ಕೊಪ್ಪಳ: ಕಲ್ಯಾಣ ಕರ್ನಾಟಕ ಭಾಗದ ಆರ್ಥಿಕ ಅಭಿವೃದ್ಧಿಯಲ್ಲಿ `ಕೊಪ್ಪಳ ಟಾಯ್ ಕ್ಲಸ್ಟರ್’ ಮಹತ್ವದ ಪಾತ್ರ ವಹಿಸಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಣ್ಣಿಸಿದ್ದಾರೆ.
m/s ಎಕಸ್ ಸಂಸ್ಥೆ ಹಾಗೂ ವಿಜಯೇಂದ್ರ ಬಾಬು ಮಾಲೀಕತ್ವದ ಮೈಕ್ರೋ ಪ್ಲಾಸ್ಟಿಕ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಕೊಪ್ಪಳ ಜಿಲ್ಲೆಯ ಕುಕನೂರು ತಾಲ್ಲೂಕಿನ ಭಾನಾಪುರ ಗ್ರಾಮದಲ್ಲಿ `ಕೊಪ್ಪಳದ ಆಟಿಕೆಗಳ ಕ್ಲಸ್ಟರ್’ನ ಭೂಮಿ ಪೂಜೆ ಹಾಗೂ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಭಾರತದ ಮೊಟ್ಟಮೊದಲ ಆಟಿಕೆ ಉತ್ಪಾದನಾ ಕ್ಲಸ್ಟರ್ ನಿರ್ಮಾಣಕ್ಕೆ ಅತ್ಯಂತ ಸಂತೋಷದಿಂದ ಇಂದು ಶಂಕುಸ್ಥಾಪನೆ ನೆರವೇರಿಸಿದ್ದೇವೆ. ಪಾರಂಪರಿಕ ಕಿನ್ನಾಳ ಆಟಿಕೆಗೆ ಹೆಸರಾದ ಕೊಪ್ಪಳ ಜಿಲ್ಲೆ ಇದೀಗ ಆಟಿಕೆ ಉತ್ಪಾದನೆ ಕೇಂದ್ರವಾಗಿ ರೂಪುಗೊಳ್ಳುತ್ತಿರುವುದು ಸಂತೋಷದ ಸಂಗತಿ ಎಂದರು.
ಎಕಸ್ ಸಂಸ್ಥೆಯವರು ಈ ಕ್ಲಸ್ಟರ್ ಅಭಿವೃದ್ಧಿ ಪಡೆಸುತ್ತಿದ್ದು, ಈ ಸಂಸ್ಥೆಯ ಅಧ್ಯಕ್ಷರಾದ ಅರವಿಂದ ಮೆಳ್ಳಗೇರಿ ಅವರು ನಮ್ಮ ರಾಜ್ಯದವರೇ ಆಗಿರುವುದು ಹೆಮ್ಮೆಯ ವಿಷಯವಾಗಿದೆ. ಈ ಆಟಿಕೆ ಕ್ಲಸ್ಟರ್ ಡಿಸೆಂಬರ್ ಒಳೆಗೆ ಕಾರ್ಯಾರಂಭ ಮಾಡಲಿದ್ದು, ಕಲ್ಯಾಣ ಕರ್ನಾಟಕದ ಅಭಿವೃದ್ಧಿ ನಕ್ಷೆಯಲ್ಲಿ ಗಮನಾರ್ಹ ಗುರುತಾಗಲಿದೆ ಎಂದು ಸಿಎಂ ತಿಳಿಸಿದರು.
