ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಈ ಹಿಂದೆ ಮಾತ್ರ ನನ್ನ ಸ್ನೇಹಿತರಾಗಿರಲಿಲ್ಲ. ಈಗಲೂ ಅವರು ನನ್ನ ದೋಸ್ತಿಯೇ. ಮುಂದೆಯೂ ಇರುತ್ತಾರೆ. ಮಾಧ್ಯಮದವರು ಯಾವ ಆಧಾರದ ಮೇಲೆ ಹಳೇ ದೋಸ್ತಿ ಅಂತಾ ಹೇಳುತ್ತೀರಿ? ನೀವು ಇಬ್ಬರ ಮಧ್ಯೆ ದ್ವೇಷ ಇದೆ ಅಂತೀರಿ? ನಾನು ದ್ವೇಷ ಮಾಡುವ ಕಾಲ ಹೋಯ್ತು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಜೆಡಿಎಸ್ ರಹಸ್ಯವಾಗಿ ಬಿಜೆಪಿಯೊಂದಿಗೆ ದೋಸ್ತಿ ಮಾಡಿಕೊಳ್ಳುತ್ತಿದ್ದಂತೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ನಡುವೆ ವಾಕ್ಸಮರ ತಾರಕಕ್ಕೇರಿದೆ. ಅದರಲ್ಲೂ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋಲಿಗೆ ಬಿಜೆಪಿ ಜತೆ ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿತ್ತೆಂದು ಸಿದ್ದು ಬಹಿರಂಗ ಹೇಳಿಕೆ ನೀಡಿದ್ದರು. ಇದರಿಂದ ಕಾಂಗ್ರೆಸ್, ಜೆಡಿಎಸ್ ನಡುವೆ ಬಹಿರಂಗ ವಾಕ್ಸಮರವೇ ನಡೆದಿದೆ. ಆದರೆ, ಡಿಕೆಶಿ ಮಾತ್ರ ಸಿದ್ದು-ಹೆಚ್ಡಿಕೆ ಜಟಾಪಟಿಗೆ ತಣ್ಣನೆಯ ಪ್ರತಿಕ್ರಿಯೆ ನೀಡುತ್ತಲೇ ಬಂದಿದ್ದಾರೆ. ಈಗ ಕುಮಾರಸ್ವಾಮಿ ನಾನು ದೋಸ್ತಿ ಎಂದು ಎಂದು ಹೇಳುವ ಮೂಲಕ ಅಚ್ಚರಿಯನ್ನೂ ಮೂಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಡಿ.ಕೆಶಿ ಜೆಡಿಎಸ್ ಕೂಡ ಒಂದು ಪಕ್ಷ. ಅದರದೇ ಆದ ಸಂವಿಧಾನ, ಸಿದ್ಧಾಂತ ಇದೆ. ಅವರು ಹಾಗೂ ಬಿಜೆಪಿ ಹೇಗೆ ಒಪ್ಪಂದ ಮಾಡಿಕೊಳ್ಳುತ್ತಾರೋ ಅದು ಅವರಿಗೆ ಬಿಟ್ಟದ್ದು ಎಂದಿದ್ದಾರೆ. ಬಿಜೆಪಿಯವರು ಜೆಡಿಎಸ್ನ್ನು ಯಾವ ರೀತಿ ನೋಡುತ್ತಾರೋ ಗೊತ್ತಿಲ್ಲ. ನಾವಂತೂ ಆ ಪಕ್ಷವನ್ನು ಗೌರವದಿಂದ ನೋಡುತ್ತೇವೆ. ನಾನು ಬೇರೆ ಪಕ್ಷಗಳ ಬಗ್ಗೆ ಮಾತನಾಡಲ್ಲ. ಅವರು ಅನೇಕ ಬಾರಿ ಸರ್ಕಾರ ಮಾಡಿದ್ದಾರೆ. ನಾವು ಅವರ ಜತೆ ಸರ್ಕಾರ ಮಾಡಿದ್ದೇವೆ. ಅವರ ಬಗ್ಗೆ ಕೀಳಾಗಿ ಮಾತನಾಡಲು ನಾನು ಇಚ್ಚಿಸುವುದಿಲ್ಲ ಎಂದು ಹೇಳಿದ್ದಾರೆ.
