ಸಿಎಂ ಯಡಿಯೂರಪ್ಪ ಜಾತಿ ರಾಜಕಾರಣ ಮಾಡುತ್ತಿರುವುದು ಸರಿಯೇ : ಕುಮಾರಸ್ವಾಮಿ
ಬೆಂಗಳೂರು: ಸಿಎಂ ಬಿಎಸ್ ಯಡಿಯೂರಪ್ಪನವರು ಜಾತಿ ರಾಜಕಾರಣ ಮಾಡ್ತಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ಆರೋಪ ಮಾಡಿದ್ದಾರೆ. ಒಕ್ಕಲಿಗ ನಿಗಮ ಸ್ಥಾಪನೆಯ ವಿಚಾರವಾಗಿ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ ಅವರು ಸರ್ಕಾರ ಒಕ್ಕಲಿಗ ನಿಗಮ ಸ್ಥಾಪನೆಗೆ ಕೇವಲ ಯೋಜನೆ ಮಾಡಿದೆ. ಅದಕ್ಕಾಗಿ 500 ಕೋಟಿ ರು ಅನುದಾನ ನೀಡಲಾಗುವುದು ಎಂದು ಹೇಳಿದೆ. ನಿಗಮ ಸ್ಥಾಪನೆಗೆ ಎಷ್ಟು ವರ್ಷ ಸಮಯ ತೆಗೆದುಕೊಳ್ಳಲಿದ್ದಾರೆ. 25 ವರ್ಷ ಬೇಕಾಗುತ್ತಾ ಎಂದು ಲೇವಡಿ ಮಾಡಿದ್ದಾರೆ.
ಅಲ್ಲದೇ ಸಿಎಂ ಜಾತಿ ರಾಜಕಾರಣ ಮಾಡುತ್ತಿರುವುದು ಸರಿಯೇ ಎಂದು. 16 ಸಣ್ಣ ಸಮುದಾಯಗಳಿಗೆ 500 ಕೋಟಿ ರು ನೀಡಿ, ಲಿಂಗಾಯತ ಸಮುದಾಯದಂತ ದೊಡ್ಡ ದೊಡ್ಡ ಸಮುದಾಯಕ್ಕೆ 1,100 ಕೋಟಿ ನೀಡಿರುವುದು ಯಾವ ನ್ಯಾಯ ಎಂದು ಪ್ರಶ್ನೆ ಮಾಡಿದ್ದಾರೆ.
ಇದೇ ವೇಳೆ ಕಳೆದ ವರ್ಷದ ಬಜೆಟ್‌ನಲ್ಲಿ ಭರವಸೆ ನೀಡಿದ 150 ಯೋಜನೆಗಳಲ್ಲಿ ಸುಮಾರು 65 ಯೋಜನೆಗಳನ್ನು ಜಾರಿಗೆ ತರಲಾಗಿಲ್ಲ ಎಂದು ಕೆಂಡಕಾರಿರುವ ಹೆಚ್ ಡಿಕೆ ಕಳೆದ ಬಾರಿಯ ಬಜೆಟ್ ನಲ್ಲಿ ಘೋಷಣೆಯಾದ ಯೋಜನೆಗಳಲ್ಲಿ ಎಷ್ಟು ಜಾರಿಗೆ ಬಂದಿವೆ ಎಷ್ಟು ಜಾರಿಯಾಗಿಲ್ಲ ಎನ್ನುವ ಕುರಿತು ಸರ್ಕಾರವು ಕ್ರಮ ಕೈಗೊಂಡ ವರದಿ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನೂ ಸರ್ಕಾರ ಜನರ ದಿಕ್ಕು ತಪ್ಪಿಸುತ್ತಿದೆ. ಇಂತಹ ಕೆಲಸಗಳು ಆಗಬಾರದು. ಮಹಿಳೆಯರಿಗೆ 60,000 ಉದ್ಯೋಗಗಳನ್ನು ಒದಗಿಸುವುದಾಗಿ ಸಿಎಂ ಹೇಳಿದ್ದಾರೆ, ಅವರು ಅದನ್ನು ಎಲ್ಲಿ ಮಾಡುತ್ತಾರೆ ಮತ್ತು ಅವರು ಹೇಗೆ ಉದ್ಯೋಗ ನೀಡುತ್ತಾರೆ ಸ್ಪಷ್ಟಪಡಿಸಲಿ ಎಂದು ಸವಾಲ್ ಹಾಕಿದ್ದಾರೆ.







