ಡಿಕೆಶಿ ಕಲೆಕ್ಷನ್ ಗಿರಾಕಿ.. ಡಿಕೆಶಿ ಬಳಿ ದುಡ್ಡು ಎಷ್ಟಿರಬಹುದು..? ಕೆಪಿಸಿಸಿ ಕಚೇರಿಯಲ್ಲೇ ಗುಟ್ಟು ರಟ್ಟು..!

1 min read
D K Shivakumar

ಡಿಕೆಶಿ ಕಲೆಕ್ಷನ್ ಗಿರಾಕಿ.. ಡಿಕೆಶಿ ಬಳಿ ದುಡ್ಡು ಎಷ್ಟಿರಬಹುದು..? ಕೆಪಿಸಿಸಿ ಕಚೇರಿಯಲ್ಲೇ ಗುಟ್ಟು ರಟ್ಟು..!

ಯಾರಿಗೂ ಕ್ಯಾರ್ ಮಾಡಲ್ಲ.. ತಾನು ನಡೆದದ್ದೇ ದಾರಿ.. ಅಧಿಕಾರ ಮತ್ತು ದುಡ್ಡಿಗೆ ಒಂಚೂರು ಬಡತನವಿಲ್ಲ. ಐಟಿ- ಇಡಿ ರೈಡ್ ಆದ್ರೂ ಎದೆಗುಂದಲಿಲ್ಲ. ಭ್ರಷ್ಟಚಾರದ ಆರೋಪದ ಬಂದ್ರೂ ತಲೆಕೆಡಿಸಿಕೊಳ್ಳುವುದಿಲ್ಲ.

ಯಾವುದೇ ಟೀಕೆ, ಆರೋಪಗಳಿದ್ರೂ ಸಮರ್ಥವಾಗಿ ಎದುರಿಸುವ ತಾಕತ್ತು ಕೆಪಿಸಿಸಿ ಅಧ್ಯಕ್ಷ ಹಾಗೂ ಸಾತನೂರಿನ ಬಂಡೆ ಡಿ.ಕೆ. ಶಿವಕುಮಾರ್ ಅವರಿಗಿದೆ.

ಹೈಕಮಾಂಡ್ ಮೇಲೆ ತನ್ನ ಪ್ರಭಾವವನ್ನು ಬಳಸಿಕೊಂಡು ಕೆಪಿಸಿಸಿ ಅಧ್ಯಕ್ಷ ಪಟ್ಟವನ್ನು ಒಲಿಸಿಕೊಂಡಿರುವ ಡಿ.ಕೆ. ಶಿವಕುಮಾರ್ ಅವರಿಗೆ ಸ್ವಪಕ್ಷಿಯವರಿಂದಲೇ ತೊಂದರೆಯನ್ನು ಅನುಭವಿಸುತ್ತಿರುವುದು ಗುಟ್ಟಾಗಿ ಏನು ಉಳಿದಿಲ್ಲ.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ ಭಿನ್ನಾಭಿಪ್ರಾಯಗಳಿವೆ. ಅದೇ ರೀತಿ ರಾಜ್ಯ ಕಾಂಗ್ರೆಸ್ ನ ಹಿರಿಯ ಮುಖಂಡರು ಕೂಡ ಡಿ,ಕೆ. ಶಿವಕುಮಾರ್ ಅವರ ವರ್ತನೆ ಬಗ್ಗೆ ಅಸಮಾಧಾನಗೊಂಡಿರುವುದು ಗೊತ್ತಿಲ್ಲದ ವಿಚಾರವೇನು ಅಲ್ಲ.

