ಬೇಡಿಕೆ ಈಡೇರದ ಹೊರತು ಮಠಕ್ಕೆ ಮರಳಲ್ಲ : ಮೃತ್ಯುಂಜಯ ಶ್ರೀಗಳು
ಬೆಂಗಳೂರು : ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರಿಸುವ ನಮ್ಮ ಬೇಡಿಕೆ ಈಡೇರದ ಹೊರತು ಮಠಕ್ಕೆ ಮರಳಲ್ಲ ಎಂದು ಕೂಡಲಸಂಗಮದ ಬಸವಜಯ ಮೃತ್ಯುಂಜಯ ಶ್ರೀಗಳು ಘೋಷಿಸಿದ್ದಾರೆ.
ಅರಮನೆ ಮೈದಾನದಲ್ಲಿ ಪಂಚಮಸಾಲಿ ಸಮಾಜದ ರಣಕಹಳೆ ಮೊಳಗಿದ್ದು, ಪಂಚಮಸಾಲಿ ಸಮುದಾಯವನ್ನು 2ಎ ಗೆ ಸೇರಿಸುವಂತೆ ಒತ್ತಾಯಿಸಿ ಕೂಡಲಸಂಗಮದ ಜಯಮೃತ್ಯಂಜಯ ಶ್ರೀ ನೇತೃತ್ವದ ಪಾದಯಾತ್ರೆಯ ಸಮಾರೋಪ ಸಮಾರಂಭ ಅರಮನೆ ಮೈದಾನದಲ್ಲಿ ನಡೆಯುತ್ತಿದೆ.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಬಸವಜಯ ಮೃತ್ಯುಂಜಯ ಶ್ರೀಗಳು, ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರಿಸುವಂತೆ ಒತ್ತಾಯಿಸಿ ಪಾದಯಾತ್ರೆ ಮಾಡಲಾಗಿದೆ.
ಇಂದು ಪಾದಯಾತ್ರೆಯ ಸಮಾರೋಪ ಸಮಾರಂಭದ ಬಳಿಕ ವಿಧಾನಸೌಧದ ಮುಂದೆ ಧರಣಿ ನಡೆಸಲಿದ್ದೇವೆ. ನಂತರ ಬೇಡಿಕೆಗೆ ಈಡೇರಿಕೆಗೆ ಒತ್ತಾಯಿಸಿ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲಿದ್ದೇವೆ, ಬೇಡಿಕೆ ಈಡೇರದ ಹೊರತು ಮಠಕ್ಕೆ ಮರಳಲ್ಲ ಎಂದು ತಿಳಿಸಿದರು.
ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿಗಾಗಿ ಸಂಕ್ರಾಂತಿಯಂದು ಕೂಡಲಸಂಗಮದಿಂದ ಪಾದಯಾತ್ರೆ ಆರಂಭಿಸಿ ಇಂದು ಬೆಂಗಳೂರು ತಲುಪಿ ಅರಮನೆಯ ಮೈದಾನದಲ್ಲಿ ಮಹಾ ರ್ಯಾಲಿ ಮಾಡಿ ಹಕ್ಕೊತ್ತಾಯ ಮಾಡುತ್ತಿದ್ದೇವೆ.
ಇದುವರೆಗೆ ಹಲವಾರು ಸಮುದಾಯದವರು ಇಲ್ಲಿ ಸಮಾವೇಶ ಮಾಡಿ ಹವಾ ಮಾಡಿರಬಹುದು. ಆದರೆ ಇಂದು ನಾವು ಕೂಡ ಕರೆ ಕೊಟ್ಟರೆ ನಮ್ಮ ಹವಾ ಏನು ಎನ್ನುವುದನ್ನು ತೋರಿಸಬಹುದು ಎಂದು ಇಂದು ಸಾಬೀತು ಮಾಡಿದ್ದೇವೆ ಎಂದು ಸಭೆಯಲ್ಲಿ ನೆರೆದಿದ್ದವನ್ನುದ್ದೇಶಿ ಮಾತನಾಡಿದರು.
