ಅಧಿಕಾರಕ್ಕಾಗಿ ಆಗ ನೀವು ಆ ಸೂತ್ರ ಬಳಸಿದ್ದೀರಿ.. ಅದೇ ಸೂತ್ರವನ್ನು ನಾವು ಈಗ ಬಳಸಬಾರದಾ?
ಹಾಗಂತ ದಾರಿ ತಪ್ಪಿ ಬಂದಿದ್ದಲ್ಲ.. ಅಂಕು ಡೊಂಕಾಗಿರುವ ದಾರಿಯನ್ನು ರಿಪೇರಿ ಮಾಡಲು ಬಂದಿದ್ದೇವೆ… ಹೀಗೆ ಹೇಳಿಕೊಂಡು ಕೆಎಸ್‍ಸಿಎ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ ಟೀಮ್ ಇಂಡಿಯಾದ (Team India) ಮಾಜಿ ವೇಗಿ ವೆಂಕಟೇಶ್ ಪ್ರಸಾದ್ & ಟೀಮ್.
ಹೌದು, ತಪ್ಪು ಆಗಿದೆ.. ತಡವೂ ಆಗಿದೆ. ಒಂದು ಬಾರಿ ರಿಪೇರಿ ಮಾಡಲು ಬಂದು ಕೆಲವೊಂದು ಎಡವಟ್ಟುಗಳನ್ನು ಮಾಡ್ಕೊಂಡು ಸಹವಾಸನೇ ಬೇಡ ಅಂತ ದೂರ ಸಾಗಿದ್ದು ಇದೆ. ಆದ್ರೆ ಇನ್ನು ಸುಮ್ಮನೆ ಕೂರಲು ಆಗಲ್ಲ. ಜವ್ವನದಲ್ಲಿ ವೈಭೋಗದ ಡಿನಗಳನ್ನು ಕಣ್ಣಾರೆ ನೋಡಿ, ಮನಸಾರೆ ಆಸ್ವಾದಿಸಿಕೊಂಡಿದ್ದ ಕ್ಷಣಗಳು ಈಗ ಕಣ್ಣೆದುರೇ ಮರೆಯಾಗುತ್ತಿರುವುದನ್ನು ನೋಡಲು ಆಗುತ್ತಿಲ್ಲ. ಹಾಗಾಗಿ ವೆಂಕಿ ಟೀಮ್ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಾಗಿದೆ.
ಏನೇ ಆಗಲಿ, ಕೆಎಸ್‍ಸಿಎ ಚುನಾವಣೆಯಲ್ಲಿ ಗೆದ್ದು ಕರ್ನಾಟಕ ಕ್ರಿಕೆಟ್‍ಗೆ ಮತ್ತೆ ಹೊಸ ಮೆರಗನ್ನು ನೀಡಬೇಕು. ಇದೇ ನಮ್ಮ ಧ್ಯೇಯ. ದುಡ್ಡು ಮಾಡಬೇಕು. ಪ್ರತಿಷ್ಠೆ ಹೆಚ್ಚಿಸಿಕೊಳ್ಳಬೇಕು ಎಂಬುದು ನಮ್ಮ ಉದ್ದೇಶವಲ್ಲ. ಕಳೆದುಕೊಂಡಿರುವ ಘನತೆಯನ್ನು ಮತ್ತೆ ಪಡೆದುಕೊಂಡು ಕರ್ನಾಟಕದಲ್ಲಿ ಕ್ರಿಕೆಟ್ ಆಟವನ್ನು ಉಳಿಸಬೇಕು ಎಂಬುದಷ್ಟೇ ನಮ್ಮ ಮುಖ್ಯ ಗುರಿ. ಇದು ವೆಂಕಿ ಸಾರಥ್ಯದ ಗೇಮ್ ಚೇಂಜರ್ಸ್ ಟೀಮ್‍ನ ವನ್ ಲೈನ್ ಅಜೆಂಡಾ.
ಇದನ್ನೂ ಓದಿ: ಕೆಎಸ್‍ಸಿಎ ಎಲೆಕ್ಷನ್: ಇದು ಬೊಂಬೆಯಾಟವಯ್ಯ, ಸೂತ್ರಧಾರಿಗಳ ಕೈಚಳಕ ಪಾತ್ರಧಾರಿಗಳ ಅಭಿನಯ..!