ಎಷ್ಟೇ ಭಿನ್ನಾಭಿಪ್ರಾಯ, ಅಸಮಾಧಾನಗಳಿದ್ರೂ ಕಾಂಗ್ರೆಸ್‌ನ ಹಿರಿಯ ನಾಯಕರು ಬಹಿರಂಗವಾಗಿ ಎಲ್ಲಿಕೂಡ ಹೇಳಿಕೊಂಡಿರಲಿಲ್ಲ. ಆದ್ರೆ ಇದೀಗ ಡಿಕೆಶಿ ವಿರುದ್ಧ ಸ್ವತಃ ಪಕ್ಷದ ಕಚೇರಿಯಲ್ಲೇ ಅಸಮಾಧಾನ ಮತ್ತು ಡಿಕೆಶಿಯವರ ಆಸ್ತಿ ಹಣದ ಬಗ್ಗೆ ಮಾತನಾಡಿರುವುದು ಬಹಿರಂಗಗೊಂಡಿದೆ.

D K Shivakumar saaksha tv

ಮೊನ್ನೆ ಡಿಸೈನ್ ಬಾಕ್ಸ್ ಅನ್ನೋ ಕಂಪೆನಿಯ ಮೇಲೆ ಐಟಿ ರೈಡ್ ಆಗಿತ್ತು. ಆಗ ಎಚ್‌ಡಿಕೆ ಹೇಳಿಕೆಯೊಂದನ್ನು ನೀಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಲು ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಂಸದ ಉಗ್ರಪ್ಪ ಮತ್ತು ಕೆಪಿಸಿಸಿ ಮಾಧ್ಯಮ ಸಂಯೋಜಕ ಸಲೀಮ್ ಅವರು ಸುದ್ದಿಗೋಷ್ಠಿಯನ್ನು ಕರೆದಿದ್ದರು.

ಸುದ್ದಿಗೋಷ್ಠಿ ಆರಂಭಕ್ಕೆ ಮುನ್ನ ಸಲೀಮ್ ಮತ್ತು ಉಗ್ರಪ್ಪ ಅವರು ಗುಟ್ಟಾಗಿ ಮಾತನಾಡಿರುವ ವಿಡಿಯೋ ಈಗ ವೈರಲ್ ಆಗುತ್ತಿದೆ.

ಡಿಕೆಶಿ ಒಬ್ಬ ಕಲೆಕ್ಷನ್ ಗಿರಾಕಿ… ಡಿಕೆಶಿ ಹುಡುಗನ ಬಳಿಯೇ ಐವತ್ತು – ನೂರು ಕೋಟಿ ಹಣ ಸಿಕ್ಕಿದೆ. ಅಂದ ಮೇಲೆ ಡಿಕೆಶಿ ಎಷ್ಟು ದುಡ್ಡು ಮಾಡಿರಬೇಕು.. ಎಷ್ಟು ದುಡ್ಡು ಇರಬೇಕು ಎಂದು ಉಗ್ರಪ್ಪ ಮತ್ತು ಸಲೀಮ್ ಅವರು ಗುಟ್ಟಾಗಿ ಮಾತನಾಡಿಕೊಂಡಿದ್ದಾರೆ.

ಅಂದ ಮೇಲೆ ಮಾಜಿ ಸಂಸದ ಉಗ್ರಪ್ಪ ಮತ್ತು ಸಲೀಮ್ ಅವರು ಡಿಕೆಶಿ ಮೇಲೆ ಅಸಮಾಧಾನಗೊಂಡಿದ್ದಾರೆ ಎಂಬುದು ಸ್ಪಷ್ಟವಾಗುತ್ತಿದೆ.

ಹಾಗೇ ಡಿಕೆಶಿ ಮಾತನಾಡುವಾಗ ತೊದಲುತ್ತಾರೆ, ಭಾವನಾತ್ಮಕವಾಗಿ ಮಾತನಾಡುತ್ತಾರೆ. ಅದೇ ಸಿದ್ದರಾಯಮ್ಯ ತುಂಬಾನೇ ಖಡಕ್ ಆಗಿ ಮಾತನಾಡುತ್ತಾರೆ ಎಂದು ಸಹ ಉಗ್ರಪ್ಪ ಮತ್ತು ಸಲೀಮ್ ಅಹ್ಮದ್ ಮಾತನಾಡಿಕೊಂಡಿದ್ದಾರೆ.