5ಸಾವಿರ ಕೋಟಿ ಬಂಡವಾಳ ಆಕರ್ಷಣೆ ಗುರಿ
ಮುಂದಿನ 5 ವರ್ಷಗಳಲ್ಲಿ ಸುಮಾರು 5 ಸಾವಿರ ಕೋಟಿ ರೂಪಾಯಿ ಬಂಡವಾಳ ಆಕರ್ಷಿಸುವ ನಿರೀಕ್ಷೆ ಹೊಂದಿದ್ದು, 25 ಸಾವಿರ ನೇರ ಹಾಗೂ 1 ಲಕ್ಷ ಪರೋಕ್ಷ ಉದ್ಯೋಗ ಸೃಷ್ಟಿ ಮಾಡಲಿದೆ. ಕಲ್ಯಾಣ ಕರ್ನಾಟಕ ಭಾಗದ ಆರ್ಥಿಕ ಅಭಿವೃದ್ಧಿಯಲ್ಲಿ ಈ ಆಟಿಕೆ ಕ್ಲಸ್ಟರ್ ಮಹತ್ವದ ಪಾತ್ರ ವಹಿಸಲಿದೆ ಎಂದು ಯಡಿಯೂರಪ್ಪ ಹೇಳಿದರು.
ರಾಜ್ಯದ ಅಭಿವೃದ್ಧಿಗೆ ಅತೀ ಮುಖ್ಯ ಅಂಶಗಳಾದ ಕೃಷಿ ಮತ್ತು ಕೈಗಾರಿಕೆಗಳೆರಡಕ್ಕೂ ನಮ್ಮ ಸರ್ಕಾರ ಸಮಾನ ಆದ್ಯತೆ ನೀಡುತ್ತಿದೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಹಲವು ಮಹತ್ತರ ಕಾನೂನು ಸುಧಾರಣೆಗಳನ್ನು ಮಾಡಿದೆ. ಕರ್ನಾಟಕ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಕೈಗಾರಿಕೆಗೆ ಭೂಮಿ ಪಡೆಯುವುದರಲ್ಲಿನ ತೊಡಕುಗಳನ್ನು ನಿವಾರಿಸಲಾಗಿದೆ. ಅಂತಯೇ ಹೊಸದಾಗಿ ಕೃಷಿಯನ್ನು ಉದ್ಯೋಗವಾಗಿ ಸ್ವೀಕರಿಸುವ ಆಸಕ್ತರಿಗೆ ಕೃಷಿ ಭೂಮಿ ಖರೀದಿಸಲು ಸಹ ಅವಕಾಶ ಒದಗಿಸಲಾಗಿದೆ.
ಸರ್ಕಾರವು ಕೈಗಾರಿಕಾ ನೀತಿ-2020-25ನ್ನು ಜಾರಿಗೆ ತಂದಿದೆ. ಈ ನೀತಿಯನ್ವಯ ಬೆಂಗಳೂರಿಗೆ ಮಾತ್ರ ಸೀಮಿತವಾಗಿದ್ದ ಕೈಗಾರಿಕೆಗಳನ್ನು ರಾಜ್ಯದ ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ ಕೈಗಾರಿಕೆ ಸ್ಥಾಪನೆಗೆ ಆದ್ಯತೆ ನೀಡಲಾಗಿದೆ.
ಲಾಕ್ಡೌನ್ ಇದ್ದಾಗಲೂ ಉತ್ಪಾದನೆಗೆ ತೊಡಕಾಗದಂತೆ ಉದ್ಯಮಗಳಿಗೆ ಎಲ್ಲಾ ರೀತಿಯ ಸಹಕಾರ ನೀಡಿ ಜನಜೀವನ ಹಾಗೂ ಆರ್ಥಿಕತೆಯ ನಡುವೆ ಸಮತೋಲನ ಕಾಯ್ದುಕೊಂಡಿದೆ. ಕಳೆದ ಸಾಲಿನಲ್ಲಿ ದೇಶದಲ್ಲಿ ವಿವಿಧ ಕೈಗಾರಿಕೆಗಳನ್ನು ಸ್ಥಾಪಿಸಲು ಒಟ್ಟು 1188 ಬಂಡವಾಳ ಹೂಡಿಕೆ ಪ್ರಸ್ತಾಪಗಳು ಸ್ವೀಕೃತವಾಗಿದ್ದು, ಈ ಪೈಕಿ 1.54 ಲಕ್ಷ ಕೋಟಿ ರೂ. ಮೌಲ್ಯದ 95 ಹೂಡಿಕೆ ಪ್ರಸ್ತಾವನೆಗಳು ರಾಜ್ಯದ ಪಾಲಾಗಿವೆ. ಆದರೆ ದೇಶದ ಒಟ್ಟು ಹೂಡಿಕೆ ಪ್ರಸ್ತಾವನೆಗಳಲ್ಲಿ ರಾಜ್ಯದ ಪಾಲು ಶೇ.41 ರಷ್ಟಿದೆ ಎಂದು ತಿಳಿಸಿದರು.
ವಿಶ್ವವಿದ್ಯಾಲಯ ಸ್ಥಾಪನೆಗೆ ಅಗತ್ಯ ಕ್ರಮ
ಕೊಪ್ಪಳ ಜಿಲ್ಲೆಯಲ್ಲೆ ವಿಶ್ವವಿದ್ಯಾಲಯ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ಜಿಲ್ಲೆಯ ನೂತನ ತಾಲ್ಲೂಕು ಆದ ಕುಕನೂರಿನಲ್ಲಿ ಮಿನಿವಿಧಾನ ಸೌಧ ಸ್ಥಾಪನೆಗೆ ಮನವಿ ಬಂದಿದ್ದು, ಈ ಬಗ್ಗೆ ಸಚಿವ ಸಂಪುಟದಲ್ಲಿ ತೀರ್ಮಾನಿಸಿ, ಮುಂದಿನ ಬಜೆಟ್ ಅಧಿವೇಶನದಲ್ಲಿ ಅನುಮೋದನೆ ನೀಡಲಾಗುವುದು. ಏತ ನೀರಾವರಿ ಯೋಜನೆಗೆ ಹಂತ ಹಂತವಾಗಿ ಅನುಮೋದನೆ ನೀಡುತ್ತೇವೆ. ಈಗಾಗಲೇ ಕಾಮಗಾರಿ ನಡೆಯುತ್ತಿದ್ದು, ಹಂತ ಹಂತವಾಗಿ ಪ್ರಥಮ 650 ಕೋಟಿ, ದ್ವಿತೀಯ 650 ಕೋಟಿ ಹಾಗೂ ತೃತೀಯ 450 ಕೋಟಿ ಸೇರಿ ಮೂರು ಹಂತದಲ್ಲಿ ಒಟ್ಟು ರೂ. 1750 ಕೋಟಿ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು. ಕೃಷಿ ವಾಹನಗಳಿಗೆ ಇಂದು ಚಾಲನೆ ನೀಡಿದ್ದು, ಸಂತಸ ವಿಷಯವಾಗಿದೆ ಎಂದು ಯಡಿಯೂರಪ್ಪ ಹೇಳಿದರು.
`ವೋಕಲ್ ಫಾರ್ ಲೋಕಲ್’
ದೇಶದ ಮೊದಲ ಆಟಿಕೆ ಕ್ಲಸ್ಟರ್ ಕೊಪ್ಪಳದಲ್ಲಿ ಹೂಡಿಕೆ ಮಾಡುವಂತೆ ದೇಶ ಮತ್ತು ವಿದೇಶದ ಆಟಿಕೆ ತಯಾರಕರಿಗೆ ಕರ್ನಾಟಕ ಮುಕ್ತ ಆಹ್ವಾನ ನೀಡಿದೆ. ಆತ್ಮ ನಿರ್ಭರ್ ಭಾರತ ಅಭಿಯಾನದ ಅಡಿಯಲ್ಲಿ `ವೋಕಲ್ ಫಾರ್ ಲೋಕಲ್’ ಎಂಬ ಪ್ರಧಾನಿ ನರೇಂದ್ರ ಮೋದಿ ಜಿ ಅವರು ನೀಡಿರುವ ಕರೆಗೆ ಪೂರಕವಾಗಿ ಕರ್ನಾಟಕ ಆಟಿಕೆ ತಯಾರಿಕೆಗೆ ಒತ್ತು ನೀಡಿ, ದೇಶ ಮತ್ತು ವಿದೇಶದ ಆಟಿಕೆ ತಯಾರಕರಿಗೆ ಅಗತ್ಯ ಸೌಲಭ್ಯ ಒದಗಿಸುವ ಭರವಸೆ ನೀಡುತ್ತೇವೆ ಎಂದರು.