ಅಂದ ಹಾಗೇ, 28 ವರ್ಷಗಳ ಹಿಂದೆ ಕ್ರಿಕೆಟಿಗರೇ ಆಡಳಿತ ನಡೆಸಬೇಕು ಎಂದು ಸಿ. ನಾಗರಾಜ್ ಕೈಯಿಂದ ಅಧಿಕಾರವನ್ನು ಬ್ರಿಜೇಶ್ ಪಟೇಲ್ ಕಸಿದುಕೊಂಡಿದ್ದರು. ಅಲ್ಲಿಂದ ಇಲ್ಲಿಯವರೆಗೆ ಕೆಎಸ್‍ಸಿಎ ಗರ್ಭಗುಡಿಯ ಬೀಗದ ಕೀಯನ್ನು ತನ್ನ ಕೈಯಲ್ಲೇ ಇಟ್ಟುಕೊಂಡು ದರ್ಬಾರು ನಡೆಸುತ್ತಿದ್ದಾರೆ. 15 ವರ್ಷಗಳ ಕಾಲ ಕೆಎಸ್‍ಸಿಎ ಕಾರ್ಯದರ್ಶಿಯಾಗಿ, ಸುಮಾರು 10 ವರ್ಷಗಳ ಕಾಲ ಸೂತ್ರಧಾರಿಯಂತೆ ಕೆಎಸ್‍ಸಿಎಯನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿರುವ ಪಟೇಲರಿಗೆ ಇನ್ನೂ ಅಧಿಕಾರದ ವ್ಯಾಮೋಹ ಬಿಟ್ಟಿಲ್ಲ. ಈ ಕಾರಣದಿಂದಲೇ ಈ ಬಾರಿಯ ಚುನಾವಣೆಯಲ್ಲಿ ವೆಂಕಿ ಟೀಮ್ ವಿರುದ್ಧ ಪಟೇಲರು ಮಾಸ್ಟರ್ ಪ್ಲಾನ್ ಮಾಡಿಕೊಂಡು ಪತ್ರಿಕೋದ್ಯಮಿ ಶಾಂತ ಕುಮಾರ್ ಟೀಮ್‍ಗೆ ಬಹಿರಂಗವಾಗಿಯೇ ಬೆಂಬಲ ನೀಡಿದ್ದಾರೆ.
ಅದು ಏನೇ ಇರಲಿ.. ಚುನಾವಣೆ ಅಂದ ಮೇಲೆ ಸ್ಪರ್ಧೆ- ಪ್ರತಿಸ್ಪರ್ಧೆ, ತಂತ್ರ – ಪ್ರತಿತಂತ್ರ ಇರಲೇಬೇಕು. ಅದು ಪ್ರಜಾತಂತ್ರ ವ್ಯವಸ್ಥೆಯ ಬ್ಯೂಟಿ ಕೂಡ.
ಆದ್ರೆ ಒಂದು ಪ್ರಶ್ನೆ ಸದಾ ಕಾಡುತ್ತಲೇ ಇರುತ್ತದೆ. ಯಾಕಂದ್ರೆ ಕೆಎಸ್‍ಸಿಎನಲ್ಲಿ ಪಟೇಲರ ಆಡಳಿತ ವೈಖರಿಯ ಬಗ್ಗೆ ಅಪಸ್ವರ 2007ರಲ್ಲಿ ಜೋರಾಗಿ ಕೇಳಿಬಂದಿತ್ತು. ಆಗ ಸಮ್ಮಿಶ್ರ ಸರ್ಕಾರದ ರೀತಿಯಲ್ಲೇ ಆಡಳಿತ ನಡೆಸಿದ್ರು, ಶತ್ರುವಾಗಿದ್ದ ಮಹಾರಾಜರನ್ನು ಸೋಲಿಸಲು ಪಟೇಲರು, 2010ರಲ್ಲಿ ಕುಂಬ್ಳೆ – ಶ್ರೀನಾಥ್ ಟೀಮ್ ಗೆ ಬೆಂಬಲ ನೀಡಿದ್ರು. ಹಾಗೇ KSCA ಗದ್ದುಗೆ ಏರಲು ಸಾಧ್ಯ ಆಯಿತ್ತು. ಆದ್ರೆ ಪಟೇಲರ ಪ್ಲ್ಯಾನ್ ವರ್ಕ್ ಔಟ್ ಆಗಲಿಲ್ಲ. ಕುಂಬ್ಳೆ ಟೀಮ್ ಪಟೇಲರನ್ನು ಕ್ಯಾರೇ ಮಾಡಲಿಲ್ಲ. ಅಲ್ಲದೆ ಕೆಲವೊಂದು ಸುಧಾರಣೆಗಳನ್ನು ಮಾಡಿದ್ರೂ ಕೆಪಿಎಲ್ ಟೂರ್ನಿಯನ್ನು ರದ್ದು ಮಾಡಿರೋದು ಕುಂಬ್ಳೆ ಟೀಮ್‍ಗೆ ಭಾರಿ ಹಿನ್ನಡೆಯಾಗಿತ್ತು. ಹೀಗಾಗಿ 2013ರಲ್ಲಿ ಕುಂಬ್ಳೆ ಟೀಮ್ ಎಲೆಕ್ಷನ್‍ಗೆ ನಿಲ್ಲಲಿಲ್ಲ.