ಒಟ್ಟಿನಲ್ಲಿ ಡಿ,ಕೆ. ಶಿವಕುಮಾರ್ ಅವರಿಗೆ ಸ್ಪಪಕ್ಷದಲ್ಲೇ ಬೆಂಬಲವಿಲ್ಲ. ಬದಲಾಗಿ ಸಿದ್ಧರಾಮಯ್ಯನವರ ಪರ ಕಾಂಗ್ರೆಸ್ ನಾಯಕರು ಹೆಚ್ಚು ಒಲವು ತೋರಿಸುತ್ತಿದ್ದಾರೆ. ಪಕ್ಷದ ರಾಜ್ಯ ಅಧ್ಯಕ್ಷರ ವಿರುದ್ಧವೇ ತಮ್ಮದೇ ಕಚೇರಿಯಲ್ಲಿ ಈ ರೀತಿ ಮಾತನಾಡಿರುವುದು ಎಷ್ಟರ ಮಟ್ಟಿಗೆ ಸರಿ.

ಇಲ್ಲಿ ಆಗಿದ್ದು ಇಷ್ಟೇ.. ಉಗ್ರಪ್ಪ ಮತ್ತು ಸಲೀಮ್ ಅವರ ಟೇಬಲ್ ಎದುರೇ ಟಿವಿ ವಾಹಿನಿಗಳ ಮೈಕ್ ಗಳು ಇದ್ದವು. ಪಾಪ ಉಗ್ರಪ್ಪ ಮತ್ತು ಸಲೀಮ್ ಅವರಿಗೆ ವಾಯ್ಸ್ ಮತ್ತು ವಿಡಿಯೋ ರೆಕಾರ್ಡ್ ಆಗುತ್ತಿದೆ ಎಂಬ ಪರಿಜ್ಞಾನವೇ ಇರಲಿಲ್ಲ.

ಹಾಗಾಗಿ ತಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಪರಸ್ಪರ ಹಂಚಿಕೊಂಡಿದ್ದಾರೆ. ಆದ್ರೆ ಕ್ಯಾಮರಾ ಕಣ್ಣು ಮತ್ತು ಧ್ವನಿ ಎಷ್ಟು ಪವರ್ ಫುಲ್ ಆಗಿರುತ್ತೆ ಎಂಬುದೇ ಅವರಿಗೆ ಗೊತ್ತಾಗಿಲ್ಲ.

ಅದಕ್ಕೆ ಅನ್ನೋದು ಅತೀ ಬುದ್ಧಿವಂತರು ಕೂಡ ಕೆಲವೊಂದು ಬಾರಿ ಎಡವುತ್ತಾರೆ ಅನ್ನೋದು. ಯಾಕಂದ್ರೆ ಮಾತಿನ ಮಲ್ಲ ಉಗ್ರಪ್ಪ ಬುದ್ಧಿವಂತರು ಎಂಬುದರಲ್ಲಿ ಎರಡು ಮಾತಿಲ್ಲ.

ಆದ್ರೆ ಇದೀಗ ತನ್ನ ಅತೀ ಬುದ್ಧೀವಂತಿಕೆಯನ್ನು ತೋರಿಸಲು ಹೋಗಿ ತಾವೇ ಹಳ್ಳಕ್ಕೆ ಬಿದ್ದಿದ್ದಾರೆ. ಏನೇ ಆಗ್ಲಿ, ಇದಕ್ಕೆ ಉಗ್ರಪ್ಪ ಮತ್ತು ಸಲೀಮ್ ಅವರು ಯಾವ ರೀತಿ ಸಮರ್ಥನೆ ಕೊಡುತ್ತಾರೆ ಅನ್ನೋದು ಕೂಡ ಸಾಕಷ್ಟು ಕುತೂಹಲ ಮೂಡಿಸಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd