ಹಲೋ..! ಸಂತೋಷ್ ಮೆನನ್ ಅವರೇ..!

ಹೇಗಿದ್ದೀರಿ..? ಸ್ವಲ್ಪ ಬಿಝಿ ಇರಬೇಕು ಅಲ್ವಾ..? ವಿಷ್ಯ ಗೊತ್ತಾಯ್ತು…! ಹಾಗಾಗಿ ನಿಮ್ಮಿಂದ ಯಾವುದೇ ಉತ್ತರವನ್ನು ನಿರೀಕ್ಷಿಸದ ಕೆಲವು ಪ್ರಶ್ನೆಗಳು ಮೂಡಿವೆ. ನೀವು ಸಾಗುವ ದಾರಿ ಸರಿ ಇಲ್ಲ ಅಂದ್ರು, ನೀವು ಸರಿ ಇದೆ ಎಂದು ವಾದ ಮಾಡುತ್ತೀರಿ. ಯಾಕಂದ್ರೆ ತಪ್ಪುಗಳಿಗೆ ನಿಮ್ಮ ಬಳಿ ಸಮರ್ಥನೆಯ ಉತ್ತರ ಇದ್ದೇ ಇರುತ್ತದೆ ಅಲ್ವಾ..?
ಇರಲಿ, ಅಷ್ಟಕ್ಕೂ ನೀವು ಯಾರು..? ಛೇ..ಹೀಗೆ ಕೇಳಿದ್ರೆ ತಪ್ಪಾಗುತ್ತೆ. ಆದ್ರೆ ನಿಮ್ಮನ್ನು ನೀವು ಏನು ಅಂದುಕೊಂಡಿದ್ದೀರಿ..? ಈ ರೀತಿ ಕೇಳುವುದರಲ್ಲಿ ಯಾವ ತಪ್ಪು ಇರಲ್ಲ.
ಹೌದು, ನೀವೇನು ಕ್ರಿಕೆಟ್‍ಗಿಂತಲೂ ದೊಡ್ಡ ವ್ಯಕ್ತಿಯಾಗಿಬಿಟ್ರಾ..? ಕಾನೂನಿಗಿಂತಲೂ ನೀವು ದೊಡ್ಡವರಾ..? ಕೆಎಸ್‍ಸಿಎನಲ್ಲಿ 9 ವರ್ಷ ಅಧಿಕಾರ ಅನುಭವಿಸಿದ್ದು ನಿಮಗೆ ಸಾಕಾಗಿಲ್ವಾ..? ಲೋಧಾ ಸಮಿತಿಯ ನಿಯಮ ಏನು ಅನ್ನೋದು ನಿಮಗೆ ಗೊತ್ತಿಲ್ವಾ..? ಎಲ್ಲಾ ಗೊತ್ತಿದ್ದು ನೀವು ಯಾಕೆ ಕೋರ್ಟ್ ಮೊರೆ ಹೋಗಿದ್ದು..? ಬಿಸಿಸಿಐಯನ್ನು ಎದುರು ಹಾಕೊಂಡ್ರೆ ಏನು ಆಗುತ್ತೆ ಅನ್ನೋ ಪರಿಜ್ಞಾನ ಇದೆಯಾ..? ನಿಮ್ಮ ಈ ಅಧಿಕಾರದ ದಾಹಕ್ಕೆ ಬಲಿಯಾಗೋದು ಯಾರು ಅಂತ ಗೊತ್ತಿದೆಯಾ..?
ಆದ್ರೆ ಇದೆಲ್ಲಾ ನಿಮಗೆ ಒಂದೇ ವಾಖ್ಯದಲ್ಲಿ ಉತ್ತರಿಸುವ ಸುಲಭದ ಪ್ರಶ್ನೆಗಳು. ಯಾಕಂದ್ರೆ ನೀವು ಬಹುಮುಖ ಪ್ರತಿಭೆಯ ಕಣಜ. ಎಲ್ಲವನ್ನು ಅರೆದು ಕುಡಿದವರು. ನಿಮಗೆ ಕಾನೂನು ಹೋರಾಟ ಮಾಡುವ ಶಕ್ತಿ ಇದೆ. ಅಧಿಕಾರ ಪಡೆಯುವ ಸಾಮಥ್ಯ ್ ಇದೆ. ಕಾಲಚಕ್ರಕ್ಕೆ ತಕ್ಕಂತೆ ನಾಟಕವಾಡುವ ಅದ್ಭುತ ಪ್ರತಿಭೆ ಇದೆ.
