ಬೆಂಗಳೂರು : ಹದಿನಾರು ಕೆರೆಗಳನ್ನು ನಿರ್ಮಾಣ ಮಾಡಿ ಅಧುನಿಕ ಭಗೀರಥ ಎಂದು ಪ್ರಖ್ಯಾತಿ ಪಡೆದ ಕಾಮೇಗೌಡರಿಗೆ ಜೀವಿತಾವಧಿಯವರಿಗೆ ಉಚಿತವಾಗಿ ಸಂಚಾರ ಮಾಡಲು ಸಾರಿಗೆ ಇಲಾಖೆ ಉಚಿತ ಬಸ್ ಪಾಸ್ ನೀಡಿದೆ.
ಮಂಡ್ಯ ಜಿಲ್ಲೆಯಲ್ಲಿ ಸ್ವಂತ ಹಣ ಖರ್ಚು ಮಾಡಿ ಹದಿನಾರು ಕೆರೆಗಳನ್ನು ನಿರ್ಮಾಣ ಮಾಡಿ ಅಧುನಿಕ ಭಗೀರಥ ಎಂದು ಹೆಸರು ಆಗಿರುವ ಕಾಮೇಗೌಡರು ಬಸ್ ಪಾಸ್ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದರು.
ಕಾಮೇಗೌಡರ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉಚಿತ ಬಸ್ ಪಾಸ್ ನೀಡುವಂತೆ ಸಾರಿಗೆ ಇಲಾಖೆ ಸೂಚಿಸಿದ್ದರು. ಸಿಎಂ ಬಿ.ಎಸ್ ಯಡಿಯೂರಪ್ಪ ಸೂಚನೆ ಮೇರೆಗೆ ಸಾರಿಗೆ ಇಲಾಖೆ ಕಾಮೇಗೌಡರಿಗೆ ಉಚಿತ ಬಸ್ ಪಾಸ್ ನೀಡಿದೆ.
ಈ ವಿಚಾರವಾಗಿ ಮಾಹಿತಿ ನೀಡಿದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ, ‘ಆಧುನಿಕ ಭಗೀರಥ’, ‘ಕೆರೆಗಳ ಮನುಷ್ಯ’ ಎಂದೇ ಪ್ರಖ್ಯಾತಿಯನ್ನು ಪಡೆದಿರುವ ಮಂಡ್ಯ ಜಿಲ್ಲೆಯ ,ಮಳವಳ್ಳಿ ತಾಲ್ಲೂಕಿನ, ದಾಸನದೊಡ್ಡಿ ಗ್ರಾಮದ ಕಾಮೇಗೌಡರ ಅನನ್ಯ ಪರಿಸರ ಕಾಳಜಿಯನ್ನು ಮತ್ತು ಸಾಧನೆಯನ್ನು ಪ್ರಧಾನ ಮಂತ್ರಿಗಳು , ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಉಲ್ಲೇಖಿಸಿದ್ದಾರೆ. ಮುಖ್ಯಮಂತ್ರಿಗಳು ಸಹ ಕಾಮೇಗೌಡರವರ ಅಪರಿಮಿತ ಸಾಧನೆಗಾಗಿ ‘ಉಚಿತ ಬಸ್ ಪಾಸ್’ ನೀಡಲು ಆದೇಶಿಸಿದ್ದರು.
ಕಾಮೇಗೌಡರ ಕೊಡುಗೆ ಅಪಾರ, ಅದ್ಭುತ ಹಾಗೂ ಅನುಕರಣೀಯವಾಗಿದೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಎಲ್ಲಾ ಮಾದರಿಯ ಬಸ್ಸುಗಳಲ್ಲಿ, ಅವರ ಜೀವಿತಾವಧಿಯವರೆಗೆ, ಉಚಿತವಾಗಿ ಸಂಚರಿಸಲು ಬಸ್ ಪಾಸನ್ನು ನೀಡಲು ಅನುಮತಿಸಲಾಗಿದೆ ಎಂದು ತಿಳಿಸಿದ್ದಾರೆ.








