ಚಿತ್ರದುರ್ಗದಲ್ಲಿ ಪೊಲೀಸ್ ಠಾಣೆ ಮೆಟ್ಟಿಲು ಏರಿದ ಕೋಟಿಗೊಬ್ಬ -3
ಕೋಟಿಗೊಬ್ಬ -3 ಚಿತ್ರಕ್ಕೆ ಒಂದಲ್ಲ ಒಂದು ವಿಘ್ನಗಳು ಎದುರಾಗುತ್ತಿವೆ. ಚಿತ್ರದ ಬಿಡುಗಡೆಯ ದಿನದಿಂದ ಇಲ್ಲಿಯ ತನಕ ಒಂದಲ್ಲ ಒಂದು ವಿವಾದಗಳು ಸುತ್ತಿಕೊಳ್ಳುತ್ತಿವೆ. ಹೌದು, ಇದೀಗ ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ಚಿತ್ರದ ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ವಿತರಕ ಖಾಝಾಫೀರ್ ಅವರು ದೂರು ದಾಖಲಿಸಿದ್ದಾರೆ. ಅಲ್ಲದೆ ಪೊಲೀಸರು ಸೂರಪ್ಪ ಬಾಬು ವಿರುದ್ಧ ಎಫ್ ಐ ಆರ್ ಕೂಡ ದಾಖಲಿಸಿದ್ದಾರೆ.
ಚಿತ್ರದುರ್ಗ, ಬಳ್ಳಾರಿ, ದಾವಣಗೆರೆ ಜಿಲ್ಲೆಗಳಿಗೆ ಕೋಟಿಗೊಬ್ಬ -3 ಚಿತ್ರದ ವಿತರಣೆಯ ಹಕ್ಕನ್ನು ಖಾಝಾಫೀರ್ ಅವರು 2.90 ಕೋಟಿಗೆ ಸೂರಪ್ಪ ಬಾಬು ಜೊತೆ ಒಪ್ಪಂದ ಮಾಡಿಕೊಂಡಿದ್ದರು. ಒಪ್ಪಂದ ಪ್ರಕಾರ ಖಾಝಾಫೀರ್ ಅವರು 60 ಲಕ್ಷ ರೂಪಾಯಿಯನ್ನು ಮುಂಗಡವಾಗಿ ನೀಡಿದ್ದರು. ಆದ್ರೆ ಬಾಕಿ ಹಣವನ್ನು ನೀಡದ ಕಾರಣ ಬೇರೆಯವರಿಗೆ ವಿತರಣೆಯ ಹಕ್ಕನ್ನು ನೀಡಿದ್ದರು. ಜೊತೆಗೆ ಒಂದು ದಿನ ತಡವಾಗಿ ಚಿತ್ರವನ್ನು ಕೂಡ ಬಿಡುಗಡೆ ಮಾಡಬೇಕಾಯ್ತು.
ಈ ನಡುವೆ ಖಾಝಾಫೀರ್ ಅವರು ಮುಂಗಡವಾಗಿ ನೀಡಿದ್ದ ಹಣವನ್ನು ವಾಪಸ್ ಕೊಡುವಂತೆ ಸೂರಪ್ಪ ಬಾಬು ಅವರ ಬಳಿ ಕೇಳಿದ್ದಾರೆ. ಆದ್ರೆ ಸೂರಪ್ಪ ಬಾಬು ಅವರು ವಾಪಸ್ ದುಡ್ಡು ಕೊಡಲ್ಲ. ಅಲ್ಲದೆ ಸುದೀಪ್ ಅಭಿಮಾನಿಗಳ ಮೂಲಕ ಧಮ್ಕಿ ಹಾಕುತ್ತಿದ್ದಾರೆ. ನನ್ನ ಜೀವಕ್ಕೆ ಅಪಾಯವಿದೆ. ನನಗೆ ರಕ್ಷಣೆ ಕೊಡಿ. ಅವ್ಯಾಚ ಶಬ್ದಗಳಿಂದ ನಿಂದನೆ ಮಾಡಿದ್ದಾರೆ. ಎಂದು ಆರೋಪಿಸಿ ಖಾಝಾಫೀರ್ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ವಿಚಾರವನ್ನು ಖಾಝಫೀರ್ ಅವರು ಸುದ್ದಿಗೋಷ್ಠಿಯಲ್ಲೂ ಹೇಳಿಕೊಂಡಿದ್ದಾರೆ.
ಖಾಝಫೀರ್ ದೂರು ನೀಡಿರುವ ಹಿನ್ನಲೆಯಲ್ಲಿ ಚಿತ್ರದುರ್ಗ ನಗರ ಠಾಣೆಯ ಪೋಲಿಸರು, ಸೂರಪ್ಪ ಬಾಬು ವಿರುದ್ಧ ಐಸಿಸಿ ಕಲಂ 506 ಮತ್ತು 504ರ ಅಡಿಯಲ್ಲಿ ಎಫ್ ಐ ಆರ್ ದಾಖಲಿಸಿಕೊಂಡಿದ್ದಾರೆ. ಚಿತ್ರದುರ್ಗ ಮತ್ತು ಮೈಸೂರು ವಿತರಕರು ಸರಿಯಾದ ಸಮಯಕ್ಕೆ ಹಣವನ್ನು ನೀಡದ ಕಾರಣ ಒಂದು ದಿನ ಸಿನಿಮಾವನ್ನು ತಡವಾಗಿ ಬಿಡುಗಡೆ ಮಾಡಬೇಕಾಗಿತ್ತು. ಹೀಗಾಗಿ ನಮಗೆ ನಷ್ಟವಾಗಿದೆ ಎಂದು ಸೂರಪ್ಪ ಬಾಬು ಆರೋಪಿಸಿದ್ದಾರೆ. ಕೋಟಿಗೊಬ್ಬ -3 ಚಿತ್ರ ಅಕ್ಟೋಬರ್ 14ರಂದು ಬಿಡುಗಡೆಯಾಗಬೇಕಿತ್ತು. ಆದ್ರೆ ಚಿತ್ರ ಬಿಡುಗಡೆಯಾಗಿದ್ದು ಅಕ್ಟೋಬರ್ 15ರಂದು. ಹೀಗಾಗಿ ನಮಗೆ 8ರಿಂದ ಹತ್ತು ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಸೂರಪ್ಪ ಬಾಬು ಹೇಳಿದ್ದಾರೆ. ಇದೀಗ ಸುದೀಪ್ ಅಭಿನಯದ ಕೋಟಿಗೊಬ್ಬ ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಆದ್ರೆ ವಿವಾದಗಳು ಮಾತ್ರ ಚಿತ್ರವನ್ನು ಸುತ್ತುವರಿಯುತ್ತಲೇ ಇದೆ.