ಪಾಲಿಕೆ ಚುನಾವಣೆಗಳಲ್ಲಿ ಕಾಂಗ್ರೆಸ್ ಚಿಹ್ನೆಯಿಂದಲೇ ಸ್ಪರ್ಧೆ
ಬೆಳಗಾವಿ, ಧಾರವಾಡ ಪಾಲಿಕೆ ಚುನಾವಣೆ ನಡೆಸಲು ನ್ಯಾಯಾಲಯ ಸಮಯ ನಿಗದಿ ಮಾಡಿದೆ. ಇನ್ನು ಮುಂದೆ ಯಾವುದೇ ಪಾಲಿಕೆ ಚುನಾವಣೆ ನಡೆದರು ನಮ್ಮ ಪಕ್ಷದ ಚಿಹ್ನೆ ಮೂಲಕ ಸ್ಪರ್ಧಿಸಿ, ಪಕ್ಷದಿಂದ ಅಭ್ಯರ್ಥಿ ಕಣಕ್ಕಿಳಿಸಲು ತೀರ್ಮಾನಿಸಲಾಗಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಇಷ್ಟು ದಿನಗಳ ಕಾಲ ಬೆಳಗಾವಿ ಪಾಲಿಕೆಯಯಲ್ಲಿ ಕಾಂಗ್ರೆಸ್ ಸ್ಥಳೀಯ ಮಟ್ಟದಲ್ಲಿ ಹೊಂದಾಣಿಕೆ ಮಾಡಿಕೊಂಡು ತನ್ನ ಅಭ್ಯರ್ಥಿ ಹಾಕುತ್ತಿರಲಿಲ್ಲ. ಈ ಬಾರಿಯಿಂದ ಎಲ್ಲ ಪಾಲಿಕೆ ಚುನಾವಣೆಗಳಲ್ಲಿ ಪಕ್ಷದ ಚಿಹ್ನೆ ಮೂಲಕ ಸ್ಪರ್ಧಿಸಲಾಗುವುದು. ಎಲ್ಲ ವಾರ್ಡ್ ಮಟ್ಟದ ಸಮಿತಿ ಮಾಡಲು ಒಂದು ಸಮಿತಿ ರಚಿಸಲಾಗಿದೆ. ನಾವು ಚುನಾವಣೆಯಲ್ಲಿ ಗೆಲ್ಲುತ್ತೇವೋ, ಸೋಲುತ್ತೇವೋ ಅದು ನಂತರ. ನಮ್ಮ ಪಕ್ಷದ ಚಿಹ್ನೆಯಿಂದ ಸ್ಪರ್ಧಿಸುವುದು ಮುಖ್ಯ ಎಂದರು.
ಎಲ್ಲರ ಹಿತ ಗಮನದಲ್ಲಿರಲಿ
ಸರ್ಕಾರ ಮಕ್ಕಳು ಮತ್ತು ಶಾಲೆ ವಿಚಾರದಲ್ಲಿ ಪ್ರತಿ ನಿಮಿಷವೂ ಗೊಂದಲದಲ್ಲಿದೆ. ನಮ್ಮ ಶಿಕ್ಷಣ ಸಚಿವರು ಸಿಎಂ, ಶಾಲೆ ಆಡಳಿತ ಮಂಡಳಿ, ಪೋಷಕರ ಜತೆ ಮಾತನಾಡುವುದಾಗಿ ಹೇಳುತ್ತಾರೆ. ಸರ್ಕಾರ ಮೊದಲು ಗೊಂದಲ ನಿವಾರಣೆ ಮಾಡಬೇಕು. ಇಷ್ಟು ದಿನ ಸಂಸ್ಥೆಗಳು ನಡೆಯುತ್ತಿರಲಿಲ್ಲ. ಶಿಕ್ಷಕರಿಗೂ ಸಂಬಳ ನೀಡಬೇಕು ಎಂದು ಡಿ.ಕೆ ಶಿವಕುಮಾರ್ ಸಲಹೆ ನೀಡಿದ್ದಾರೆ.
