ಹಾಸನ : ಇತ್ತೀಚೆಗೆ ಯುವಕರಲ್ಲಿ ತಾಳ್ಮೆಯೇ ಇಲ್ಲದಂತಾಗಿದೆ. ಕ್ಷುಲ್ಲಕ ಕಾರಣಕ್ಕೆ ಜೀವ ತೆಗೆಯುವ ಮಟ್ಟಕ್ಕೆ ಹೋಗುತ್ತಿರುವುದು ಶೋಚನೀಯ ಸಂಗತಿಯಾಗಿದೆ. ತಂದೆಗೆ ಮದ್ಯ ಸೇವಿಸಿದ ವಿಚಾರ ಹೇಳಿದ್ದಾನೆ ಎಂಬ ಕಾರಣಕ್ಕೆ ಸ್ನೇಹಿತನನ್ನೇ ಯುವಕರಿಬ್ಬರು ಕೊಲೆ ಮಾಡಿರುವ ಘಟನೆ ನಡೆದಿದೆ.
ಪ್ರಕಾಶ್ ಕೊಲೆಯಾಗಿರುವ ಯುವಕ. ಈ ಘಟನೆ ಜಿಲ್ಲೆಯಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಚಿಕ್ಕಗೇಣಿಗೆರೆ ಗ್ರಾಮದ ಪುನೀತ್ (22) ಹಾಗೂ ಯಶ್ವಂತ್ (18) ಬಂಧಿತ ಆರೋಪಿಗಳು. ಹರೀಶ್ ಎಂಬ ಯುವಕ ತನ್ನ ಮನೆಯ ಕೆಲಸ ಪೂರ್ಣಗೊಂಡಿದ್ದಕ್ಕೆ ಹಲವರನ್ನು ಊಟಕ್ಕೆ ಕರೆದಿದ್ದ. ಈ ಕಾರ್ಯಕ್ರಮಕ್ಕೆ ಗ್ರಾಮದ ಪುನೀತ್, ಯಶ್ವಂತ್ ಹಾಗೂ ಪ್ರಕಾಶ್ ಕೂಡ ಹೋಗಿದ್ದರು. ಮೂವರು ಕೂಡ ಎಣ್ಣೆ ಹೊಡೆದು ಹೋಗಿದ್ದರು.
ಆದರೆ, ಆರೋಪಿ ಪುನೀತ್‍ನ ತಂದೆ ರಂಗಸ್ವಾಮಿ, ಪ್ರಕಾಶ್‍ಗೆ ಕರೆ ಮಾಡಿ ಮದ್ಯ ಕುಡಿದಿದ್ದಕ್ಕೆ ಪ್ರಶ್ನೆ ಮಾಡಿದ್ದರು. ಆಗ ಪ್ರಕಾಶ ಸತ್ಯ ಬಾಯಿಬಿಟ್ಟಿದ್ದ. ಈ ವಿಚಾರದಿಂದ ಕ್ರೋಧಗೊಂಡ ಪುನೀತ್ ಹಾಗೂ ಯಶ್ವಂತ್ ಇಬ್ಬರೂ ಸೇರಿ ಪ್ರಕಾಶ್ ಮನೆಗೆ ಹೋಗಿ ಗಲಾಟೆ ಮಾಡಿದ್ದಾರೆ. ಈ ವೇಳೆ ತಲೆಯನ್ನು ಗೋಡೆಗೆ ಗುದ್ದಿದ್ದಾರೆ. ಆಗ ತೀವ್ರ ರಕ್ತಸ್ರಾವದಿಂದ ಪ್ರಕಾಶ್ ಒದ್ದಾಡಿದ್ದಾನೆ. ಕುಟುಂಬಸ್ಥರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಪ್ರಕಾಶ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಮೃತನ ಪತ್ನಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.