ನಿಮಗೆ ಕ್ರಿಕೆಟ್ ಕೇವಲ ಒಂದು ದಾಳ ಅಷ್ಟೇ..! ಕೆಎಸ್‍ಸಿಎ ಗರ್ಭಗುಡಿಯಲ್ಲಿ ಕುಳಿತುಕೊಂಡು ಹೇಗೆಲ್ಲಾ ಪಗಡೆಯಾಟ ಆಡಿದ್ದೀರಿ..? ಯಾರ ಮೇಲೆ ಯಾವ ದಾಳ ಉರುಳಿಸಿದ್ದೀರಿ..? ಯಾರಿಗೆ ಎಲ್ಲಾ ಚೆಕ್‍ಮೆಟ್ ಕೊಟ್ಟಿದ್ದೀರಿ ಎಂಬುದು ಗೊತ್ತಿರುವ ವಿಚಾರವೇ ಬಿಡಿ..!

ನೀವು ಕ್ರಿಕೆಟ್ ಆಡಿದ್ದೀರಾ ಇಲ್ವೋ ಗೊತ್ತಿಲ್ಲ. ಆದ್ರೆ ಯುವ ಆಟಗಾರರಿಗೆ ನಿಮ್ಮ ಕ್ಲಬ್ ಮೂಲಕ ಕ್ರಿಕೆಟ್ ಆಟವನ್ನು ಕಲಿಸಿದ್ದೀರಿ. ಯುವ ಪ್ರತಿಭೆಗಳನ್ನು ಗುರುತಿಸಿದ್ದೀರಿ. ಕೆಎಸ್‍ಸಿಎ ಆಡಳಿತದ ಎಲ್ಲಾ ಆಯಮಾಗಳನ್ನು ಬಲ್ಲವರಾಗಿದ್ದೀರಿ. ಇಷ್ಟೆಲ್ಲಾ ಜ್ಞಾನ ಬುದ್ಧಿವಂತಿಕೆಯನ್ನು ಹೊಂದಿರುವ ನೀವು ಕೋರ್ಟ್ ಮೊರೆ ಹೋಗಿರುವುದು ಸರಿನಾ..?
ಲೋಧಾ ಸಮಿತಿಯ ನಿಯಮದಂತೆ ನೀವು ಕಾರ್ಯದರ್ಶಿ ಹುದ್ದೆಯನ್ನು ತ್ಯಜಿಸಲೇಬೇಕು. ಯಾಕಂದ್ರೆ 9 ವರ್ಷದ ನಿಮ್ಮ ಅವದಿ ಮುಗಿದೆ. ಒಂದು ಕಾಲದ ನಿಮ್ಮ ಆಪ್ತ ಸ್ನೇಹಿತರ ಬಳಿ ಕೇಳಿ ನೋಡಿ. ಆದ್ರೆ ಎಲ್ಲಾ ನೀತಿ ನಿಯಮ, ಕಾನೂನು ಗೊತ್ತಿದ್ರೂ ಕೋರ್ಟ್ ಮೆಟ್ಟಿಲು ಹತ್ತಿದ್ದು ನ್ಯಾಯಕ್ಕಾಗಿಯೋ..? ಅನ್ಯಾಯ ಮಾಡುವುದಕ್ಕಾಗಿಯೋ.?
ನಿಮಗೆ ಅನ್ಯಾಯವಾಗಿದೆ. ನ್ಯಾಯ ಸಿಗಬೇಕು ಅಂತ ಕಾನೂನು ಹೋರಾಟ ಮಾಡಿ. ಬೇಡ ಅನ್ನಲ್ಲ. ಆದರೆ ಅದಕ್ಕಿಂತ ಮುಂಚೆ ಸ್ವಲ್ಪ ಯೋಚನೆ ಮಾಡಿಕೊಳ್ಳಿ..! ನಿಮ್ಮ ಬದುಕು ರೂಪಿಸಿದ್ದು, ನಿಮ್ಮ ವ್ಯಕ್ತಿತ್ವಕ್ಕೆ ಗೌರವ ತಂದುಕೊಟ್ಟಿದ್ದು ಯಾವುದು ಅನ್ನೋದು ನಿಮಗೆ ಮರೆತು ಹೋಯ್ತಾ..?
