ಮಂಡ್ಯ: ಸಚಿವೆ ಲಕ್ಷ್ಮೀ ಹೆಬ್ಬಳ್ಕರ್ ಮಹಿಳೆಯರಿಗೆ ಸಿಹಿ ಸುದ್ದಿ ನೀಡಿದ್ದಾರೆ.
ತಾಂತ್ರಿಕ ಕಾರಣದಿಂದ ಎರಡು ತಿಂಗಳಿನಿಂದ ಗೃಹಲಕ್ಷ್ಮಿ (Gruhalakshmi Scheme) ಹಣ ಜಮೆ ಮಾಡಲು ಆಗಿರಲಿಲ್ಲ. ಹೀಗಾಗಿ ಇಂದಿನಿಂದ ಗೃಹಲಕ್ಷ್ಮಿ ಹಣ ನಿಮ್ಮ ಖಾತೆಗೆ ಸೇರಲಿದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಘೋಷಿಸಿದ್ದಾರೆ.
ಮಂಡ್ಯದ (Mandya) ಜನಾಂದೋಲನದಲ್ಲಿ (Janandolana) ಮಾತನಾಡಿದ ಸಚಿವೆ, ಡಿಸಿಎಂ ಡಿಕೆಶಿ ಭಾಷಣ ಮಾಡುವಾಗ ಗೃಹಲಕ್ಮಿ ಹಣ ಬಂದಿಲ್ಲ ಎಂದು ಮಹಿಳೆಯರು ಹೇಳಿದ್ದರು. ತಾಂತ್ರಿಕ ಕಾರಣದಿಂದ ಹಣ ಬಂದಿರಲಿಲ್ಲ. ಇಂದಿನಿಂದ ಜೂನ್, ಜುಲೈ ತಿಂಗಳ ಹಣ ಜಮೆಯಾಗಲಿದೆ ಎಂದು ಹೇಳಿದ್ದಾರೆ.
ನುಡಿದಂತೆ ನಡೆಯುವುದು ಕಾಂಗ್ರೆಸ್ ನ ಕಾರ್ಯ ವೈಖರಿ. ನಮಗೆ ಸಿಕ್ಕ ಅಧಿಕಾರದಲ್ಲಿ ಜನರಿಗೆ ಒಳ್ಳೆಯದು ಮಾಡುತ್ತೇವೆ. ಬರಗಾಲದಲ್ಲಿ ಪರಿಹಾರ ಕೊಡಲು ಕೇಂದ್ರ ಬಿಜೆಪಿ ಸರ್ಕಾರಕ್ಕೆ ಮನಸ್ಸಿಲ್ಲ. ಆದರೆ ಬಿಜೆಪಿ ಭ್ರಷ್ಟ ಸರ್ಕಾರ ಬಂಡವಾಳಶಾಹಿಗಳ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದೆ ಎಂದು ಗುಡುಗಿದ್ದಾರೆ.
ಪೆನ್ ಡ್ರೈವ್ ಹಂಚುವ ಮೂಲಕ ದೇವೇಗೌಡರ ಕುಟುಂಬಕ್ಕೆ ವಿಷ ಹಾಕಿದ್ದಾರೆ ಅಂತಿರಲ್ಲಾ, ದೌರ್ಜನ್ಯಕ್ಕೆ ಒಳಗಾದ ಮಹಿಳೆಯರ ಕುಟುಂಬ ನಿಮಗೆ ಕಾಣುತ್ತಿಲ್ಲವೇ? ಪೆನ್‌ಡ್ರೈವ್ ಹಂಚಿದ್ದು ಪ್ರೀತಂಗೌಡ ಅಂತ ತಾವೇ ಒಪ್ಪಿಕೊಂಡ್ರಲ್ಲ. ಕುಮಾರಣ್ಣ ದೇವೇಗೌಡರ ಕುಟುಂಬಕ್ಕೆ ವಿಷ ಎರೆದರು ಅಂತೀರಾ. ಆದರೆ ದೌರ್ಜನ್ಯಕ್ಕೊಳಗಾದ ಮಹಿಳೆಯರ ಕುಟುಂಬ, ಕುಟುಂಬ ಅಲ್ವಾ? ನೂರಾರು ಮಹಿಳೆಯರ ಮಾನ-ಮರ್ಯಾದೆ ಹಾಳು ಮಾಡಿಕೊಂಡು ಬೀದಿ ಪಾಲಾದರಲ್ಲಾ? ಅವರು ಮನುಷ್ಯರಲ್ವಾ? ಒಬ್ಬ ಜನ ಪ್ರತಿನಿಧಿ ಆಗಲು ನಿಮಗೆ ಯಾವ ನೈತಿಕತೆ ಇದೆ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.