ರಾಮನಗರದ ಜೈಲಿನಲ್ಲಿರುವ ಪಾದರಾಯನಪುರ ಗಲಭೆ ಪ್ರಕರಣದ ಆರೋಪಿಗಳಲ್ಲಿ ಕೊರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಅವರು ತಮ್ಮ ಅಸಮಾಧಾನ ಹೊರಹಾಕಿ ತನ್ನ ಮೇಲಿನ ಕೋಪದಿಂದ ದ್ವೇಷದ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಸಿಎಂ ಅವರ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರು, ಆರೋಪಿಗಳನ್ನು ಜೈಲಿಗೆ ಕರೆತರದೇ ಇನ್ನೇನು ಕುಮಾರಸ್ವಾಮಿ ಅವರ ಮನೆಗೆ ಕರೆದೊಯ್ಯಬೇಕಿತ್ತಾ ಎಂದು ವ್ಯಂಗ್ಯವಾಡಿದ್ದಾರೆ. ಮಾಧ್ಯಮಗಳ ಮುಂದೆ ಮಾತನಾಡಿದ ರೇಣುಕಾಚಾರ್ಯ, ಕುಮಾರಸ್ವಾಮಿ ಅವರು ಇಂತಹ ವಿಚಾರದಲ್ಲಿ
ರಾಜಕೀಯ ಮಾಡಬಾರದು. ಸರ್ಕಾರಕ್ಕೆ ಎಲ್ಲಾ ಜಿಲ್ಲೆಗಳು ಒಂದೇ ಆಗಿದ್ದು, ಇಲ್ಲಿ ದ್ವೇಷದ ರಾಜಕಾರಣ ನಡೆಸಿಲ್ಲ. ಕೊರೊನಾ ಸೋಂಕು ಹರಡಲಿ ಎಂದು ಪಾದರಾಯನಪುರ ಗಲಭೆ ಪ್ರಕರಣದ ಆರೋಪಿಗಳನ್ನು ರಾಮನಗರದ ಜೈಲಿನಲ್ಲಿ ಇಡುವ ನಿರ್ಧಾರವನ್ನು ಸರ್ಕಾರ ಮಾಡಿಲ್ಲ ಎಂದರು. ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಅವರ ಮದುವೆ ಬಗ್ಗೆ ಖುದ್ದು ಸಿಎಂ ಅವರೇ ಶ್ಲಾಘಿಸಿದ್ದರು. ಹೀಗಿದ್ದೂ ದ್ವೇಷದ ರಾಜಕೀಯ ಮಾಡುತ್ತಾರೆ ಎನ್ನುವುದು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದರು.
ಶಾಸಕ ಜಮೀರ್ ಅಹ್ಮದ್ ಅವರ ಬಗ್ಗೆ ಕೂಡಾ ಕಿಡಿಕಾರಿದ ಅವರು ಆತ ಓರ್ವ ಕಿಡಿಗೇಡಿ ಶಾಸಕ ಎಂದು ಟೀಕಿಸಿದರು. ಸಾರಾಯಿ ಪಾಳ್ಯ ಮತ್ತು ಪಾದರಾಯನಪುರದಲ್ಲಿ ನಡೆದ ಗಲಾಟೆಗೆ ಜಮೀರ್ ಅಹ್ಮದ್ ಅವರು ನೀಡಿದ ಕುಮ್ಮಕ್ಕೇ ಕಾರಣ ಎಂದ ರೇಣುಕಾಚಾರ್ಯ ಎಷ್ಟೇ ದೊಡ್ಡವರಾದರೂ ಕೂಡಾ ಸರ್ಕಾರ ಅವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಲಿದೆ ಎಂದರು.
ಆಶಾ ಕಾರ್ಯಕರ್ತೆಯರು ಬಿಸಿಲಲ್ಲಿ ಶ್ರಮಪಟ್ಟು ತಮ್ಮ ಕರ್ತವ್ಯವನ್ನು ಮಾಡುತ್ತಿದ್ದು, ಸೋಂಕು ತಡೆಗಟ್ಟಲು ಶ್ರಮ ಪಡುತ್ತಿದ್ದಾರೆ. ನಿನ್ನನ್ನು ಕೇಳಿ ಬರಲು ಅದೇನು ನಿಮ್ಮ ಮಾವನ ಮನೆಯಾ ಎಂದು ರೇಣುಕಾಚಾರ್ಯ ಅವರು ಜಮೀರ್ ಅಹ್ಮದ್ ವಿರುದ್ಧ ವಾಗ್ದಾಳಿ ನಡೆಸಿದರು.








