ಮಧ್ಯಪ್ರದೇಶ : ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೊನಾ ವೈರಸ್ ಸೋಂಕಿಗೆ ಔಷಧಿ ಕಂಡುಹಿಡಿಯಲು ಅನೇಕ ದೇಶಗಳ ಸಂಶೋಧಕರು ಹರಸಾಹಸ ಪಡುತ್ತಿದ್ದಾರೆ. ಈ ಮಧ್ಯೆ ಮಧ್ಯಪ್ರದೇಶದ ಸಯಂ ಘೋಷಿತ ದೇವಮಾನವ ಕೋವಿಡ್ ಗೆ ನನ್ನ ಕಿಸ್ ಮದ್ದು ಎಂದೇಳಿ 85 ಮಂದಿಗೆ ಸೋಂಕು ತಗುಲಿಸಿ, ಕೊರೊನಾಗೆ ಬಲಿಯಾಗಿದ್ದಾನೆ. 
ಮಧ್ಯಪ್ರದೇಶದ ರತ್ನಂ ಜಿಲ್ಲೆಯಲ್ಲೊಬ್ಬ ಕೈಗೆ ಮುತ್ತು ಕೊಡುವ ಮೂಲಕ ಕೊರೊನಾ ಓಡಿಸುತ್ತೇನೆಂದು ನಂಬಿಸಿ, ಅನೇಕ ಮಂದಿಗೆ ಮುತ್ತುಕೊಟ್ಟಿದ್ದ. ಇದೀಗ ಅದೇ ಬಾಬಾ ಹೆಮ್ಮಾರಿ ಸೋಂಕಿನಿಂದ ಮೃತಪಟ್ಟಿದ್ದಾನೆ. ಈತನಿಂದ ಮುತ್ತು ಪಡೆದಿರುವ 85ಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿದ್ದು, ಎಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 19 ಮಂದಿ ಸ್ಥಿತಿ ಗಂಭೀರವಾಗಿದ್ದು, ನಾಲ್ವರು ಇದಾಗಲೇ ಮೃತಪಟ್ಟಿದ್ದಾರೆ..!
ಈ ಸ್ವಯಂ ಘೋಷಿತ ದೇವಮಾನವ ರತ್ನಂ ಜಿಲ್ಲೆಯ ನಾಯಪುರದ ನಿವಾಸಿ. ತಾನೊಬ್ಬ ದೇವ ಮಾನವ, ಪವಿತ್ರ ಮನುಷ್ಯ ಎಂದು ಹೇಳಿಕೊಂಡಿದ್ದ ಈತನಿಗೆ ಅಪಾರ ಸಂಖ್ಯೆಯಲ್ಲಿ ಭಕ್ತರು ಇದ್ದರು. ತಾನು ಕೈಗೆ ಮುತ್ತು ಕೊಟ್ಟರೆ ಕೊರೊನಾ ವೈರಸ್ ಹೋಗುತ್ತದೆ ಎಂದು ಬಾಬಾ ಭಕ್ತರನ್ನು ನಂಬಿಸುತ್ತಿದ್ದ. ಈತನ ಮಾತಿಗೆ ಮರುಳಾಗಿ ಅನೇಕ ಮಂದಿ ಈತನಿಂದ ಕೈಗಳಿಗೆ ಮುತ್ತು ಕೊಡಿಸಿಕೊಳ್ಳಲು ಬರುತ್ತಿದ್ದರು.
ಈ ಮಧ್ಯೆ ಬಾಬಾಗೂ ಸೋಂಕು ವಕ್ಕರಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಈತನ ಸಾವಿನ ನಂತರ ಹಿನ್ನೆಲೆ ಹುಡುಕಿದಾಗ, ಈತ ಭಕ್ತರಿಗೆ ಮುತ್ತು ಕೊಡುತ್ತಿದ್ದದ್ದು ತಿಳಿದುಬಂದಿದೆ. ಇದರ ಬೆನ್ನಟ್ಟಿ ಹೋಗಿರುವ ಆರೋಗ್ಯ ಇಲಾಖೆ ಸಿಬ್ಬಂದಿ ಅನೇಕ ಮಂದಿಗೆ ಪರೀಕ್ಷೆ ಮಾಡಿದ್ದಾರೆ. ಈ ಪೈಕಿ 85ಕ್ಕೂ ಅಧಿಕ ಮಂದಿಯಲ್ಲಿ ಸೋಂಕು ತಗುಲಿರುವುದು ಬೆಳಕಿಗೆ ಬಂದಿದೆ.








