ನವದೆಹಲಿ : ಇಂದಿಗೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಒಂದು ವರ್ಷ ಆಗಿದ್ದು, ಮುಖ್ಯಮಂತ್ರಿಯಾಗಿ ಲಕ್ಷ್ಮಣ ಸವದಿ ಬದಲಾಗಲಿದ್ದಾರೆ ಎನ್ನುವ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಚುನಾವಣೆಯಲ್ಲಿ ಸೋತು ಲಕ್ಷ್ಮಣ ಸವದಿ ಅವರಿಗೆ ಹೈಕಮಾಂಡ್ ಉಪಮುಖ್ಯಮಂತ್ರಿ ಸ್ಥಾನ ನೀಡಿದೆ. ಆರಂಭದಲ್ಲಿ ಈ ಬಗ್ಗೆ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗಳು ನಡೆದವು. ಅಂದು ಈ ವಿಚಾರವಾಗಿ ಮಾತನಾಡಿದ ಕೆಲ ಬಿಜೆಪಿಗರು, ಲಕ್ಷ್ಮಣ ಸವದಿ ಅವರನ್ನು ಬಿಎಸ್ ವೈಗೆ ಪರ್ಯಾಯವಾಗಿ ಅಂದರೇ ಲಿಂಗಾಯತರ ನಾಯಕರಾಗಿ ಬೆಳೆಸಲು ಈ ತೀರ್ಮಾನ ಮಾಡಲಾಗಿದೆ ಎಂದು ಹೇಳಿಕೆಗಳನ್ನು ನೀಡಿದ್ದರು. ಇದರ ಮಧ್ಯೆ ಒಂದು ವರ್ಷದ ಬಳಿಕ ಸಿಎಂ ಬದಲಾವಣೆ ಆಗುವ ಸಾಧ್ಯತೆಗಳಿವೆ ಎಂದು ಕೂಡ ಹೇಳಲಾಗಿತ್ತು.
ಇದೀಗ ಬಿಜೆಪಿ ಸರ್ಕಾರ ಒಂದು ವರ್ಷ ಪೂರೈಸಿದ್ದು, ಮತ್ತೆ ಸಿಎಂ ಬದಲಾವಣೆಯ ಮಾತುಗಳು ಕೇಳಿಬರುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಅವರು ಮುಂದಿನ ಮುಖ್ಯಮಂತ್ರಿ ಆಗ್ತಾರೆ ಎಂದು ಚರ್ಚೆ ಆರಂಭವಾಗಿದೆ.
ಇದಕ್ಕೆ ಪುಷ್ಠಿ ನೀಡುವಂತೆ ಇಂದು ಒಂದು ವರ್ಷ ಪೂರೈಸಿದ ಸಂಭ್ರಮಾಚರಣೆ ನಡುವೆ ಲಕ್ಷ್ಮಣ ಸವದಿ ಅವರು ದೆಹಲಿಗೆ ಹಾರಿದ್ದಾರೆ. ಇದು ಭಾರಿ ಚರ್ಚೆಗೆ ಕಾರಣವಾಗಿದೆ.
ಈ ಬೆಳವಣಿಗೆ ನಡುವೆ ಸಿಎಂ ಅವರು ಪಕ್ಷದ ಹೈಕಮಾಂಡ್ ಗೆ ಶಾಕ್ ನೀಡಿದ್ದಾರೆ. ಪ್ರತಿ ವಿಚಾರದಲ್ಲಿ ಹೈಕಮಾಂಡ್ ಒಪ್ಪಿಗೆ ಪಡೆಯುತ್ತಿದ್ದ ಬಿಎಸ್ ವೈ, ಇವತ್ತು ದೆಹಲಿ ವರಿಷ್ಠರ ಗಮನಕ್ಕೆ ತರದೇ ತಮ್ಮ ಆಪ್ತ ಶಾಸಕರನ್ನು ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿದ್ದಾರೆ. ಇದು ಕೂಡ ಸಾಕಷ್ಟು ಅನುಮಾನಗಳಿಗೆ ದಾರಿ ಮಾಡಿ ಕೊಟ್ಟಿದೆ.
ಒಟ್ಟಾರೆ ಈ ಎಲ್ಲಾ ಬೆಳವಣಿಗೆಗಳು ರಾಜಕೀಯ ಪಡಸಾಲೆಯಲ್ಲಿ ಸಾಕಷ್ಟು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದ್ದು, ಶೀಘ್ರದಲ್ಲೇ ಮುಖ್ಯಮಂತ್ರಿ ಬದಲಾಗುತ್ತಾರಾ ಎಂಬ ಪ್ರಶ್ನೆ ಹುಟ್ಟುಹಾಕಿದೆ.