ಬೃಹತ್ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಮಾತನಾಡಿ, ಇಂದು ಇತಿಹಾಸ ನಿರ್ಮಿಸುವ ಕಾರ್ಯಕ್ರಮ ನಡೆಯುತ್ತಿದೆ. ಟಾಯ್ ಕ್ಲಸ್ಟರ್ ಕೊಪ್ಪಳಕ್ಕೆ ಮಾತ್ರ ಸೀಮಿತವಾಗುವುದಿಲ್ಲ. ಬದಲಿಗೆ ಕಲ್ಯಾಣ ಕರ್ನಾಟಕಕ್ಕೆ ಅನುಕೂಲ ಆಗಲಿದೆ ಎಂದರು.
ಕೃಷಿ ಸಚಿವ ಬಿ.ಸಿ ಪಾಟೀಲ್ ಮಾತನಾಡಿ, ಇಂದು ಜಗತ್ತಿನ ಕಿರೀಟದಲ್ಲಿ ಕೊಪ್ಪಳ ಮುತ್ತಾಗಿ ಸೇರಿಕೊಂಡಿದೆ. ಅಂತಹ ಯೋಜನೆಗೆ ಇಂದು ಚಾಲನೆ ದೊರೆತಿದೆ. ನೆಲ, ಜಲ ನಮ್ಮದು ಹಾಗಾಗಿ ಉದ್ಯೋಗದಲ್ಲಿ ಇಲ್ಲಿಯವರಿಗೆ ಮೊದಲ ಆದ್ಯತೆ ನೀಡಿ. ಕೊಪ್ಪಳದ ಸ್ಥಳೀಯ ಯುವ ಜನತೆಗೆ ಮೊದಲ ಆದ್ಯತೆ ನೀಡಬೇಕು ಎಂದರು.
ಸಂಸದ ಕರಡಿ ಸಂಗಣ್ಣ , ಕ್ಲಸ್ಟರ್ಗೆ ಚಾಲನೆ ದೊರೆತ ಸಂಭ್ರಮದ ಕ್ಷಣ ಇದು. ನಾವು ಅಭಿವೃದ್ಧಿ ಪರ ಇದ್ದೇವೆ. ಜಮೀನು ಕಳೆದುಕೊಂಡವರಿಗೆ ಪರಿಹಾರ ಸಿಕ್ಕಿದೆ. ಆದರೆ ಪಕ್ಕದ ಜಮೀನುಗಳಿಗೆ ಕಾರ್ಖಾನೆಗಳಿಂದಾಗಿ ಬೆಳೆ ಹಾಳಾಗುತ್ತಿದೆ. ಹಾಗಾಗಿ ಇಂಡಸ್ಟ್ರಿಯಲ್ ಕಾರೀಡಾರ್ ಮಾಡಬೇಕು. ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಸಚಿವರಾದ ಸಿ.ಸಿ ಪಾಟೀಲ, ಆನಂದ ಸಿಂಗ್, ಜಿಲ್ಲಾ ಪಂಚಾಯತಿ ಅಧ್ಯಕ್ಷ ಕೆ.ರಾಜಶೇಖರ್ ಹಿಟ್ನಾಳ, ಶಾಸಕರುಗಳಾದ ಅಮರೇಗೌಡ ಎಲ್. ಪಾಟೀಲ್ ಬಯ್ಯಾಪೂರ, ಪರಣ್ಣ ಈಶ್ವರಪ್ಪ ಮುನವಳ್ಳಿ, ಕೆ.ರಾಘವೇಂದ್ರ ಹಿಟ್ನಾಳ ಹಾಗೂ ಬಸವರಾಜ ದಢೇಸೂಗೂರು, ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ, ಮಾಜಿ ಸಚಿವರಾದ ಆರ್.ವಿ.ದೇಶಪಾಂಡೆ ಹಾಗೂ ಬಸವರಾಜ ರಾಯರಡ್ಡಿ, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ, ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಏಕಸ್ ಚೇರಮನ್ ಅರವಿಂದ ಮೆಳ್ಳಿಗೇರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel