ಒಡಿಶಾದ ಕಟಕ್ನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಇಂದು ಮೆಗಾ ಉಡಾವಣಾ ಕಾರ್ಯಕ್ರಮದೊಂದಿಗೆ ಮೊದಲ ಬಾರಿಗೆ ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಸೌಲಭ್ಯದ ಮೂಲಕ ಕ್ರೀಡಾಕೂಟವನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಮತ್ತು ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಕಿರೆನ್ ರಿಜಿಜು ಸೇರಿದಂತೆ ಹಲವಾರು ಗಣ್ಯರು ಮತ್ತು ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ 159 ವಿಶ್ವವಿದ್ಯಾಲಯಗಳ 3400 ಕ್ರೀಡಾಪಟುಗಳು ರಗ್ಬಿ ಸೇರಿದಂತೆ 17 ವಿಭಾಗಗಳಲ್ಲಿ ತಮ್ಮ ಹೆಸರನ್ನು ನೊಂದಾಯಿಸಿದ್ದಾರೆ. ಕ್ರೀಡಾಪಟುಗಳು ಉತ್ತಮ ಪ್ರದರ್ಶನದೊಂದಿಗೆ ದೇಶದ ಗಮನ ಸೆಳೆಯಲು ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟವನ್ನು ಎದುರು ನೋಡುತ್ತಿದ್ದಾರೆ.
ಮುಂದಿನ ದಿನಗಳಲ್ಲಿ ಕ್ರೀಡಾಪಟುಗಳಿಗೆ ಯಶಸ್ಸಿನ ಮೆಟ್ಟಲೇರಲು ಇದು ಸಹಕಾರಿಯಾಗಲಿದ್ದು, ಕ್ರೀಡೆ ಮತ್ತು ಶಿಕ್ಷಣದ ಅವಳಿ ಉದ್ದೇಶಗಳೊಂದಿಗೆ ಖೇಲೋ ಇಂಡಿಯಾ ಯೂನಿವರ್ಸಿಟಿ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿದೆ. ಮಂಗಳೂರು ವಿಶ್ವವಿದ್ಯಾಲಯದ ಟ್ರಿಪಲ್ ಜಂಪರ್ ಜೇ ಷಾ, ಅವರ ತಂಡದ ಸಹ ಆಟಗಾರ ಓಟಗಾರ ನರೇಂದ್ರ ಪ್ರತಾಪ್ ಸಿಂಗ್, ಪುಣೆ ವಿಶ್ವವಿದ್ಯಾಲಯದ ಓಟಗಾರ ಕೋಮಲ್ ಜಗದಲೆ ಮತ್ತು ಆಚಾರ್ಯ ನಾಗಾರ್ಜುನ ವಿಶ್ವವಿದ್ಯಾಲಯದ ಸ್ಪ್ರಿಂಟರ್ ಯರ್ರಾಜಿ ಜ್ಯೋತಿ ಅವರಂತಹ ಅನೇಕ ಪ್ರತಿಭಾವಂತ ಕ್ರೀಡಾಪಟುಗಳು ಕಣದಲ್ಲಿದ್ದಾರೆ. ಬಿಲ್ಲುಗಾರಿಕೆ, ಅಥ್ಲೆಟಿಕ್ಸ್, ಬಾಕ್ಸಿಂಗ್, ಫೆನ್ಸಿಂಗ್, ಜೂಡೋ, ಈಜು, ವೇಟ್ಲಿಫ್ಟಿಂಗ್, ಕುಸ್ತಿ, ಬ್ಯಾಡ್ಮಿಂಟನ್, ಬ್ಯಾಸ್ಕೆಟ್ಬಾಲ್, ಫುಟ್ಬಾಲ್, ಹಾಕಿ, ಟೇಬಲ್ ಟೆನಿಸ್, ಟೆನಿಸ್, ವಾಲಿಬಾಲ್, ರಗ್ಬಿ ಮತ್ತು ಕಬಡ್ಡಿ ಸೇರಿದಂತೆ ಒಟ್ಟು 17 ಕ್ರೀಡೆಗಳು ಖೇಲೋ ಇಂಡಿಯಾ ಯೂನಿವರ್ಸಿಟಿ ಕ್ರೀಡಾಕೂಟದಲ್ಲಿ ನಡೆಯಲಿವೆ.