾ, ಆಕೆಯ ಪ್ರಿಯಕರ ಗಣೇಶ್, ಶಿವಾನಂದ, ದೀಪು, ಶರತ್ ಬಂಧಿತ ಆರೋಪಿಗಳು. ಕೊಲೆಯಾದ ಅರುಣ್ ಹಾಗೂ ರಂಜಿತ ಪ್ರೀತಿಸಿ ಮದುವೆಯಾಗಿದ್ದರು. ಹೋಟೆಲ್ ನಡೆಸುತ್ತ ಜೀವನ ಸಾಗಿಸುತ್ತಿದ್ದರು. ಆರೋಪಿ ಗಣೇಶ ಈ ಹೋಟೆಲ್ ಗೆ ನೀರು ಸರಬರಾಜು ಮಾಡುತ್ತಿದ್ದ. ಅಲ್ಲದೇ, ಅವರಿಗೆ ಫೈನಾನ್ಸ್ ಕೂಡ ಕೊಡಿಸಿದ್ದ. ಹೀಗಾಗಿ ಸಲುಗೆ ಹೆಚ್ಚಾಗಿ ರಂಚಿತಾಳೊಂದಿಗೆ ಸ್ನೇಹ ಬೆಳೆಸಿದ್ದಾನೆ ಎನ್ನಲಾಗಿದೆ.
ಕಳೆದ ವಾರ ತಲಘಟ್ಟಪುರದ ನಿರ್ಜನ ಪ್ರದೇಶದಲ್ಲಿ ವ್ಯಕ್ತಿಯೊಬ್ಬನನ್ನು ಭೀಕರವಾಗಿ ಕೊಲೆ ಮಾಡಿ ಎಸೆದು ಹೋಗಿದ್ದರು. ವ್ಯಕ್ತಿಯ ಗುರುತು ಸಿಗದಂತೆ ಹಲ್ಲೆ ನಡೆಸಲಾಗಿತ್ತು. ಕೊನೆಗೆ ಪೊಲೀಸರು ಕೊಲೆಯಾದ ವ್ಯಕ್ತಿಯನ್ನು ಆರ್ಆರ್ ನಗರದ ಗೌಡ್ರು ಬಾಡೂಟ ಎಂಬ ಹೋಟೆಲ್ ನಡೆಸುತ್ತಿದ್ದ ಅರುಣ್ ಎಂದು ಗುರುತಿಸಿದ್ದಾರೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಾಗ ಕೊಲೆಯಾದ ಅರುಣ್ ಹೆಂಡತಿ ಹಾಗೂ ಆರೋಪಿ ಗಣೇಶ್ ನಡುವಿನ ಸಂಬಂಧದ ಕುರಿತು ಮಾಹಿತಿ ಸಿಕ್ಕಿದೆ. ಗಣೇಶ್ ಹಾಗೂ ರಂಚಿತ್ ಮಧ್ಯೆ ಸಂಬಧ ಇರುವುದು ತಿಳಿದ ನಂತರ ಅರುಣ್ ಮನೆಯಲ್ಲಿ ಗಲಾಟೆ ಮಾಡುತ್ತಿದ್ದ. ಇದರಿಂದಾಗಿ ಆತನನ್ನು ಆರೋಪಿಗಳು ಸಂಚು ರೂಪಿಸಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಈ ಕುರಿತು ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ.