ಇಲ್ಲಿ ಸಾಕಷ್ಟು ಸಮಸ್ಯೆಗಳಿವೆ, ಶಾಲೆ ತೆರೆಯಬೇಕೋ ಬೇಡವೋ ಎಂಬುದರ ಬಗ್ಗೆ ತಜ್ಞರ ಜತೆ ಚರ್ಚೆ ಮಾಡಬೇಕು. ರಾಜಕಾರಣಿಗಳು ಏನೇ ಅಭಿಪ್ರಾಯ ಹೇಳಿದರೂ ಅಂತಿಮವಾಗಿ ವಿದ್ಯಾರ್ಥಿಗಳು, ಶಾಲೆಗಳು ಹಾಗೂ ಶಿಕ್ಷಕರ ಹಿತ ಹಾಗೂ ಭವಿಷ್ಯ ಕಾಯಬೇಕು. ನಾವು ರಾಜಕೀಯ ಪಕ್ಷವಾಗಿ ನಮ್ಮ ಅಭಿಪ್ರಾಯ ಹೇಳುವುದಕ್ಕಿಂತ ಸರ್ಕಾರ ಈ ಬಗ್ಗೆ ತೀರ್ಮಾನ ಕೈಗೊಳ್ಳಬೇಕು ಹಾಗೂ ಆ ತೀರ್ಮಾನದಲ್ಲಿ ಸ್ಪಷ್ಟತೆ ಇರಬೇಕು ಎಂದಿದ್ದಾರೆ.
ಪೋಷಕನಾಗಿ, ಶಿಕ್ಷಣ ಸಂಸ್ಥೆಯ ಭಾಗವಾಗಿ ನನಗೂ ಆತಂಕಗಳಿವೆ. ಸರ್ಕಾರ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬ ಗೊಂದಲ ಇದೆ. ಸರ್ಕಾರದಲ್ಲಿ ದೊಡ್ಡ ಅನುಭವವಿರುವ ಪಂಡಿತರಿದ್ದಾರೆ. ಅವರಿಗೆ ನಾನ್ಯಾಕೆ ಸಲಹೆ ನೀಡಲಿ. ಅವರು ಏನು ಬೇಕಾದರೂ ತೀರ್ಮಾನ ಮಾಡಲಿ ಎಂದು ವಾಗ್ದಾಳಿ ನಡೆಸಿದ್ದಾರೆ.
ನಾವು ಯಾವುದೇ ಸಲಹೆ ಕೊಟ್ಟರೂ ಅದರ ವಿರುದ್ಧವಾಗಿ ಸರ್ಕಾರ ತೀರ್ಮಾನ ತೆಗೆದುಕೊಳ್ಳುತ್ತದೆ. ಈ ಹಿಂದೆ ಅದನ್ನು ನೋಡಿದ್ದೇವೆ. ಅವರು ಜನರಿಗೆ ಕೊಟ್ಟ ಮಾತು ಉಳಿಸಿಕೊಂಡಿಲ್ಲ. ಅವರಿಗೆ ಅವರದೇ ಆದ ವೈಯಕ್ತಿಕ ಅಜೆಂಡಾ ಇದೆ. ಏನೇ ಆದರೂ ಅದಕ್ಕೆ ಕಾಂಗ್ರೆಸ್ ಹಾಗೂ ಡಿ.ಕೆ ಶಿವಕುಮಾರ್ ಕಾರಣ ಎಂದು ಹೇಳುತ್ತಾರೆ. ರೈತರು ಹೋರಾಟ ಮಾಡಿದರೆ ಕಾಂಗ್ರೆಸ್ ನವರು ಎತ್ತಿಕಟ್ಟಿದ್ದಾರೆ ಅಂತಾರೆ. ಒಟ್ಟಿನಲ್ಲಿ ಅವರು ನಮ್ಮನ್ನು ನೆನೆಸಿಕೊಳ್ಳುತ್ತಿರಬೇಕು ನೆನೆಸಿಕೊಳ್ಳಲಿ ಬಿಡಿ ಎಂದು ಟಾಂಗ್ ನೀಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel