ಪ್ರಕೃತಿ ಪ್ರಿಯರಿಗೆ , ಚಾರಣಿಗರಿಗೆ ಹೇಳಿ ಮಾಡಿಸಿದ ತಾಣ ಭೂಲೋಕದ ಸ್ವರ್ಗ ಕೊಡಚಾದ್ರಿ..!
ದೇಶ ಸುತ್ತು ಕೋಶ ಓದು ಅನ್ನೋ ಗಾದೆ ಮಾತಿದೆ.. ಅದರಂತೆ ಭಾರತದ ಭೂಗರ್ಭದಲ್ಲಿ ನಿಬ್ಬೆರಗಾಗಿಸುವಂತಹ ಪ್ರವಾಸಿ ತಾಣಗಳಿವೆ.. ಆದ್ರೆ ನಾವು ದೇಶ ಸುತ್ತುವುದಕ್ಕೂ ಮೊದಲು ನಮ್ಮ ಕರ್ನಾಟಕದಲ್ಲಿಯೇ ಇರುವಂತಹ ಐತಿಹಾಸಿಕ , ಪ್ರವಾಸಿ ತಾಣಗಳಿಗೆ ಮೊದಲು ವಿಸಿಟ್ ಮಾಡ್ಲೇ ಬೇಕು.. ಕರ್ನಾಟಕದ ನೆಲದಲ್ಲಿಯೇ ಸಾವಿರಾರು ಪ್ರವಾಸಿತಾಣಗಳು ದೇಶೀ ಪ್ರವಾಸಿಗರ ಜೊತೆಗೆ ವಿದೇಶಿ ಪ್ರವಾಸಿಗರ ಸೆರಳೆಯುತ್ತವೆ.. ಇನ್ನೂ ಪ್ರವಾಸದ ಜೊತೆಗೆ ಯುವಕರು ಹಾಗೂ ಹಿರಿಯರಿಗೂ ಟ್ರಕಿಂಗ್ ಕ್ರೇಜ್ ಅಂತೂ ಇದ್ದೇ ಇರುತ್ತೆ..
ಚಾರಣಿಗರ ಹಾಟ್ ಸ್ಪಾಟ್ ಭೂಲೋಕದ ಸ್ವರ್ಗ , ಟ್ರಕಿಂಗ್ ಪ್ರಿಯರ ಹಾಟ್ ಫೇವರೇಟ್ ತಾಣ ಅಂದ್ರೆ ಅದು ನಮ್ಮ ಮಲೆನಾಡು ಶಿವಮೊಗ್ಗದಲ್ಲೇ ಇರುವ ಕೊಡಚಾದ್ರಿ ಬೆಟ್ಟ…
ಭೂಲೋಕದ ಸ್ವರ್ಗ ಕೊಡಚಾದ್ರಿ… ಇದು ಪ್ರಕೃತಿ ಪ್ರಿಯರಿಗೆ ಹಾಗು ಚಾರಣಿಗರಿಗೆ ಹೇಳಿ ಮಾಡಿಸಿದ ತಾಣ.. ಮೂಕಾಂಬಿಕಾ ವನ್ಯ ಜೀವಿ ಅಭಯಾರಣ್ಯದ ವ್ಯಾಪ್ತಿಯಲ್ಲಿ ಬರುವ ಕೊಡಚಾದ್ರಿ ಬೆಟ್ಟ ಸಾಲುಗಳು ಪ್ರವಾಸಿಗರನ್ನ ತನ್ನತ್ತ ಕೈಬೀಸಿ ಕರೆಯುತ್ತೆ. ಕೊಡಚಾದ್ರಿಯ ತುದಿಯಲ್ಲಿ ನಿಂತು ನೋಡಿದರೆ, ನಾಲ್ಕೂದಿಕ್ಕಿನಲ್ಲಿ ನಿಬಿಡಾರಣ್ಯವು ಅಲೆ ಅಲೆಯಂತೆ ಹರಡಿರುವ ದೃಶ್ಯ ಕಾಣುತ್ತದೆ. ಸಹ್ಯಾದ್ರಿಯ ವಿಶಿಷ್ಟ ನಿತ್ಯ ಹರಿದ್ವರ್ಣ ಅರಣ್ಯದ ನಟ್ಟ ನಡುವೆ ಇರುವ ಕೊಡಚಾದ್ರಿ ಬೆಟ್ಟ ಸಾಲುಗಳು ಚಾರಣಿಗರ ತವರೂರು ಎಂದರೇ ತಪ್ಪಾಗಲಾರದು.
ಉದ್ಯಮಿಗಳಿಗೇ ಸಾಲ ಕೊಟ್ಟವ್ರಂತೆ: ಸಂಜನಾ ಅಲ್ಲ ಬಡ್ಡಿ ಬಂಗಾರಮ್ಮ..!!
ಇನ್ನು ಕೊಡಚಾದ್ರಿಯಲ್ಲಿ ನಿಂತು ಸೂರ್ಯಾಸ್ತ ನೋಡುವುದೇ ಕಣ್ಣಿಗೆ ಹಬ್ಬ.. ನೀವು ಪ್ರಕೃತಿ ಪ್ರಿಯರು, ಪ್ರವಾಸದ ಕ್ರೇಜ್ ಜೊತೆಗೆ ಟ್ರಕ್ಕಿಂಗ್ ಹವ್ಯಾಸವಿದ್ರೆ ಒಮ್ಮೆ ನೀವು ಕೊಡಚಾದ್ರಿಗೆ ವಿಸಿಟ್ ಮಾಡ್ಲೇ ಬೇಕು.. ಆದ್ರೆ ಕೊಡಚಾದ್ರಿಯಲ್ಲಿ ಟ್ರಕಿಂಗ್ ಮಾಡುವುದು ಅಷ್ಟು ಸುಲಭದ ಮಾತಲ್ಲ.. ಗಟ್ಟಿ ಗುಂಡಿಗೆ ಇರಬೇಕು.. ಕೊಡಚಾದ್ರಿ ಬೆಟ್ಟವನ್ನು ತಲುಪಲು ತೀರ ಕಡಿದಾದ,ಕಚ್ಚಾ ರಸ್ತೆಯ ಮೂಲಕ ಪ್ರಯಾಣಿಸುತ್ತಿದ್ದರೆ ಸುತ್ತಲೂ ಪ್ರಪಾತ ಬೆಚ್ಚಿ ಬೀಳಿಸುತ್ತೆ..
ಕೊಡಚಾದ್ರಿಗೆ ಹೋಗುವುದು ಹೇಗೆ..?
ಕೊಲ್ಲೂರಿನಿಂದ ಪ್ರತಿ ಅರ್ಧ ಗಂಟೆಗೊಮ್ಮೆ ಜೀಪ್ ಸರ್ವಿಸ್ ಇದೆ.. ಚಾರಣ ಮಾಡಲು ಬಯಸುವವರು ಉಡುಪಿ-ಶಿವಮೊಗ್ಗ ಗಡಿಯಲ್ಲಿ ಇರುವ ನಾಗೋಡಿ ಅರಣ್ಯ ತಪಾಸಣಾ ಕೇಂದ್ರದಿಂದ ಸ್ವಲ್ಪ ಮುಂದೆ ಹೋಗಿ ಎಡಕ್ಕೆ ತಿರುಗಿ ಸುಮಾರು ೪ ಕಿ.ಮೀ ಮಣ್ಣಿನ ರಸ್ತೆಯಲ್ಲಿ ಸಾಗಿದರೆ ಅಲ್ಲಿ ಸಿಗುವ ಕೊನೆಯ ಮನೆಯ ಬಳಿಯಿಂದ ಚಾರಣ ಮಾಡಬಹುದು.
ಕೊಡಚಾದ್ರಿಯಲ್ಲಿ ನೊಡಬಹುದಾದ ತಾಣಗಳು
ಈ ಸ್ಥಳ ಚಾರಣಪ್ರಿಯರಿಗಷ್ಟೇ ಫೇವರೇಟ್ ಅಲ್ಲ.. ಕರ್ನಾಟಕ ಮಾತ್ರವಲ್ಲ ಭಾರತದ ಪ್ರಮುಖ ಪ್ರಾವಾಸಿತಾಣಗಳಲ್ಲಿ ಒಂದು.. ಪ್ರಕೃತಿಯ ಅತ್ಯಂತ ರಮಣೀಯ ನೋಟವನ್ನ ಕಣ್ತುಂಬಿಕೊಳ್ಳುವ ಪ್ರವಾಸಿಗರಿಗೆ ಇಲ್ಲಿ ಇನ್ನೂ ಹಲವಾರು ತಾಣಗಳು ನೋಡಲಿಕ್ಕೆ ಸಿಗುತ್ವೆ. ನೀವು ಕೊಡಚಾದ್ರಿಯಲ್ಲಿ ಅರಿಶಿಣ ಗುಂಡಿ ಜಲಾಪಾತಕ್ಕೆ ಹೋಗಿ ಫ್ಯಾಮಿಲಿ ಫ್ರೆಂಡ್ಸ್ ಜೊತೆಗೆ ಎಂಜಾಯ್ ಮಾಡ್ಬೋದು.. ಅಗಸ್ತ್ಯ ತೀರ್ಥದಲ್ಲಿ ಸಮಯ ಕಳೆಯಬಹುದು.. ಇನ್ನೂ ಬೆಟ್ಟದ ಮೇಲೆ ಸರ್ವಜ್ಞ ಪೀಠಕ್ಕೆ ವಿಸಿಟ್ ಮಾಡಬಹುದು, ಅಲ್ಲಿಯೇ ಸಮೀಪದಲ್ಲೇ ಸಿಗುವ ವೆಂಕಟರಾಯನ ದುರ್ಗಕ್ಕೂ ಭೇಟಿ ಮಾಡಿ ಟ್ರಿಪ್ ಎಂಜಾಯ್ ಮಾಡಬಹುದು.. ಅಲ್ಲೇ ಸಿಗುವ ಹಿತ್ತಲಮನೆ ಜಲಪಾತಕ್ಕಂತೂ ನೀವು ಮಿಸ್ ಮಾಡ್ದೇ ವಿಸಿಟ್ ಮಾಡ್ಲೇ ಬೇಕು..
ಮಳೆಗಾಲದಲ್ಲಿ ಕೊಡಚಾದ್ರಿ ಪ್ರವಾಸವೇ ದೊಡ್ಡ ಸಾವಾಲು
ಹೇಳಿಕೇಳಿ ಭಾರತದ ಅತಿ ಹೆಚ್ಚು ಮಳೆ ಬೀಳುವ ಬೆಟ್ಟ ಕೊಡಚಾದ್ರಿ. ಅಲ್ಲಿಗೆ ಮಳೆಗಾಲದಲ್ಲಿ ಪಯಾಣಿಸುವುದು ಕಷ್ಟವೇ ಆದರೂ ಮಳೆಯಲ್ಲಿ ಪ್ರಕೃತಿಯ ಸೌಂದರ್ಯ ಇಮ್ಮಡಿಯಾಗಿರುವ ದೃಶ್ಯ ಕಣ್ತುಂಬಿಕೊಳ್ಳುವುದು ಒಂದು ಅದೃಷ್ಟವೇ ಸರಿ..
ಕೊಡಚಾದ್ರಿಗೆ ತೆರಳಲು ನಿಜವಾಗಲೂ ಸವಾಲೊಡ್ಡುವ ಸಮಯವೆಂದರೆ ಮಳೆಗಾಲ. ಈ ಸಂದರ್ಭದಲ್ಲಿ ರಸ್ತೆಗಳು ತೇವಭರಿತವಾಗಿದ್ದು ಜಾರುತ್ತಿರುತ್ತವೆ. ತೆರಳಲೇಬೇಕೆಂದಿದ್ದರೆ ಸಾಕಷ್ಟು ಜಾಗರೂಕತೆ ವಹಿಸುವುದು ಅತ್ಯವಶ್ಯಕವಾಗಿದೆ. ವರ್ಷದ ಸುಮಾರು 8 ರಿಂದ 9 ತಿಂಗಳುಗಳ ಕಾಲ ಇಲ್ಲಿ ಮಳೆ ಸುರಿಯುತ್ತಿರುತ್ತದೆ.
ಆದರೆ ಮಳೆಗಾಲದಲ್ಲಿ ಕೊಡಚಾದ್ರಿಯು ಧರೆಗಿಳಿದ ಅಪ್ಸರೆಯಂತೆ ಕಾಣಿಸುತ್ತೆ. ಮಂಜು ಮುಸುಕಿನ ವಾತಾವರಣ, ತಂಪು ತಂಪಾದ ಪರಿಸರ, ಎಲ್ಲೆಲ್ಲೂ ಹಸಿರು, ತಾಜಾ ನೀರಿನ ಕೆರೆ ತೊರೆಗಳು, ನಗರದ ಗೌಜು ಗದ್ದಲಗಳಿಲ್ಲದ ಶಾಂತತೆ ಎಲ್ಲವೂ ಸೇರಿ ಇದನ್ನು ಒಂದು ಭುವಿಯ ಸ್ವರ್ಗದ ಹಾಗೆ ಕಾಣುತ್ತೆ.
ಸಮುದ್ರ ಮಟ್ಟದಿಂದ ಸುಮಾರು 1343 ಮೀ ಗಳಷ್ಟು ಎತ್ತರದಲ್ಲಿರುವ ಕೊಡಚಾದ್ರಿಗೆ ಕರ್ನಾಟಕ ಸರ್ಕಾರದಿಂದ ಪಾರಂಪರಿಕ ನೈಸರ್ಗಿಕ ಸ್ಥಳದ ಮಾನ್ಯತೆ ಸಿಕ್ಕಿದೆ. ಮೂಕಾಂಬಿಕಾ ರಾಷ್ಟ್ರೀಯ ಉದ್ಯಾನದ ಮಧ್ಯದಲ್ಲಿ ಸ್ಥಿತವಿರುವ ಕೊಡಚಾದ್ರಿಯು ಜೀವ ವೈವಿಧ್ಯತೆಯ ತಾಣವಾಗಿದ್ದು, ಹಲವು ಬಗೆಯ ಸ್ಥಳೀಯ ಹಾಗೂ ಅಳಿವಿನಂಚಿನಲ್ಲಿರುವ ಜೀವ ಹಾಗೂ ಸಸ್ಯ ಸಂಪತ್ತುಗಳಿಗೆ ಆಶ್ರಯ ತಾಣವಾಗಿದೆ. ಕೊಡಚಾದ್ರಿ ಶಿಖರ ತುದಿಯು ಬರಡು ನೆಲವಾಗಿದ್ದು ಅಷ್ಟೊಂದು ಗಿಡ ಮರಗಳನ್ನು ಇಲ್ಲಿ ಕಾಣಬಹುದು. ಬೆಟ್ಟದ ಸುತ್ತ ಕಾಡು ಪರಿಸರ, ಪ್ರಪಾತವನ್ನ ನೋಡಿದಾಗ ರೋಮಾಂಚನ ಆಗದೆ ಇರಲಾರದು.
ಕೊಡಚಾದ್ರಿಯ ಶಿಖರ ಪ್ರದೇಶದಲ್ಲಿ ಮೂಕಾಂಬಿಕೆ ದೇವಿಗೆ ಮುಡಿಪಾದ ಒಂದು ಪುರಾತನ ದೇಗುಲವನ್ನು ಕಾಣಬಹುದಾಗಿದ್ದು, ಇದು ಅಂದು ದೇವಿಯು ಮೂಕಾಸುರನ ವಧಿಸಿದ ಸ್ಥಳದಲ್ಲಿಯೆ ನಿರ್ಮಾಣವಾಗಿದ್ದೆಂದು ಹೇಳಲಾಗುತ್ತದೆ. ಹಾಗಾಗಿ ಇದು ಧಾರ್ಮಿಕ ದೃಷ್ಟಿಯಿಂದಲೂ ಮನ್ನಣೆಗಳಿಸಿದೆ.
ಐತಿಹಾಸಿಕ ಏಕಶಿಲಾ ರಚನೆಗಳು
ಐತಿಹಾಸಿಕವಾಗಿಯೂ ಮನ್ನಣೆ ಪಡೆದುಕೊಂಡಿರುವ ಕೊಡಚಾದ್ರಿಯಲ್ಲಿ ಇಂದಿಗೂ ಸಹ ಹಲವು ಪುರಾತನ ಕಾಲದಲ್ಲಿ ನಿರ್ಮಿಸಲಾದ ಏಕಶಿಲಾ ರಚನೆಗಳು ನೋಡಲು ಸಿಗುತ್ತವೆ. ಇಂದಿಗೂ ಸಹ ಸಾಕಷ್ಟು ಸಂಖ್ಯೆಯಲ್ಲಿ ಸ್ಥಳೀಯರು , ದೇಸಿ ಹಾಗೂ ವಿದೇಶಿ ಪ್ರವಾಸಿಗರು ಕೊಡಚಾದ್ರಿಗೆ ವಿಸಿಟ್ ಮಾಡ್ತಾರೆ. ಇನ್ನೂ ಬೆಟ್ಟದ ತುತ್ತ ತುದಿಗಳ ಮೇಲೆ ನಿಂತರೇ ಸುತ್ತಲಿನ ಪ್ರಕೃತಿಯ ಮೋಹಕ ನೋಟ ಎಂಥವರನ್ನೂ ಸಮ್ಮೋಹಿಸುತ್ತೆ. ಈ ಶಿಖರದಲ್ಲಿ ಆದಿ ಶಂಕರಾಚಾರ್ಯರು ಭೇಟಿ ನೀಡಿ ಕೆಲ ಸಮಯ ಧ್ಯಾನಿಸಿದ್ದರು ಎಂದು ಹೇಳಲಾಗಿದೆ. ಅದಕ್ಕೆ ಕುರುಹು ಎಂಬಂತೆ ಶಿಲೆಯ ಒಂದು ಪುಟ್ಟ ದೇಗುಲವಾದ ಸರ್ವಜ್ಞ ಪೀಠವನ್ನು ಇಂದಿಗೂ ಇಲ್ಲಿ ಕಾಣಬಹುದಾಗಿದೆ. ಆದಿ ಶಂಕರರಿಗೆ ಇದು ಮುಡಿಪಾಗಿದೆ.
ತಂಗುವ ವ್ಯವಸ್ಥೆ :
ಇನ್ನೂ ನೀವು ಕೊಡಚಾದ್ರಿಗೆ ಭೇಟಿ ನೀಡಿದ್ರೆ ಒಂದೇ ದಿನದಲ್ಲಿ ಅಲ್ಲಿಂದ ವಾಪಸ್ಸಾಗುವುದು ಅಸಾಧ್ಯವೇ.. ಹೀಗಾಗಿ ನೀವು ಅಲ್ಲಿ ತಂಗಲೇಬೇಕಾಗುತ್ತೆ.. ಸುತ್ತಲೂ ದೂರದಲ್ಲಿ ಖಾಸಗಿ ಲಾಡ್ಜ್ ಗಳು ಇವೆ.. ಆದರೆ ನೀವು ಚಾರಣಕ್ಕೆಂದು ಹೊರಟಾಗ ಕತ್ತಲಾಗ್ತಿದ್ದಂತೆ ಬೆಟ್ಟದ ಮಧ್ಯೆಯೇ ತಂಗುವುದಕ್ಕೆ ವ್ಯವಸ್ಥೆ ಇದೆ.. ಮೂಲ ಮೂಕಾಂಬಿಕಾ ದೇಗುಲದ ಬಳಿ ಕರ್ನಾಟಕ ಲೋಕೋಪಯೋಗಿ ಇಲಾಖೆಯ ಅಥಿತಿ ಗೃಹವಿದೆ. ಇಲ್ಲಿ ಚಾರಣಿಗರು ತಂಗಬಹುದು. ಆದರೆ ಅದಕ್ಕೂ ಮುನ್ನ ಅನುಮತಿ ಪಡೆಯುವುದು ಕಡ್ಡಾಯ.. ಇನ್ನೂ ಪ್ರವಾಸಿಗರಿಗಾಗಿ ಮೂಕಾಂಬಿಕಾ ದೇವಸ್ತಾನದ ಅರ್ಚಕರ ಮನೆಗಳಲ್ಲಿ ಊಟ ಮತ್ತು ಉಳಿಯಲು ಅನುಕೂಲವಿದೆ.