Kishore : ಮೈಂಡ್ ಲೆಸ್ ಪದ ನನ್ನದಲ್ಲ – kgf ಚರ್ಚೆ ಬಗ್ಗೆ ಸ್ಪಷ್ಟನೆ ಕೊಟ್ಟ ನಟ ಕಿಶೋರ್…
‘ಕಾಂತಾರ’ ಸಿನಿಮಾದಲ್ಲಿ ಫಾರೆಸ್ಟ್ ಅಧಿಕಾರಿಯಾಗಿ ನಟಿಸಿ ಎಲ್ಲರಿಂದ ಮೆಚ್ಚುಗೆ ಪಡೆದಿದ್ದ ಕಿಶೋರ್, ಕೆಜಿಎಫ್ 2 ಚಿತ್ರ ಮೈಂಡ್ ಲೆಸ್ ನಾನು ಅದನ್ನ ನೋಡುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ ಎಂದು ಸುದ್ಧಿಯಾಗಿತ್ತು. ಈ ಹೇಳಿಕೆ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದ್ದಂತೆ ಮತ್ತೊಂದು ಪೋಸ್ಟ್ ಬರೆಯುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಚರ್ಚಿಸಲು, ಚಿಂತಿಸಲು ನಿಜವಾದ ಸಮಸ್ಯೆಗಳು ಹಲವಿರುವಾಗ ನನ್ನ ಲೋಕಾಭಿರಾಮದ ಯಾವುದೋ ಮಾತು ಚರ್ಚೆಗೆ ಗ್ರಾಸವಾಗುವುದೋ, ಜನರ ಸಮಯ ಹಾಳುಮಾಡುವುದೋ ನನ್ನ ಮಟ್ಟಿಗೆ ಅಕ್ಷಮ್ಯ . ಆದರೂ ಅದಕ್ಕಾಗಿ ಕ್ಷಮೆಯಿರಲಿ.
ನಾನು ರೈತರ ಸಮಸ್ಯೆಗಳ ಬಗ್ಗೆ ಮಾತನಾಡಿದಾಗ ಇಷ್ಟು ಚರ್ಚೆಯಾಗಿದ್ದರೆ ತೃಪ್ತಿಯಿರುತ್ತಿತ್ತು.
ಅದೇನೇ ಇರಲಿ ರಶ್ಮಿಕಾ ವಿಷಯದ ಚರ್ಚೆಯಲ್ಲಿ, ಆಯ್ಕೆಯ ಸ್ವಾತಂತ್ರದ ಮಾತುಗಳ ನಡುವೆ ಹೇಗೋ ಸುಳಿದ ಈ ಮಾತುಗಳಲ್ಲಿ ಯಾರ ಮನಸ್ಸನ್ನೂ ನೋಯಿಸುವ ಉದ್ದೇಶವಿರಲಿಲ್ಲ.
“ಮೈಂಡ್ ಲೆಸ್ “ನನ್ನ ಪದವಲ್ಲ.
ಬರೆದವರು ನನ್ನ ಯಾವ ಪದವನ್ನು ಸಮೀಕರಿಸಿ ಆ ಪದ ಬಳಸಿದರೋ, ಭಾಷಾಂತರದಲ್ಲಿ ಯಾವ ಪದದರ್ಥ ಏನಾಯ್ತೊ ಗೊತ್ತಿಲ್ಲ.
“ನೋಡಿಲ್ಲ”ದಿಂದ “ನೋಡುವುದಿಲ್ಲ” ದವರೆಗೆ ಅವರವರ ಇಷ್ಟದಂತೆ ಬರೆದಿದ್ದಾರಲ್ಲ ಹಾಗೆ.
ಒಂದು ಸಿನಿಮಾವನ್ನು ನೋಡದ ನಾನು ಅದನ್ನು ಈ ಥರದ ಪದ ಬಳಸಿ ತೀರ್ಪು ಕೊಡುವುದು ಸಾಧ್ಯವೂ ಇಲ್ಲ . ಮಾಡಿದರೆ ತಪ್ಪೂ ಸಹ.
ಆದರೆ ಪ್ರೇಕ್ಷಕನಾಗಿ ಎಲ್ಲರಿಗೂ ಇರುವಂತೆ ಅಭಿರುಚಿ, ಆಯ್ಕೆಯ ಸ್ವಾತಂತ್ರ್ಯ ನನ್ನದು. ಯಾರೂ ಯಾರನ್ನೂ ಥಿಯೇಟರಿನ ಒಳಗೂ ತಳ್ಳಲಾಗದು, ಹೊರಗೂ ಸಹ. ನನ್ನ ಸಿನಿಮಾವಾದರೂ ಸರಿ, ಯಾವ ಸಿನಿಮಾದರೂ ಸರಿ. ಒಟ್ಟಿನಲ್ಲಿ ನನ್ನ ಅಭಿರುಚಿಯೋ ಅಲ್ಲವೋ KGF ಸಿನಿಮಾದ ಯಶಸ್ಸಿನ ಬಗ್ಗೆ ಸಂತೋಷವಿದೆ ಹಾಗೂ ಆ ಯಶಸ್ಸಿನಿಂದ ನನ್ನಲ್ಲಿನ ಸಿನಿಮಾ ತಂತ್ರಜ್ಞ ಕಲಿತದ್ದು, ಕಲಿಯುವುದೂ ಸಾಕಷ್ಟಿದೆ. ನನ್ನ KGF ಕಲ್ಪನೆ ಬೇರೆಯೇ ಆದರೂ ಸಹ.
Kishore: The word mindless is not mine – Actor Kishore clarified about the kgf debate…