ಒಂದು ವೇಳೆ ಮರೆತಿದ್ರೆ ನೆನೆಪು ಮಾಡಿಸೋಣ..! ನಿಮ್ಮ ಹಳೆಯ ಕುಚುಕು ಗೆಳೆಯರನ್ನು ನೀವು ಮರೆತಿರಬಹುದು. ಆದ್ರೆ ಕ್ರಿಕೆಟ್, ರಾಜ್ಯ ಕ್ರಿಕೆಟ್ ಮತ್ತು ರಾಜ್ಯ ಕ್ರಿಕೆಟ್ ಸಂಸ್ಥೆಯನ್ನು ಇಷ್ಟು ಬೇಗ ಮರೆಯಬಾರದಿತ್ತು. ನಿಮಗೆ ಬಯಸಿದ್ದನ್ನೆಲ್ಲಾ ಕೊಟ್ಟಿರುವ ಕ್ರಿಕೆಟ್‍ಗೆ, ಕೆಎಸ್‍ಸಿಎಗೆ ದ್ರೋಹ ಬಗೆಯುವಂತಹ ಕೆಲಸವನ್ನು ಮಾಡಬಾರದಿತ್ತು.
ನಿಮ್ಮ ಈ ಕಾನೂನು ಹೋರಾಟದಿಂದ ಎಷ್ಟು ಜನರ ಮೇಲೆ ಪರಿಣಾಮ ಬೀಳುತ್ತಿದೆ ಗೊತ್ತಾ…? ಒಂದು ವೇಳೆ ಈ ಕಾನೂನು ಹೋರಾಟದಲ್ಲಿ ನಿಮಗೆ ಗೆಲುವು ಸಿಕ್ಕಿದ್ರೂ ಬಿಸಿಸಿಐ ಏನು ಸುಮ್ಮನೆ ಕೂರುತ್ತೆ ಅಂದುಕೊಂಡ್ರಾ..?
ಅಂದ ಹಾಗೇ ನೀವು ಕೋರ್ಟ್ ನಲ್ಲಿ ಬಿಸಿಸಿಐಗೆ ಚಾಲೆಂಜ್ ಮಾಡಿದ್ದೀರಿ. ಆದ್ರೆ ಕೆಎಸ್‍ಸಿಎ ಹೆಸರನ್ನು ಬಳಸಿಕೊಂಡಿದ್ದು ಯಾಕೆ..? ಸ್ವತಃ ಬಿಸಿಸಿಐಯೇ ಲೋಧಾ ಸಮಿತಿಯ ನೀತಿ ನಿಯಮಗಳನ್ನು ಪಾಲಿಸುತ್ತಿದೆ. ಅಂದ ಮೇಲೆ ನಿಮಗೆ ಯಾಕೆ ಪಾಲಿಸಲು ಸಾಧ್ಯವಾಗುತ್ತಿಲ್ಲ..? ಬೆವರು ಸುರಿಸಿ ಕ್ರಿಕೆಟ್ ಆಡುವ ಕ್ರಿಕೆಟಿಗರೇ ಆಡಳಿತಗಾರರಾಗಿ ಲೋಧಾ ಸಮಿತಿಗೆ ತಲೆಬಾಗುತ್ತಾರೆ. ಅಂದ ಮೇಲೆ ನೀವು ಕ್ರಿಕೆಟ್, ಸಂಸ್ಥೆಗಳಿಗಿಂತಲೂ ದೊಡ್ಡ ವ್ಯಕ್ತಿನಾ..?