ಪಟೇಲರು ಮಹಾರಾಜರ ಜೊತೆ ಸೇರಿಕೊಂಡು ಕುಂಬ್ಳೆ ಟೀಮ್ ವಿರುದ್ಧವೇ ತಿರುಗಿ ಬಿದ್ರು. ಇತ್ತ ಕುಂಬ್ಳೆ ಶ್ರೀನಾಥ್ ಸ್ಪರ್ಧೆಯಿಂದ ಹಿಂದೆ ಸರಿದು ತನ್ನ ಬೆಂಬಲಿಗರನ್ನು ನಿಲ್ಲಿಸಿದ್ರು. ಆದ್ರೆ ಪಟೇಲರ ಚಾಣಕ್ಷತನದ ನಡೆಗೆ ಮುಖಭಂಗ ಸಹ ಅನುಭವಿಸಬೇಕಾಯ್ತು.
ಹೀಗೆ ಮೂರು ವರ್ಷ ಕೆಎಸ್‍ಸಿಎ ಹಿಡಿತ ತಪ್ಪಿದ್ದ ಪಟೇಲರು ಮತ್ತೆ ಹಿಡಿತ ಸಾಧಿಸಿಕೊಂಡ್ರು. 2013ರಿಂದ 17ರವರೆಗೆ ಕಾರ್ಯದರ್ಶಿಯಾಗಿ ಐದನೇ ಬಾರಿ ಆಯ್ಕೆಯಾದ್ರು. ಅದೂ ಕೂಡ ಗರಿಷ್ಠ (947) ಮತಗಳೊಂದಿಗೆ ಗೆದ್ದು ಕೆಎಸ್‍ಸಿಎಯನ್ನು ಮತ್ತೆ ಕೈ ವಶಮಾಡಿಕೊಂಡ್ರು. 2017ರಿಂದ ಬಿಸಿಸಿಐ ನಿಯಮದಿಂದ ಚುನಾವಣೆಯಿಂದ ದೂರ ಸರಿದು ಯಾವುದೇ ಸ್ಥಾನಮಾನ ಇಲ್ಲದಿದ್ರೂ ಪಟೇಲರ ಪಟೇಲಗಿರಿಗೆ ಯಾವುದೇ ಅಡೆತಡೆಗಳಿರಲಿಲ್ಲ.
