ಅಂತು.. ಇಂತು.. ಕೆಎಸ್ಸಿಎನಲ್ಲಿ ಪಟೇಲರ ಒಡ್ಡೋಲಗಕ್ಕೆ ಬ್ರೇಕ್ ಬಿದ್ದಿದೆ. 22ವರ್ಷಗಳ ಕಾಲ ಕೆಎಸ್ಸಿಎ ಆಡಳಿತವನ್ನು ಕೈ ಬೆರಳಿನಲ್ಲೇ ಆಡಿಸುತ್ತಿದ್ದ ಬ್ರಿಜೇಶ್ ಪಟೇಲರು 2025ರ ಚುನಾವಣೆಯಲ್ಲಿ ಮುಖಭಂಗ ಅನುಭವಿಸಿದ್ದಾರೆ. ಕುಂಬ್ಲೆಯ ಗೂಗ್ಲಿ, ಶ್ರೀನಾಥ್ ಬೌನ್ಸರ್ ಹಾಗೂ ವೆಂಕಿಯ ಸ್ವಿಂಗ್ಗೆ ಬ್ರಿಜೇಶ್ ಪಟೇಲರ ಬ್ಯಾಟ್ ಮುರಿದು ಹೋಗಿದೆ.
ಈ ಹಿಂದೆ ಐದು ಬಾರಿ ಕೆಎಸ್ಸಿಎನಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಪಟೇಲರು ಕಳೆದ ಎಂಟು ವರ್ಷಗಳಿಂದ ಕೆಎಸ್ಸಿಎನಲ್ಲಿ ಪಟೇಲರ ಪ್ರಭುತ್ವಕ್ಕೆ ಯಾವುದೇ ರೀತಿಯ ಅಡೆತಡೆಗಳಿರಲಿಲ್ಲ.
ಕಾರಣ 2010ರಲ್ಲಿ ಕೆಎಸ್ಸಿಎ ಚುಕ್ಕಾಣಿ ಹಿಡಿದ್ದ ಕುಂಬ್ಳೆ ಒಂದೇ ಅವಧಿಗೆ ಕೆಎಸ್ಸಿಎ ಸಹವಾಸ ಸಾಕು ಅಂತ ದೂರ ಸರಿದಿದ್ದರು. ನಂತರ 12 ವರ್ಷಗಳ ಕಾಲ ಕುಂಬ್ಳೆ – ಶ್ರೀನಾಥ್ ಟೀಮ್ ಕೆಎಸ್ಸಿಎ ಚಾವಡಿಗೆ ಎಂಟ್ರಿಯಾಗುವ ಮನಸ್ಸು ಮಾಡಲಿಲ್ಲ ಎಂಬುದು ಬೇರೆ ವಿಚಾರ. ಕೊನೆಗೂ ಕರ್ನಾಟಕ ಕ್ರಿಕೆಟ್ ಅರ್ಧಪತನದತ್ತ ಸಾಗುತ್ತಿದೆ ಎಂಬುದು ಜ್ಞಾನೋದಯವಾಗಿದ್ದು ಮಾತ್ರ ಒಳ್ಳೆಯ ವಿಚಾರ.
ಹೀಗಾಗಿ ಈ ಬಾರಿ ಕುಂಬ್ಳೆ – ಶ್ರೀನಾಥ್ ಟೀಮ್ ಕೆಎಸ್ಸಿಎ ಅಖಾಡಕ್ಕೆ ವೆಂಕಿ ತಂಡನ್ನು ಕಣಕ್ಕಿಳಿಸಿತ್ತು. ಇನ್ನೊಂದೆಡೆ ಪಟೇಲರು ಈ ಬಾರಿಯ ಚುನಾವಣೆಯಲ್ಲಿ ಕುಂಬ್ಳೆ – ಶ್ರೀನಾಥ್ ಟೀಮ್ಗೆ ನೇರವಾಗಿ ಪಂಥಾಹ್ವಾನವನ್ನು ನೀಡಿದ್ದರು. 2010ರಲ್ಲಿ ಒಲ್ಲದ ಮನಸ್ಸಿನಿಂದಲೇ ಕುಂಬ್ಳೆ ಟೀಮ್ಗೆ ಬೆಂಬಲ ನೀಡಿ ಮಹಾರಾಜರ ವಿರುದ್ಧ ಸೇಡು ತೀರಿಸಿಕೊಂಡಿದ್ದ ಪಟೇಲರು 2013ರಲ್ಲಿ ಅದೇ ಮಹಾರಾಜರ ಜೊತೆ ಸೇರಿಕೊಂಡು ಮತ್ತೆ ಕೆಎಸ್ಸಿಎಯನ್ನು ಕೈವಶಮಾಡಿಕೊಂಡಿದ್ದರು.
ಆದ್ರೆ ಈ ಬಾರಿ ಪರಿಸ್ಥಿತಿ ಭಿನ್ನವಾಗಿತ್ತು. ಹೇಗಾದ್ರೂ ಪಟೇಲರ ಕಾರುಬಾರುಗೆ ಅಂತ್ಯ ಹಾಡಲೇಬೇಕು ಅಂತ ಕುಂಬ್ಳೆ – ಶ್ರೀನಾಥ್ ಟೀಮ್ ನಿರ್ಧಾರ ಮಾಡಿದ್ರು. ತಡವಾಗಿ ಬಂದ್ರೂ
ವೆಂಕಟೇಶ್ ಪ್ರಸಾದ್ ಈಗ ಕೆಎಸ್ಸಿಎ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ಸುಜೀತ್ ಸೋಮಸಂದರ್. ಕಾರ್ಯದರ್ಶಿಯಾಗಿ ಸಂತೋಷ್ ಮೇನನ್ ಗೆದ್ರೆ, ಸಹಕಾರ್ಯದರ್ಶಿಯಾಗಿ ಬ್ರಿಜೇಶ್ ಟೀಮ್ ನ ಬಿ.ಕೆ. ರವಿ ಜಯ ಗಳಿಸಿದ್ದಾರೆ. ]
ಅಚ್ಚರಿ ಅಂದ್ರೆ, ಕಾರ್ಯದರ್ಶಿ ಸಂತೋಷ್ ಮೇನನ್ ಒಂದು ಕಾಲದಲ್ಲಿ ಪಟೇಲರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಆದ್ರೆ ಈ ಬಾರಿ ಪಟೇಲರಿಗೆ ತಿರುಗಿಬಿದ್ದಿರೋದು ನಂಬಲು ಅಸಾಧ್ಯವಾಗಿದೆ. 2007ರಲ್ಲಿ ಬ್ರಿಜೇಶ್ ಪಟೇಲರ ವಿರುದ್ಧ ಕೆಂಡಕಾರುತ್ತಿದ್ದ ಬಿ.ಕೆ. ರವಿ ಅವರು ಈ ಸಲ ಪಟೇಲರ ಬಣದಲ್ಲಿ ಗುರುತಿಸಿಕೊಂಡು ಗೆಲುವಿನ ನಗೆ ಚೆಲ್ಲಿದ್ದಾರೆ.
ಆದ್ರೆ ಇಲ್ಲಿ ಹರಕೆಯ ಕುರಿಯಾಗಿದ್ದು ಪತ್ರಿಕೋಧ್ಯಮಿ ಶಾಂತಕುಮಾರ್ ಅವರು. ಬ್ರಿಜೇಶ್ ಟೀಮ್ನಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಶಾಂತಕುಮಾರ್ ಅವರನ್ನು ಗೆಲ್ಲಿಸಲು ಪಟೇಲರು ಯಶಸ್ವಿಯಾಗಲಿಲ್ಲ. ಪಟೇಲರ ವೋಟ್ ಬ್ಯಾಂಕ್ ಶಾಂತ ಕುಮಾರ್ ಅವರ ಕೈ ಹಿಡಿಯಲಿಲ್ಲ. ಉತ್ತಮ ಆಡಳಿತಗಾರ ಎಂಬ ಖ್ಯಾತಿ ಪಡೆದಿದ್ದ ಶಾಂತಕುಮಾರ್ ತಪ್ಪು ನಿರ್ಧಾರ ತೆಗೆದುಕೊಂಡ್ರು ಎಂಬ ಮಾತು ಕೇಳಿಬಂದಿದ್ದು ಸುಳ್ಳಾಗಲಿಲ್ಲ. ಹೆಸರಿಗೆ ತಕ್ಕಂತೆ ಶಾಂತ ವರ್ಚಸ್ಸು ಹೊಂದಿದ್ದ ಶಾಂತಕುಮಾರ್ ಅವರಿಗೆ ಪಟೇಲರ ಬಣದಲ್ಲಿ ಗುರುತಿಸಿಕೊಳ್ಳುವ ಅಗತ್ಯವಿರಲಿಲ್ಲ. ಆದ್ರೆ ಪಟೇಲರ ತಂತ್ರವೇ ಬೇರೇನೇ ಇತ್ತು. ತನ್ನ ಆಪ್ತರು ಎಲ್ಲಾ ಬಿಟ್ಟು ಹೋದಾಗ ವರ್ಚಸ್ಸಿನ ಅಭ್ಯರ್ಥಿ ಬೇಕಾಗಿತ್ತು. ಅಲ್ಲದೆ ತನ್ನದೇ ಆದ ವೋಟ್ ಬ್ಯಾಂಕ್ ಹೊಂದಿದ್ದ ಪಟೇಲರು ವೆಂಕಿ ಟೀಮ್ಗೆ ಸಡ್ಡು ಹೊಡೆಯುವ ಲೆಕ್ಕಚಾರದಲ್ಲಿದ್ರು. ಆದ್ರೆ ಅದು ಈ ಬಾರಿ ವರ್ಕ್ ಆಗಲಿಲ್ಲ.