ಸರಿ ಈಗ ವಿಷ್ಯಕ್ಕೆ ಬರೋಣ. ಕಳೆದ ಹತ್ತು ವರ್ಷಗಳಿಂದ ರಾಜ್ಯ ಕ್ರಿಕೆಟ್ ಸಂಸ್ಥೆ ತೊಂದರೆಯಲ್ಲಿದೆ. ಒಂದು ವೇಳೆ ದೊಡ್ಡಣ್ಣ ಬಿಸಿಸಿಐ, ಕೆಎಸ್‍ಸಿಎ ಮೇಲೆ ವಕ್ರದೃಷ್ಟಿ ಬೀರಿದ್ರೆ ಆಗುವ ಪರಿಣಾಮವನ್ನು ಒಂದು ಬಾರಿ ಊಹಿಸಿಕೊಳ್ಳಿ..! ವರ್ಷಕ್ಕೆ 100ರಿಂದ 150 ಕೋಟಿ ನೀಡುತ್ತಿರುವ ಅನುದಾನವನ್ನು ಬಿಸಿಸಿಐ ಸ್ಥಗಿತಗೊಳಿಸಿದ್ರೆ ನಷ್ಟ ಯಾರಿಗೆ ಆಗೋದು ಮೆನನ್ ಅವ್ರೇ..!
ನಿಮ್ಮ ಈ ಕಾನೂನು ಹೋರಾಟದಲ್ಲಿ ನೀವು ಕೆಎಸ್‍ಸಿಎಯನ್ನು ಬಳಸಿಕೊಂಡಿರುವುದು ಎಷ್ಟು ಸರಿ..? ಕೆಎಸ್‍ಸಿಎ ಅಧ್ಯಕ್ಷರಾದ ವೆಂಕಟೇಶ್ ಪ್ರಸಾದ್ ಅವರಾದ್ರೂ ಕಾನೂನು ತಜ್ಞರ ಜೊತೆ ಚರ್ಚೆ ಮಾಡಬೇಕಿತ್ತು. ಒಂದಂತೂ ಸತ್ಯ, ಈ ಕಾನೂನು ಹೋರಾಟ ಹೀಗೆ ಮುಂದುವರಿದ್ರೆ ಕರ್ನಾಟಕ ಕ್ರಿಕೆಟ್‍ನ ಭವಿಷ್ಯಕ್ಕೆ ಮಾರಕವಾಗಿ ಪರಿಣಮಿಸಲಿದೆ. ಹಾಗಾಗಿ ವೆಂಕಿ ಜಾಣ್ಮೆಯ ನಡೆಯನ್ನು ಇಡಬೇಕಿದೆ. (WP 19719/2026 ಅರ್ಜಿ)
ಕೊನೆಯದಾಗಿ ಕೆಎಸ್‍ಸಿಎನಲ್ಲಿ ಕಾರ್ಯದರ್ಶಿ ಹುದ್ದೆ ಖಾಲಿ ಇದೆ. ಆದ್ರೆ ಅದನ್ನು ಈಗಲೇ ಭರ್ತಿ ಮಾಡಲು ಸಾಧ್ಯವಿಲ್ಲ. ಯಾಕಂದ್ರೆ ಮೆನನ್ ಅವರ ಕಾನೂನು ಹೋರಾಟ ಮುಗಿಯಬೇಕು. ಅಲ್ಲಿಯ ತನಕ ಕೆಎಸ್‍ಸಿಎನಲ್ಲಿ ಕಾರ್ಯದರ್ಶಿ ಕುರ್ಚಿ ಖಾಲಿ ಇರುತ್ತದೆ.
ನಿಜ, ನೀವು ಎಷ್ಟಾದ್ರೂ ನಿಮ್ಮ ಹಳೆಯ ಬಿಗ್‍ಬಾಸ್ ಗರಡಿಯಲ್ಲಿ ಪಳಗಿದ್ದವರು. ಅವರಂತೆ ನೀವು ಕೂಡ ಕಾರ್ಯದರ್ಶಿ ಸ್ಥಾನಕ್ಕೇರಿದವರು. ಅವರಾದ್ರೂ ಕೆಎಸ್‍ಸಿಎಗೆ ನೆನಪಿನಲ್ಲಿ ಉಳಿಯುವಂತಹ ಕೊಡುಗೆ ಕೊಟ್ಟಿದ್ದಾರೆ. ಆದ್ರೆ ನೀವು…? ಯೋಚನೆ ಮಾಡಿ..! ನಿಮ್ಮ ನಿರ್ಧಾರ ಬೇಗ ತಿಳಿಸಿ.!
ಸನತ್ ರೈ







