las vegas
ಯಾತ್ರಿಕ -4
ಥಟ್ಟನೆ ನೆವಾಡಾ ಅಂತ ಕೇಳಿದರೆ ಕೂಡಲೇ ಮನಸ್ಸಿಗೆ ಏನಾದರೂ ಹೊಳೆಯುವ ಸಂಭವ ಕಮ್ಮಿ. ಅದೇ ಲಾಸ್ ವೇಗಸ್ ಅಥವಾ ಬರೀ ವೇಗಸ್ ಅನ್ನಿ? ಕೂಡಲೇ ಕಿವಿ ನೆಟ್ಟಗಾಗುತ್ತದೆ. ವಿಶೇಷವಾಗಿ ಪಡ್ಡೆ ಹುಡುಗರ ಮನಸ್ಸಲ್ಲೇನೋ ಸಂತೋಷ ಉಕ್ಕಿ ಹರಿಯುತ್ತದೆ, ಯಾವುದೋ ಕನಸಿನ ಲೋಕ ಕಣ್ಮುಂದೆ ತೆರೆದುಕೊಳ್ಳುತ್ತದೆ. ಅನೇಕ ಜನ ಅಲ್ಲಿಗೆ ಜೀವನದಲ್ಲಿ ಒಮ್ಮೆಯಾದರೂ ಹೋಗಬೇಕೆಂದು ಕನಸು ಕಾಣ್ತಾರೆ. ಲೆಕ್ಕವಿಲ್ಲದಷ್ಟು ಜನರು ಭೇಟಿ ಮಾಡಬೇಕೆಂದುಕೊಂಡಿರುವ ಮಾಯಾಲೋಕವದು.
ನೋಡಿದಷ್ಟೂ ಮುಗಿಯದ ವೆನಿಸಿನ, ಐಫೆಲ್ ಟವರಿನ, ಪಿರಮಿಡ್ಡಿನ ಹಾಗೂ ಇತರ ಮಾದರಿಯ ವಿಶಾಲವಾದ ಹೋಟೆಲುಗಳು; ಅದರೊಳಗಿನ ವಿಭಿನ್ನವಾದ ಆಕರ್ಷಣೆಗಳು; ಜೂಜಿನ ಅಡ್ಡೆಗಳು ಮತ್ತು ಆ ಅಡ್ಡೆಗಳಲ್ಲಿ ಹರಿಯುತ್ತಿರುವ ಹಣದ ಮತ್ತು ಮದ್ಯದ ಹೊಳೆಗಳು; ಅಮ್ಯೂಸ್‌ಮೆಂಟ್ ಪಾರ್ಕುಗಳು; ಅತ್ಯದ್ಭುತವಾದ ಕಾರಂಜಿಗಳು; ಕಂಡು ಕೇಳರಿಯದ ಬೆಂಕಿಯ ಕಾರಂಜಿ; ಹೇಳಿದರೂ ಮುಗಿಯದಷ್ಟು ವಿಶೇಷತೆಗಳು.
ಇದೆಲ್ಲಾ ಇರುವುದು ಸರಿಸುಮಾರು ೭ ಕಿಲೋಮೀಟರಿನಷ್ಟು ಉದ್ದದ ಸ್ಟ್ರಿಪ್ ಎನ್ನುವ ಪ್ರದೇಶದಲ್ಲಿ. ಹಗಲು ಹೊತ್ತಿನಲ್ಲಿ ಸೋಮಾರಿಯಂತೆ ಅರೆನಿದ್ರೆಯಲ್ಲಿರುವ ಈ ಪ್ರದೇಶ ಸಂಜೆಯಾಗ್ತಾ ಇದ್ದಂತೆ ಒಂದು ಮಾಯಾಲೋಕವನ್ನೇ ಸೃಷ್ಟಿಸುತ್ತವೆ. ಹಣ ಮತ್ತು ಮದ್ಯ ಅಕ್ಷರಶಃ ಹೊಳೆಯಾಗಿ ಹರಿಯುತ್ತದೆ, ಮಧ್ಯರಾತ್ರಿಯವರೆಗೂ ಈ ಮಾಯಾಲೋಕದ ಸಂಭ್ರಮ ಅವ್ಯಾಹತವಾಗಿ ಮುಂದುವರೆಯುತ್ತವೆ. ಒಂದು ರಾತ್ರಿಯಲ್ಲಿ ಇದನ್ನ ನೋಡಿ ಮುಗಿಸಲು ಖಂಡಿತ ಸಾಧ್ಯವಿಲ್ಲ. ಸಂಪೂರ್ಣವಾಗಿ ನೋಡಿ ಮುಗಿಸಲು ಕನಿಷ್ಟ ೩-೪ ರಾತ್ರಿಗಳು ಬೇಕಾಗುತ್ತವೆ. ಒಂದೊಂದೇ ಹೋಟೆಲುಗಳಿಗೆ ಒಳ ಹೊಕ್ಕರೆ ಸಂಪೂರ್ಣ ನೋಡಿ ಮುಗಿಸಲು ಅರ್ಧ ದಿನ ಬೇಕು. ನಮಗೆ ಸರಿಯಾಗಿ ನೋಡಲು ಸಾಧ್ಯವಾಗಿದ್ದು ಕೇವಲ ಎರಡನ್ನ. ಸೀಸರ್ ಪ್ಯಾಲೆಸ್ ಎಂಬ ಹೋಟೆಲಿನಲ್ಲಿ ಹಗಲೋ ರಾತ್ರಿಯೋ ಅಂತ ಗೊಂದಲವಾಗುವಷ್ಟರ ಮಟ್ಟಿಗಿನ ಭ್ರಮಾಲೋಕ ಸೃಷ್ಟಿಸಿದ್ದಾರೆ. ನಮಗಿರುವ ೭-೮ ಗಂಟೆಗಳ ಅವಕಾಶದಲ್ಲಿ ನಾವು ನೋಡಿದ್ದು ಬಹಳ ಅಂದರೆ ಬಹಳ ಕಮ್ಮಿ. ನಮ್ಮನ್ನ ಬಿಡಿ, ಒಮ್ಮೆ ಪೂರ್ತಿಯಾಗಿ ನೋಡಿದವರೂ ಇದರ ಮೋಡಿಗೆ ಒಳಗಾಗಿ ಮತ್ತೆ ಮತ್ತೆ ಬರಬೇಕೆಂದು ಅಂದುಕೊಳ್ಳುತ್ತಾ ಅಸಮಧಾನದಿಂದಲೇ ಊರು ಬಿಡುತ್ತಾರೆ.
ಆದರೆ ಈ ಪ್ರದೇಶಗಳು ಅತ್ಯಂತ ಬಿಗಿಯಾದ ಕಾನೂನಿನ ನಿಬಂಧನೆಗೆ ಒಳಪಟ್ಟಿವೆ. ಅತಿರೇಕಿಗಳನ್ನ, ಕಾನೂನು ಉಲ್ಲಂಘಿಸುವವರ ಹದ್ದಿನ ಕಣ್ಣಿನಿಂದ ಕಾಯುತ್ತಿರುತ್ತಾರೆ. ಜೂಜಿನ ಅಡ್ಡೆಯೊಳಗೆ ಮಕ್ಕಳ ಪ್ರವೇಶವನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ದೊಡ್ಡವರ ಜೊತೆ ನಡೆದು ಹೋಗಲು ಕೆಲವೆಡೆ ಸಮಸ್ಯೆಯಿಲ್ಲವಾದರೂ ನಿಂತು ನೋಡುವುದನ್ನ, ಆಡುವುದನ್ನ ಪ್ರತಿಬಂಧಿಸಲಾಗಿದೆ.
ಆದರೆ ಇದೇ ವೇಗಸ್ಸಿಗೆ ಇನ್ನೊಂದು ಮುಖವೂ ಇದೆ. ನಿತ್ಯ ನೂರಾರು ಜನರ ಜೀವನವನ್ನು ಇಲ್ಲಿನ ಜೂಜು ಹಾಳು ಮಾಡುತ್ತವೆ. ಜೂಜಾಡುವಾಗ ಸ್ವಯಂ ನಿಯಂತ್ರಣವಿರಲಿ ಎಂಬರ್ಥದ ಬೋರ್ಡುಗಳು, ಧೂಮಪಾನ ಹಾನಿಕರ ಎಂಬ ಬೋರ್ಡಿನಷ್ಟೇ ಪರಿಣಾಮಕಾರಿ. ಪ್ರತಿಬಾರಿ ಸೋತಾಗಲೂ ಮತ್ತೆ ಗೆಲ್ಲುವ ನಿರೀಕ್ಷೆಯೊಂದಿಗೆ, ಗೆದ್ದಾಗ ಇನ್ನೂ ಹೆಚ್ಚು ಗೆಲ್ಲುವ ದುರಾಸೆಯೊಂದಿಗೆ ಆಡುವ ಜನರಲ್ಲಿ ಗೆದ್ದವರೆಷ್ಟೋ ಸೋತವರೆಷ್ಟೋ !? ಈ ಮಾಯಾನಗರಿಗೆ ಬಲಿಯಾದ ಮಾನವರ ಸಂಖ್ಯೆಗೆಂತೂ ಖಂಡಿತ ಲೆಕ್ಕವಿಲ್ಲ. ಅಷ್ಟಿದ್ದರೂ ಒಂದು ನೆಮ್ಮದಿಯ ಅಂಶವೆಂದರೆ, ಈ ರಾಜ್ಯದ ಉಳಿದ ಕೆಲವೆಡೆ ವೇಶ್ಯಾವಾಟಿಕೆಯನ್ನ ಕಾನೂನುಬದ್ಧಗೊಳಿಸಿದ್ದರೂ ವೇಗಸ್ಸಿನಲ್ಲಿ ಅದಕ್ಕೆ ಅನುಮತಿಯಿಲ್ಲ.