ಇಲ್ಲಿ ಮುಖ್ಯವಾಗಿ ಕುಂಬ್ಳೆ ಟೀಮ್ ಕೆಎಸ್‍ಸಿಎನಿಂದ ದೂರ ಸರಿದಿರುವುದೇ ಪಟೇಲರಿಗೆ ಮತ್ತೆ ಹಿಡಿತ ಸಾಧಿಸಲು ಸಾಧ್ಯವಾಯ್ತು ಎಂಬುದು ಅಷ್ಟೇ ಸತ್ಯ. ಕುಂಬ್ಳೆ ಕೋಚಿಂಗ್ ಕಡೆಗೆ ಗಮನಹರಿಸಿದ್ರೆ, ರಾಹುಲ್ ಎನ್‍ಸಿಎ, ಕೋಚಿಂಗ್ ಅಂತ ಬಿಝಿಯಾದ್ರು. ಶ್ರೀನಾಥ್ ಮ್ಯಾಚ್ ರೆಫ್ರಿಯತ್ತ ಗಮನಹರಿಸಿದ್ರು. ವಿಜಯ್ ಭಾರಧ್ವಾಜ್ ವೀಕ್ಷಕ ವಿವರಣೆಯತ್ತ ಮುಖಮಾಡಿದ್ರು. ಹೀಗಾಗಿ ಮಾಜಿ ಸ್ಟಾರ್ ಕ್ರಿಕೆಟಿಗರು ರಾಜ್ಯ ಕ್ರಿಕೆಟ್ ಸಂಸ್ಥೆಯತ್ತ ಗಮನವನ್ನೇ ಹರಿಸಲಿಲ್ಲ ಯಾಕೆ ಅನ್ನೋದು ಸದಾ ಕಾಡುತ್ತಿರುವ ಪ್ರಶ್ನೆ. ಇದಕ್ಕೆ ಉತ್ತರವನ್ನು ಕಂಡುಕೊಳ್ಳಲು ಹೊರಟ ರೆ, ಇವರಿಗೆ ರಾಜ್ಯ ಕ್ರಿಕೆಟ್‍ಗಿಂತ ರಾಷ್ಟ್ರೀಯ ಕ್ರಿಕೆಟ್, ದುಡ್ಡಿನ ಕಡೆಗೆ ಮುಖ ಮಾಡಿದ್ರಾ ಅನ್ನೋ ಮತ್ತೊಂದು ಪ್ರಶ್ನೆ ಕಾಡುತ್ತದೆ. ಹಾಗೇ ಇನ್ನೊಂದು ಪ್ರಶ್ನೆ ಸಹ ಮೂಡುತ್ತದೆ. ಯಾಕಂದ್ರೆ ಯುವರಾಜ್ ಸಿಂಗ್ ಪಂಜಾಬ್‍ನಲ್ಲಿ ಅಭಿಷೇಕ್ ಶರ್ಮಾ, ಗಿಲ್‍ನಂತಹ ಆಟಗಾರರಿಗೆ ಮಾರ್ಗದರ್ಶನ ನೀಡುತ್ತಾರೆ. ಆದ್ರೆ ನಮ್ಮ ರಾಜ್ಯದ ಸ್ಟಾರ್ ಗಿರಿ ಹೊಂದಿರುವ ಮಾಜಿ ಆಟಗಾರರು ಇದ್ರೂ ಯಾರನ್ನು ರಾಷ್ಟ್ರ ತಂಡದಲ್ಲಿ ಗಮನಹರಿಸುವಂತೆ ಮಾಡಿದ್ದಾರೆ. ಇದಕ್ಕೆ ಸದ್ಯಕ್ಕಂತೂ ಉತ್ತರವಿಲ್ಲ.
ಅದೇನೇ ಇರಲಿ.. ರಾಜ್ಯ ಕ್ರಿಕೆಟ್ ಸಂಸ್ಥೆ ಅಧಃಪತನದತ್ತ ಸಾಗುತ್ತಿರುವುದನ್ನು ನೋಡಿಯಾದ್ರೂ ಈಗ ಎಚ್ಚೆತ್ತುಕೊಂಡಿದ್ದಾರೆ ಎಂಬುದಷ್ಟೇ ತುಸು ಸಮಾಧಾನ. ವೆಂಕಿ, ಸುಜೀತ್, ವಿನಯ್ ಮೃತ್ಯುಂಜಯ ಸೇರಿಕೊಂಡು ಪಟೇಲರ ಕೈಯಿಂದ ಕೆಎಸ್‍ಸಿಎ ಬೀಗದ ಕೀಯನ್ನು ಕೈ ವಶ ಮಾಡಿಕೊಳ್ಳಲು ಮುಂದಾಗಿದ್ದಾರೆ. ಅದು ಎಷ್ಟರ ಮಟ್ಟಿಗೆ ಸಫಲವಾಗುತ್ತದೆ ಅನ್ನೋದನ್ನು ಕಾದು ನೋಡೋಣ.
ಲೇಖನ: ಸನತ್ ರೈ