ಯಾರು ಏನೇ ಹೇಳಲಿ, ಪಟೇಲರ ಚಾಣಕ್ಷತನವನ್ನು ಯಾರು ಕೂಡ ಲಘುವಾಗಿ ಪರಿಗಣಿಸುವ ಹಾಗಿಲ್ಲ. ಯಾಕಂದ್ರೆ, ಕೆಎಸ್ಸಿಎನಲ್ಲಿ ಪಟೇಲರ ಮಾತೇ ಅಂತಿಮ. ಯಾರು ಎಷ್ಟೇ ಟೀಕೆ, ಆರೋಪಗಳನ್ನು ಮಾಡಿದ್ರೂ ಬ್ರಿಜೇಶ್ ಕ್ಯಾರ್ ಮಾಡ್ತಾ ಇರಲಿಲ್ಲ. ಅದಕ್ಕೂ ಕಾರಣವಿದೆ. ಈ ಹಿಂದೆ ನಾಗರಾಜ್ನಂತವರನ್ನೇ ಮಕಾಡೆ ಮಲಗಿಸಿ ಕೆಎಸ್ಸಿಎ ಅಧಿಕಾರವನ್ನು ಗಿಟ್ಟಿಸಿಕೊಂಡ ಪಟೇಲರು, ಕೆಎಸ್ಸಿಎನಲ್ಲಿ ಅಷ್ಟೊಂದು ಪವರ್ಫುಲ್ ವ್ಯಕ್ತಿ. ಒಂದು ರೀತಿಯಲ್ಲಿ ಕೆಎಸ್ಸಿಎ ಆಡಳಿತವನ್ನು ಫೆವಿಕಾಲ್ ಗಮ್ನಂತೆ ಗಟ್ಟಿಯಾಗಿ ಹಿಡಿದಿಟ್ಟುಕೊಂಡಿದ್ದರು. ಹಾಗಾಗಿ ಕೆಎಸ್ಸಿಎಗೆ ಬೇರೆಯವರು ಎಂಟ್ರಿಯಾಗೋದು ಅಷ್ಟೊಂದು ಇಝಿ ಇರಲಿಲ್ಲ.
ಹೌದು, ವೆಂಕಿ ಟೀಮ್ ಗೆಲುವಿನ ಹಿಂದೆ ಕುಂಬ್ಳೆ, ಶ್ರೀನಾಥ್, ರಾಹುಲ್ ಪ್ರಭಾವ ಇತ್ತು ಎಂಬುದು ಬಹುತೇಕರ ಭಾವನೆ. ಆದ್ರೆ ಈ ಗೆಲುವಿನ ಹಿಂದಿರುವ ಶಕ್ತಿ ವಿನಯ್ ಮೃತ್ಯುಂಜಯ ಎಂಬ ಲೆಕ್ಕಪರಿಶೋಧಕ. ಮಹಾರಾಜರ ಕಾಲದಲ್ಲೂ ಗೆಲುವಿನ ಹಿಂದೆ ಇದ್ದದ್ದು ಇದೇ ವಿನಯ್ ಮೃತ್ಯುಂಜಯ್. ಬಳಿಕ ವಿನಯ್ ಮೃತ್ಯುಂಜಯ್ ಕೂಡ ಪಟೇಲರ ಬಣ ಸೇರಿಕೊಂಡಿದ್ದರು ಎಂಬುದು ಬೇರೆ ಮಾತು.
ಆದ್ರೆ ಈ ಬಾರಿ ಕೆಎಸ್ಸಿಎಯನ್ನು ಪಟೇಲರ ಕೈಯಿಂದ ವಶಪಡಿಸಿಕೊಳ್ಳಬೇಕು ಎಂದು ವಿನಯ್ ಮೃತ್ಯುಂಜಯ್ ವೆಂಕಿ ಟೀಮ್ಗೆ ಬಹಿರಂಗವಾಗಿ ಬೆಂಬಲ ನೀಡುವ ಮೂಲಕ ಪಟೇಲರ ದರ್ಬಾರ್ಗೆ ಅಂತ್ಯಹಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಎಂಬುದು ಗೊತ್ತಿಲ್ಲದ ವಿಚಾರವೇನೂ ಅಲ್ಲ.
ಇದೀಗ ಕೆಎಸ್ಸಿಎನಲ್ಲಿ ಬದಲಾವಣೆಯ ಗಾಳಿ ಬೀಸಿದೆ. ವೆಂಕಿ ಟೀಮ್ಗೆ ಸಾಕಷ್ಟು ಸವಾಲುಗಳಿವೆ. ಕಳೆದು ಹೋಗಿರುವ ಕರ್ನಾಟಕ ಕ್ರಿಕೆಟ್ನ ಘನತೆಯನ್ನು ಮತ್ತೆ ಪಡೆದುಕೊಳ್ಳಲು ವೆಂಕಿ ಟೀಮ್ ಸಾಕಷ್ಟು ಹೋಮ್ ವರ್ಕ್ ಮಾಡಬೇಕಿದೆ.
ನೆನಪಿಡಿ, ವೆಂಕಿ.. ಕೆಎಸ್ಸಿಎ ಕ್ಲಬ್ನ ಸದಸ್ಯರು ನಿಮ್ಮನ್ನು ನಂಬಿಕೊಂಡು ನಿಮ್ಮನ್ನು ಗೆಲ್ಲಿಸಿದ್ದಾರೆ. ಕರ್ನಾಟಕ ಕ್ರಿಕೆಟ್ಗೆ ವಿನೂತನ ಸ್ವರೂಪ ನೀಡ್ತೀರಿ ಎಂಬ ನಂಬಿಕೆಯ ಮೇಲೆ ನಿಮ್ಮನ್ನು ಆಯ್ಕೆ ಮಾಡಿದ್ದಾರೆ. ಅಲ್ಲದೆ, ನಿಮ್ಮ ಟೀಮ್ ಮೇಲೆ ಸಾಕಷ್ಟು ಭರವಸೆಗಳಿವೆ. ಅದನ್ನು ಹುಸಿಗೊಳಿಸಬೇಡಿ. ನಿಮ್ಮ ಗಾಡ್ ಫಾದರ್ಗಳು ಈ ಹಿಂದೆ ಮಾಡಿರುವ ಪ್ರಮಾದವನ್ನು ಮತ್ತೆ ಮಾಡಬೇಡಿ. ನಿಮ್ಮ ಪ್ರತಿಷ್ಠೆ, ಸ್ಥಾನಮಾನವನ್ನು ಬದಿಗಿಟ್ಟು ಕರ್ನಾಟಕ ಕ್ರಿಕೆಟ್ ಪ್ರತಿಭೆಗಳಿಗೆ ಸೂಕ್ತ ಅವಕಾಶ ನೀಡುವುದು ನಿಮ್ಮ ಆದ್ಯ ಕರ್ತವ್ಯ. ಇದನ್ನು ಮಾತ್ರ ಮರೆಯಬೇಡಿ.
ಸನತ್ ರೈ
ಈತ ಇರೋವರೆಗೂ ಟೀಂ ಇಂಡಿಯಾ ಟ್ರೋಫಿ ಗೆಲ್ಲೋದು ಪಕ್ಕಾ! ಫೈನಲ್ ನಲ್ಲಿ ಕಿವೀಸ್ ಬೇಟೆ ಆಡಿದ ಬೌಲರ್; ಈತನಿಗಿಂತ ಬೆಸ್ಟ್ ಯಾರಿಲ್ಲ ಎಂದ ಮಿಸ್ಟರ್ 360
ಟೀಮ್ ಇಂಡಿಯಾ ವಿಶ್ವ ಕ್ರಿಕೆಟ್ನಲ್ಲಿ ತನ್ನ ಅಧಿಪತ್ಯವನ್ನು ಮುಂದುವರಿಸಿದೆ. ಇತ್ತೀಚೆಗೆ ನಡೆದ 2026ರ ಟಿ20 ವಿಶ್ವಕಪ್ನಲ್ಲಿ (T20 World Cup 2026) ಐತಿಹಾಸಿಕ ಜಯ ಸಾಧಿಸುವ ಮೂಲಕ...