ನೋಡಿ ನೆವಾಡಾ ಬಗ್ಗೆ ಹೇಳುತ್ತಾ ಬರೀ ವೇಗಸ್ಸಿನ ಬಗ್ಗೆ ಪುರಾಣ ಕೊಚ್ಚಲು ಶುರುಮಾಡಿದೆ. ಅಲ್ಲಾ, ಕರ್ನಾಟಕದ ಸುಮಾರು ಒಂದೂವರೆ ಪಟ್ಟು ದೊಡ್ಡದಿರುವ ಈ ನೆವಾಡಾ ರಾಜ್ಯದ ದಕ್ಷಿಣ ತುದಿಯಲ್ಲಿನ ಲಾಸ್ ವೇಗಸ್ ಎಂಬ ನಗರ ಬಿಟ್ಟರೆ ಹೇಳಲು ಇನ್ನೇನಿದೆ? ಖಂಡಿತವಾಗಿಯೂ ನನಗೆ ಗೊತ್ತಿಲ್ಲ. ಮುಕ್ಕಾಲು ಭಾಗ ಮರುಭೂಮಿ ಮತ್ತು ಅರೆ ಮರುಭೂಮಿಗಳಿಂದಲೇ ತುಂಬಿದೆ. ಒಂದು ಕಾಲದಲ್ಲಿ ಅತೀ ಕಡಿಮೆ ಜನಸಂಖ್ಯೆ ಹೊಂದಿದ್ದ ಇದು ಕಾಲಾನಂತರದಲ್ಲಿ ವೇಗಸ್ಸಿನ ಕಾರಣದಿಂದ ಜನಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡಿತು. ಗಣಿಗಾರಿಕೆಯಿಂದ ಗಣನೀಯ ಪ್ರಮಾಣದ ಆದಾಯ ಬರುವುದು ಹೌದಾದರೂ ರಾಜ್ಯದ ಆದಾಯದ ದೊಡ್ಡ ಪಾಲು ಬರುವುದು ಪ್ರವಾಸೋದ್ಯಮದಿಂದ, ಅದರಲ್ಲೂ ವೇಗಸ್ಸಿನಿಂದ. ಹೇಗೆ ಏನು ಎಂದು ಮೇಲೆ ಸಾಕಷ್ಟು ಹೇಳಿದೀನಿ. ಇನ್ನೇನೂ ಹೇಳಲು ಉಳಿದಿಲ್ಲ.
ನಿಮ್ಮಲ್ಲಿ ಯಾರಾದರೂ ವೇಗಸ್ ಸುತ್ತಮುತ್ತಲಿನ ಪ್ರದೇಶಗಳ ಬಿಟ್ಟು ಉಳಿದ ಭಾಗಗಳಿಗೆ ಭೇಟಿಕೊಟ್ಟಿದಿದ್ದರೆ ಅಥವಾ ಮುಂದೆ ಭೇಟಿಕೊಟ್ಟರೆ ದಯವಿಟ್ಟು ನಿಮ್ಮ ಅನುಭವಗಳ ಕುರಿತು ಹಂಚಿಕೊಳ್ಳಿ. ತಿಳಿದುಕೊಳ್ಳಲು ಕುತೂಹಲಿಯಾಗಿದ್ದೇನೆ.
ವಿ.ಸೂ:- ಸ್ಟ್ರಿಪ್ಪಿನ ಶುರುವಿನ ಸ್ವಾಗತ ಫಲಕದ ಚಿತ್ರವಿದು.
-ಗಿರಿಧರ್ ಭಟ್ ಗುಂಜಗೋಡು
ಸಾಫ್ಟ್ ವೇರ್ ಉದ್ಯೋಗಿ ಹಾಗೂ ಹವ್ಯಾಸಿ ಬರಹಗಾರ
ಸಿದ್ಧಾಪುರ
ಅಮೇರಿಕನ್ ಯಾತ್ರೆ; ಶ್ರೀಮಂತರ ನಾಡಿನ ಬಡ ರಾಜ್ಯ ಅರ್ಕನ್ಸಾ – ಬಿಲ್ ಕ್ಲಿಂಟನ್ ಹುಟ್ಟಿದ ನೆಲ, ವಾಲ್ ಮಾರ್ಟ್ ನ ಕೇಂದ್ರ ಸ್ಥಾನ
las vegas